ಒಂದಿಷ್ಟು ಮಳೆ, ಒಂದಿಷ್ಟು ಪ್ರೀತಿ

ವಿಶೇಷ ಲೇಖನ

ಒಂದಿಷ್ಟು ಮಳೆ,

ಒಂದಿಷ್ಟು ಪ್ರೀತಿ

ಕೆ.ಶಿವು.ಲಕ್ಕಣ್ಣವರ

ಒಂದಿಷ್ಟು ಮಳೆ, ಒಂದಿಷ್ಟು ಪ್ರೀತಿ, ಒಂದಿಷ್ಟು ತಮಾಷೆ ಮತ್ತು ಹತಾಷೆಯೂ..! ಏಕೊ, ಏನೋ ಈ ಮಳೆ ನನ್ನನ್ನು ಬಿಡದಂತೆ ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟಿದೆ..!

ಮೊನ್ನೆ ಜಿರಿಜಿರಿ ಮಳೆಯಲ್ಲೂ ನನಗೆ ಏಕೊ ಏನೋ ಅವಳನ್ನು ನೋಡಬೇಕು ಎಂದು ಕಾಯಿಸಿತು ಮತ್ತು ಕಾಡಿಸಿತು ಈ ಮಳೆ. ಮನೆಯಲ್ಲೂ ಹೇಳದೇ ಕೇಳದೇ ಬಸ್ಸು ಹತ್ತಿ ಹೊರಟೆನು. ಆಮೇಲೆ ಅಯ್ಯೊ ಸಂಜೆ ಹೊತ್ತು ಮನೆಯಲ್ಲಿ ಹೇಳದೇ ಮತ್ತು ಕೇಳದೇ ಬಂದಿದ್ದೇನೆಂದು ನೆನಪಾಗಿ ಬಸ್ಸಿನಿಂದ ಫೋನು ಮಾಡಿದೆ ಮನೆಗೆ.

ಅಲ್ಲಿ ನೋಡಿದರೆ ಇವನು ಡ್ರೈವರ್‌ ಯಾವುದೋ ಟೆನ್ಷನ್ನಿನಲ್ಲಿ ಗಾಡಿಗೆ ವಿಪರೀತ ಬ್ರೇಕು ಹಾಕಿಕೊಳ್ಳುತ್ತಾ ಗಾಡಿಯನ್ನು ಓಡಿಸುತ್ತ ಇದ್ದನು. ನಿನ್ನ ನೋಡಿದೆನಲ್ಲ ನಿನ್ನೆ ಅದಕ್ಕೆ ಹೀಗೆಯೇ ಎಂದು ತಮಾಷೆ ಮಾಡಿದನು.

ನಮ್ಮ ಪ್ರೀತಿ, ದೂರವಿರುವ ಹಳಹಳಿ, ಭೇಟಿಗಳ ಆನಂದ, ತರಲೆಬುದ್ಧಿ, ಕನ್ಫ್ಯೂಶನ್, ಇವನ್ನೆಲ್ಲ ಇದರಾಚೆ ನಿಂತು ಕಂಡು ಬರೆದುಕೊಳ್ಳುವ ಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡು ನಕ್ಕೆವು. ಸಂಜೆ ವಿಪರೀತ ಖಾರ ಹಾಕಿದ ಮುಸುಕಿನಜೋಳ ತಿಂದು ಬಾಯುರಿಸಿಕೊಂಡು ಓಡಾಡಿದ್ದಾಯಿತು..!

ರಾತ್ರಿ ಗೆಳತಿ ಕುಶಲಾ ಮಾಡಿದ ಸಿಲ್ಕಿನಷ್ಟು ಮೆತ್ತಗಿನ ಬಿಸಿಬಿಸಿ ರಾಗಿಮುದ್ದೆ, ಮದರಾಸು ಈರುಳ್ಳಿ ಧಂಡಿಯಾಗಿ ಹಾಕಿ ಮಾಡಿದ ಸಾರುಣ್ಣುತ್ತ ಜಗಳವಾಡಿಕೊಳ್ಳುತ್ತ ಕೂತಿದ್ದೆವು..!ಮಳೆಚಳಿ ಆ ಪುಟ್ಟ ಮನೆಯೊಳನುಗ್ಗುವ ಧಾವಂತದಲ್ಲಿತ್ತು. ಏನಾದರು ಬರೆಯಬೇಕು ಅಂದುಕೊಂಡೆನು..!

