ನನ್ನೂರ ಮಳೆ

ಕಾವ್ಯ ಸಂಗಾತಿ

ನನ್ನೂರ ಮಳೆ

ಡಾ.ಡೋ ನಾ ವೆಂಕಟೇಶ

ಅಂದು
ಶಿವಮೊಗ್ಗೆಯ ಮಳೆ
ಕಾಲ
ನನ್ನ ಶಾಲೆಯಿಂದ ಕಾಲೇಜಿನ
ತನಕ ಬರೇ ಮಾಯಾಜಾಲ
ಕಂಡಾಗ ಸುಂಕ ಕಾಣದಾಗ ಬಿಂಕ

ನನ್ನೂರ ಹೊಳೆ
ಮೇ ಇಪ್ಪತ್ತುನಾಲ್ಕಕ್ಕೆ
ಗುಡುಗುಡಿಸಿ ಬಂದು ವಿದ್ಯುತ್ತ್ ನಿಂತು
ಮನೆಯೆಲ್ಲ ದೀವಟಿಗೆ

ಹೊರಗೆ
ಶಾಲೆಗೆ ಹೊರಟ ನಾವು
ಮಕ್ಕಳು
ಬರೇ ಗೊಣ್ಣೆ ಮೂಗಿಗೂ
ಸುರಿವ ಮೂಗಿಗೂ
ಬಿರುಸು ಮಳೆಗೂ
ಬಲು ನಂಟು

ಈಗ ಹಾಗಲ್ಲ
ಜೂನ್ ಒಂದರ ಬಾರದ
ಮಳೆಗೆ ನನ್ನ ಮೊಮ್ಮಗನ
ಹೊಸ ಜರ್ಸಿ ,ಅಂತರ್ಜಾಲದಲ್ಲೆ
ವರ್ಷಾ ಧಾರೆ
ದೂರದೂರಿನ ಮಳೆಗೆ
ಇಲ್ಲಿ ಹಿಡಿದ ಕೊಡೆ

ಮಳೆ ಮುಂಗಾರು
ಅದರ ಸಿಂಗಾರ
ಅದರ ಪ್ರಹಾರ ಈಗ
ಬೇರೆಯದೇ ಪ್ರಕಾರ

ಕರಾರುವಕ್ಕಾದ ದಿನ ಗಂಟೆ
ನಿಮಿಷ
ಕರಾರುವಕ್ಕಾದ ಜಾಗ
ಗುಡುಗು ಸಿಡಿಲು !

ಈಗ ಮಳೆಯಲ್ಲೂ
ನೆನೆಯಬಹುದು
ಗಾಂಧೀ ಬಜಾರಿನಲ್ಲಿ
ನೆನೆಯಬಹುದು ಎದೆಮಟ್ಟ
ನಿಂತ ನೀರಿನಲ್ಲಿ
ಕಸ ಕಡ್ಡಿ ತ್ಯಾಜ್ಯ
ತೊಳೆಯುತ್ತಿರುವ
ತುಂಗೆಯಲ್ಲಿ

“ಗಂಗಾ ಸ್ನಾನ
ತುಂಗಾ ಪಾನ “
(ಮಾಡಿದವರ ಪಾಪ
ಆಡಿದವರ ಬಾಯಲ್ಲಿ)

ಆದರೂ
ಈಗಲೂ ಕಾಯುತ್ತಾರೆ ಜನ
ಕಾತುರದಿಂದ
ಮುಂಗಾರಿನ ಹಂಗಾಮಿಗೆ
ಚಾತಕ ಪಕ್ಷಿಯಾಗಿ !

ಮತ್ತೆಂದು ಈ ಮಳೆ
ಹಾಳೆ ಹೊಸತಾಗುವುದೆಂದು!!

ಶಿವಮೊಗ್ಗೆಯ ಮಳೆ ಬರೆ
ಪಳೆಯುಳಿಕೆ
ಒನಪು ವಯ್ಯಾರದ ಝಲಕು ಬರೇ
ಮೆಲುಕು ಅಷ್ಟೆ!!


14 thoughts on “ನನ್ನೂರ ಮಳೆ

  1. “ನನ್ನೂರ ಮಳೆ “ ಬಹಳ ಚೆನ್ನಾಗಿ ಬಂದಿದೆ.
    ಕವಿತೆಯನ್ನು ಓದಿ ಮನಸ್ಸಿಗೆ ಆನಂದವಾಯಿತು ವೆಂಕಣ್ಣನವರೆ.

    1. ಧನ್ಯವಾದಗಳು ಮಂಜಣ್ಣ
      ಗೆಳೆಯರ ಪ್ರೋತ್ಸಾಹ ಸದಾ ಉತ್ಸಾಹ!

  2. ನಿಮ್ಮ ಮಳೆಯ ಕವನ ಬಂದು, ಇಳೆ ತಂಪಾಯ್ತು….

  3. ನಮ್ಮ ಶಿವಮೊಗ್ಗ ಯಾವಾಗಲೂ ಸುಂದರ, ನಿಮ್ಮ ಕವಿತೆಯ ಪದಗಳಲ್ಲಿ ಇನ್ನೂ ಸುಂದರ.

Leave a Reply

Back To Top