ಕಾವ್ಯ ಸಂಗಾತಿ
ಮಳೆಯ ಗೆಳತಿ
ಟಿ.ದಾದಾಪೀರ್ .ತರೀಕೆರೆ
ನೆನೆಯ ಬೇಕೆಂದಿರುವೆ
ನಿನ್ನ ಪ್ರೀತಿಯ
ಮಾನ್ಸೂನ್ ಮಳೆಯ
ಮುಸಲ ಧಾರೆಯಲ್ಲಿ
ನೆಲ ತಣಿದು
ಜೀವ ಕಳೆ ತಳೆದು
ಲಕ ಲಕಿಸುವಂತೆ
ಉನ್ಮಾದದ ಹಚ್ಚ ಹಸುರಿನಂತೆ
ಭೂಮಿ ಬಗೆದು
ಅನ್ನ ಬಿತ್ತಿದ
ರೈತನ ಕನಸುಗಳು
ಮಳೆಗೆ ಕಾದಂತೆ ಬಣ್ಣ ತುಂಬಿ
ನನಗೂ ಅದೇ ಆಸೆ
ನೀನು ಸುರಿಯಬಹುದು
ಒಮ್ಮೇಲೆ …
‘ನನ್ನೀಂದಲೇ ಆವಿಯಾಗಿ
ಮೋಡ ವಾದ ಹೃದಯದ ತೇವವಲ್ಲವೇ ನೀನು’
ಮಳೆಗಾಲಕೆ ನೀನು
ಶೃಂಗರಿಸಿ ಕೊಳ್ಳುವ
ತರವೇ…
ರಸಮಯ
ಕಡುಗಪ್ಪು ‘ ಐ-ಲೈನರ್’
ಹಚ್ಚಿದಂತೆ
ಬಾನಲ್ಲಿ ಒಂದಾದ ಮೋಡಗಳು
ಸಂಜೆ ಮಿಥುನಕೆ
ಫಳ ಫಳಿಸಿದ ಮಿಂಚುಗಳ
ಹುಟ್ಟಿಸಿದಂತೆ
ನೀನು ಬೆಳಕು ಮೂಡಿಸಿ
ನನ್ನೆದೆಯಲಿ ಹೊಳೆದಿರುವೆ
ಈಗ ಮಳೆಗಾಲ
ಬಿಡು ಬೀಸಾಗಿ ಸುರಿ
ಜೀವಾಮೃತ ನೆಲವ ಅಪ್ಪಲಿ
ಘಮಲು ಎಲ್ಲೆಡೆ ಹಬ್ಬಲಿ
ಹೊಸ ಬದುಕೊಂದು
ತೆನೆ ಹೊಡೆದು ಹೊರ ಬರಲಿ
ರೋಹಿಣಿ, ಭರಣಿ, ಕೃತ್ತಿಕೆ
ಏನಾದರೂ ಹೆಸರಿಸಲಿ
ಕ್ಯಾಲೆಂಡರ್ ಗಳು
ನನಗೆ ಮಾತ್ರ ನೀನು
ಮುಂಗಾರು ಎಂಬ
ಮಳೆಯ ಗೆಳತಿ