ಕಾವ್ಯ ಸಂಗಾತಿ
ಮತ್ತೆ ಮಳೆ
ನಾಗರಾಜ್ ಹರಪನಹಳ್ಳಿ.
ಮತ್ತೆ ಮಳೆ
ಮತ್ತೆ ಜೂನ್ ಮಳೆ
ಇಳೆಯ ಬೆತ್ತಲೆಗೆ ಧೋ ಎಂದು ಸುರಿವ
ಸುರಿದಷ್ಟೂ ದಣಿಯದ
ದಣಿಯದಷ್ಟೂ ಸರಿ ಸರಿದು ಸುರಿವ ಮಳೆಯೇ
ಸುರಿವ ಮಳೆಗೆ ಬಾಯ್ದೆರೆವ ಇಳೆಯೇ
ಕುಡಿದಷ್ಟು ತಣಿಯದ
ತಣಿದರೂ ಕುಡಿಯುವ ಇಳೆಯೇ
ಪ್ರತಿ ಮಳೆಗಾಲವ ಕರೆಯುವ ಇಳೆಯೇ
ಬಾ ಮಳೆಯೆ ಬಾ
ನನ್ನ ಬೆನ್ನು ತೊಳೆ
ಮುಖವ ಮುದ್ದಿಸುತ
ಮತ್ತೆ ಮತ್ತೆ ತೊಳೆ
ಎದೆಯ ಕುಳಿಯ ತಣಿಯುವಂತೆ ಸುರಿ
ಮತ್ತೆ ಮತ್ತೆ ಸುರಿ
ಸುರಿಯುತ್ತಲೇ ಇರು ಎನ್ನುವ ಇಳೆ
ಧೋ ಎಂದು ಧರೆಗೆ ಮುತ್ತಿಡಯವ ಮಳೆ
ಸುಯ್ ಗುಡುವ ಗಾಳಿ
ಜುಳು ಜುಳು ಎನ್ನುವ ತೊರೆ
ಕಿಂವ್ ವ್ಹ್ ವ್ಹ್ ಎನ್ನುವ ಜೀರುಂಡೆ
ಗಂವ್ ವ್ಹ್ ವ್ಹ್ ಗುಡುವ ಧರೆ
ಹಗಲು ಕಪ್ಪನೆ ಇರುಳಾಗುವ
ಇರುಳು ಕಾರಿರುಳಾಗುವ
ವರುಣವೇ ಸುರಿಯುತ್ತಿರು
ಧರೆಯತ್ರಿಯ ಕುಳಿಯ ತುಂಬಿ ತುಳುಕಿಸು
ಕೊನೆಯ ಅಹವಾಲು ;
ಮಳೆಯೇ ಇಳೆಯ ಕಾಲು ತೊಳೆ
ಹಸಿರ ಸೀರೆ ಉಡಿಸು
ಗಂಧವತಿ ಹಣೆಗೆ ಹರಿಶಿಣವಿಡು
ಕೊರಳಿಗೆ ಹೂರಾಶಿಯ ಮುತ್ತಿಡು
ಮಳೆಯೇ ಸುರಿಯುತ್ತಿರು
ಸುರಿಯುತ್ತಲೇ ಇರು
ವರುಷಕು ಹರುಷಕು
ಕುಣಿ ಕುಣಿದು ಮರಳುತ್ತಿರು
————————
ಮತ್ತೆ ಮಳೆ……….
ಒಲವ ಮಳೆ. ಚೆನ್ನಾಗಿದೆ.
ಥ್ಯಾಂಕ್ಯೂ