ಕಾವ್ಯ ಸಂಗಾತಿ
ಕಾಫಿಯಾನ ಗಜಲ್
ನಯನ. ಜಿ. ಎಸ್
ಕನಸೊಂದು ಹಣತೆ ಪ್ರಜ್ವಲಿಸುತಿರಲು ಕಾಯಬೇಕದನು ಆರದಂತೆ
ಬದುಕೊಂದು ಗಾಢ ಕಲೆ ನಟಿಸಬೇಕದನು ಅಧ್ವಾನ ಆವರಿಸದಂತೆ
ಚಿತ್ತ ಭಿತ್ತಿಯೊಳು ಪಾತ್ರಗಳು ಅಗಣಿತ ವಿಹರಿಸು ವಿಹಂಗಮತೆಯಲಿ
ಮನವೊಂದು ಹೊತ್ತಗೆ ಬರೆಯಬೇಕದನು ನಿಸ್ಸಾರತೆ ನುಸುಳದಂತೆ
ಒಸರುತಿದೆ ಭವ್ಯ ಲಾಲಿತ್ಯ ಎಡವಿ ಬಿದ್ದೆದ್ದ ವ್ಯಥೆಗಳ ಜಾಲವ ಸೀಳುತ
ಮಿತಿ ಮೀರುತಿದೆ ಆಕಾಂಕ್ಷೆ ಹಿಡಿದಿಡಬೇಕದನು ಸ್ವಾರ್ಥ ಕಸಿಯದಂತೆ
ಪುಟಿಯುವ ಎದೆಗುದಿಯು ಭಾಷ್ಯಕೂ ದೂರ ಮೌನವೇ ಸರ್ವಸಮ್ಮತ
ಸಂದ ಹೆಜ್ಜೆಗಳಿತ್ತಿಹುದು ಕೆಚ್ಚು ಘನಗೊಳಿಸಬೇಕದನು ಸವೆಯದಂತೆ
ಪಲ್ಲಟಗಳಿಗೆ ನೆಚ್ಚಿ ಉಸುರುವ ಅಸುವಿನಲಿ ಖಾತ್ರಿಯಿಹುದು ‘ನಯನ’
ಚಣ ಚಣವು ಹರ್ಷಕೆ ಸ್ವತ್ತು ವ್ಯಯಿಸಬೇಕದನು ಸಾಫಲ್ಯ ಲಭಿಸುವಂತೆ