ಮುಂಜಾನೆ ವಾಪಾಸು ಬಸ್ಸು ಹತ್ತುವಾಗಲು ಮಳೆ..! ಸ್ವೆಟರಿಟ್ಟುಕೊಳ್ಳದೇ ಬಂದ ನನಗೆ ನಾನೇ ಬೈದುಕೊಳ್ಳುತ್ತ, ಗಡಗಡ ನಡುಗುತ್ತ ಕಿಟಕಿಸೀಟು ಹಿಡಿದೆನು.

ಮುಂದೆ ಇಬ್ಬರು ಹೆಂಗಸರು ಛಳಿಯನ್ನು ತಮ್ಮ ಮಾತುಗಳಿಂದಲೆ ಓಡಿಸಬೇಕು ಎಂದು ತೀರ್ಮಾನ ಮಾಡಿದವರ ಹಾಗೆ ಜೋರಾಗಿ ಮಾತನಾಡುತ್ತಿದ್ದರು. ಗಂಡನನ್ನು ಯಾಮಾರಿಸಿ ಹೊಸತಾಗಿ ಮಾಡಿಸಿದ ಓಲೆಯ ಡಿಸೈನು, ಲೇಡೀಸ್ ಟೈಲರನು ಹೊಲಿದ ಇಂಟರ್ಲಾಕ್ ಸರಿಯಿರದ ರವಿಕೆ, ಮೈದುನನ ಹೆಂಡತಿಯ ಧೂರ್ತತೆ, ತಮ್ಮನ ಮುರಿದ ಮದುವೆ ಇತ್ಯಾದಿಗಳ ಬಗ್ಗೆ ಇಡೀ ಬಸ್ಸಿನವರಿಗೆ ತಿಳಿದುಹೋಗಿ ಎಲ್ಲರೂ ಮುಸಿಮುಸಿ ನಗಾಡುತ್ತಿದ್ದರು..!

ನಾನು ಎಲ್ಲಿ ಜೋರಾಗಿ ಅಟ್ಟಹಾಸಗೈದುಬಿಡುವೆನೋ ಎಂದು ಭಯವಾಗಿ ಕಿಟಕಿ ತೆರೆದು ಹೊರನೋಡಿದೆ. ಹೈವೇ ಒದ್ದೆ ಹಾವಿನ ಹಾಗೆ ಮಲಗಿಕೊಂಡಿತ್ತು. ಹೆಂಗಸೊಬ್ಬಳು ತನ್ನ ಮಗುವನ್ನು ಅವುಚಿಕೊಂಡು ಅದಕ್ಕೆ ಮಳೆ ಬೀಳದ ಹಾಗೆ ಸೆರಗು ಹೊದಿಸಿಕೊಂಡು ಒಂದಿಷ್ಟು ಕರ್ಚೀಫು ಹಿಡಿದು ನಾನು ಕೂತಿದ್ದ ಬಸ್ಸಿನ ಕಿಟಕಿಯ ಹತ್ತಿರ ಬಂದಳು..!

ಹತ್ರುಪಾಯಿ ಕಣಮ್ಮಾರೇ ಬೆಳಗ್ಗಿಂದ ತಿಂಡಿ ತಿಂದಿಲ್ಲ. ಮಗೀಗೇನೂ ಇಲ್ಲ. ಕರ್ಚೀಪು ತಗಣಿ ಎಂದಳು. ಹತ್ತು ರೂಪಾಯಿ ಕೊಟ್ಟೆ. ಮೂರು ಕರ್ಚೀಫು, ಗಂಡಸರು ಉಪಯೋಗಿಸುವಂಥದು, ಕೊಟ್ಟಳು. ಕಿಟಕಿ ಗಾಜು ಸರಿಸಿ ಮುಚ್ಚಿದೆ. ಮಳೆಹನಿ ಬಿದ್ದು ಆಚೆಗಿನ ಪ್ರಪಂಚವೆಲ್ಲ ಮಬ್ಬಾಯಿತು. ಆ ಹೆಂಗಸು ಮಬ್ಬಿನಲ್ಲಿ ಎಲ್ಲೋ ತಿಂಡಿಯರಸುತ್ತ ಕರಗಿದಳು..!

ನೆನೆದುಕೊಂಡೆ ಮನೆಗೆ ಬಂದರೆ ಹಾಲಿನಲ್ಲಿ ಹೆಣ್ಣುಮಗಳೊಬ್ಬಳು ಕುಳಿತಿದ್ದಳು. ನಾನು ಸರಸ್ವತಿ, ನೆನಪಾಯಿತೇನ್ರಿ? ಅಂದಳು. ಮನೆ ರಿಪೇರಿಯ ಸಮಯದಲ್ಲಿ ಪರಿಚಯವಾಗಿದ್ದ ಕಾರ್ಪೆಂಟರನೊಬ್ಬನ ಹೆಂಡತಿ ಆಕೆ. ಹೂಂ, ಗಿರಿ ಹೆಂಡ್ತಿ ಅಲ್ವ? ಎಂದೆನು. ಸಪ್ಪಗೆ ನಕ್ಕಳು. ಯಾಕೆ ಒಂಥರಾ ಇದೀಯ, ಹುಷಾರಿಲ್ವ? ಎಂದು ವಿಚಾರಿಸಿದೆ..!

ಇಲ್ಲಕ್ಕ, ಇವ್ರು ಅದೇನೋ ದುಡ್ಡು ಬಾಕಿ ವಸೂಲಿ ಗಲಾಟೇಲಿ ಸಿಕ್ಕಿಹಾಕ್ಕೊಂಡು ಜೈಲಲ್ಲಿದಾರೆ. ಇನ್ನು ಒಂದೆರಡು ತಿಂಗಳು ಈಚೆ ಬರೋಹಾಗಿಲ್ಲ. ಮನೆಕಡೆ ತುಂಬ ಕಷ್ಟ. ಮಗನ್ನ ಸ್ಕೂಲಿಗೆ ಸೇರ್ಸೋಕೂ ತಾಪತ್ರಯ..!

ನಾನೂ ಒಂದ್ಕಡೆ ಕೆಲಸ ನೋಡ್ಕೊಂಡಿದೀನಿ. ಏನು ಮಾಡೋಕೂ ತೋಚ್ತಾನೇ ಇಲ್ಲ. ನಾನು ಇವರತ್ರ ಮೊನ್ನೆ ಹೋಗಿ ತುಂಬ ಅತ್ತುಬಿಟ್ಟೆ. ನಿಮ್ಮ ಅತ್ತೆಮಾವನವರ್ನ ನೆನಪು ಮಾಡಿಕೊಂಡು ಒಂದುಸಾರಿ ಅಲ್ಲಿ ಹೋಗು ಅಂದ್ರು. ಬಂದೆ, ಎಂದಳು..!

ಮಾವ ಆಕೆಯ ಕೈಗೆ ಶಕ್ತ್ಯಾನುಸಾರ ದುಡ್ಡುಕೊಟ್ಟು ಈಚೆ ಬಂದಮೇಲೆ ಕರಕೊಂಡು ಬಾ ಅವನ್ನ, ಹೋಪ್ಲೆಸ್ ಫೆಲೋ, ಕ್ಯಾಕರಿಸಿ ಉಗೀಬೇಕು, ಸ್ವಲ್ಪಾನೂ ಜವಾಬ್ದಾರಿ ಬೇಡ್ವೆ..? ಎಂದು ಹೇಳುತ್ತಿದ್ದರು..!

ಈ ಮಳೆಗಾಲ ಆಕೆಯ ಪಾಲಿಗೆ ಎಷ್ಟು ಅಸಹನೀಯವಾಗಿರಬಹುದು ಎಂದುಕೊಳ್ಳುತ್ತ ಬೇಸರವಾಯಿತು. ಹಾಗೇ ಸುಮ್ಮನೆ ಕೂತವನು ನಾಲಕ್ಕು ಸಾಲು ಗೀಚಿದೆ..!

ಅವನ ಅವಳ ಪ್ರತಿ ಭೇಟಿಯಲ್ಲೂ

ಕಳೆದ ಮಳೆಗಾಲದ ನಡುಕದ ನೆನಪು

ತಂಪೇರಿದಾಗ ಮಿಡುಕಾಡುತ್ತ ಟ್ರಂಕುಬಿಚ್ಚಿ

ಸ್ವೆಟರು ಶಾಲು ಸಾಕ್ಸು ಮಂಕಿಕ್ಯಾಪು

ಎಲ್ಲ ತೆಗೆದು ಹಾಕಿಕೊಂಡರು

ಅವನ ಕೌದಿಯ ಕಾವಿಗೆ ಮಾತ್ರ

ಅವಳ ಚಳಿ ಓಡಿಸುವ ತಾಕತ್ತು“..!

ಹೀಗೆಯೇ ಎನೇನೋ ಮಳೆಯ ಬಗೆಗೆ ಯೋಚಿಸುತ್ತಾ ಕೂತೆನು..!

———————————-

ಕೆ.ಶಿವು.ಲಕ್ಕಣ್ಣವರ

Leave a Reply

Back To Top