ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಬಿರುಬಿಸಿಲಿಗೆ ಸುಡುತ್ತಿದೆ ತನು ಮನ ನಿನ್ನ ಅಗಲಿಕೆಯು ಜಿನುಗಬಾರದೆ ನಿನ್ನ ಪ್ರೀತಿಯ ಧಾರೆ
ಹೆಪ್ಪುಗಟ್ಟಿದ ಕೋಪ ಗುಡುಗು ಮಿಂಚುಗಳಿಂದ ಕರಗಿಸಬಾರದೆ ನಿನ್ನ ಪ್ರೀತಿಯ ಧಾರೆ

ನಿನ್ನ ಕಾಯುವಿಕೆಯಲ್ಲಿ ಭಾವನೆಗಳು ಕಳಚಿ ಬರಿದಾಗಿದೆ ಶಿಶಿರ ಋತುವಿನಂತೆ
ನಿನ್ನೊಲುಮೆಯ ಮುಂಗಾರಿನ ವರುಷ ಧಾರೆ ಬರಬಾರದೆ ನಿನ್ನ ಪ್ರೀತಿಯ ಧಾರೆ

ಮನ ನೊಂದು ವಿರಹದಲ್ಲಿ ಬರಡಾಗಿದೆ ಇನಿಯ ನೀನೊಮ್ಮೆ ಒಪ್ಪಿಕೊ
ಶೃಂಗಾರಗೊಂಡ ನವವಧುವಿನಂತೆ ಆಗುವೆ ಹಸಿರು ಆಗಬಾರದೆ ನಿನ್ನ ಪ್ರೀತಿಯ ಧಾರೆ

ನಮ್ಮಿಬ್ಬರ ಮಿಲನ ಬಯಸುತ್ತಿರುವರು ನಮ್ಮನ್ನು ಆಶ್ರಯಿಸಿ
ಉತ್ತಿ ಬಿತ್ತಿ ಫಸಲಿಗೆ ಸ್ವಾತಿ ಮುತ್ತುಗಳು ಸುರಿಸಬಾರದೆ ನಿನ್ನ ಪ್ರೀತಿಯ ಧಾರೆ

ನೀ ಕೊಟ್ಟ ವಚನಕ್ಕೆ ನಂಬಿ ಬದುಕುತ್ತಿರುವೆ ಬಂದೆ ಬರುವೆ ಎಂದು
ಉತ್ತರಿ ಇಳೆಯಾಗಿ ಅಪ್ಪಿ ನಲಿಯಬಾರದೆ ನಿನ್ನ ಪ್ರೀತಿಯ ಧಾರೆ

ದೇಹ ನಾನು ಜೀವ ನೀನು ಬಳಸಿ ನಿಂತ ಬಳ್ಳಿಗಳಿಗೆ ಬಲವಾಗಬೇಕಿದೆ
ಮೇಘರಾಜನೇ ಸೋನಿ ಸುರಿತವಾಗಿ ಮುದ ನೀಡಬಾರದೆ ನಿನ್ನ ಪ್ರೀತಿಯ ಧಾರೆ

ಅತಿವೃಷ್ಠಿ ಅನಾವೃಷ್ಟಿಯ ಹಾಹಾಕಾರಕ್ಕೆ ಬಲಿ ಆಗುವುದು ಏಕೆ “ಮಾಜಾ”
ಪ್ರೀತಿಸುವ ಮನಕ್ಕೆ ತುಂತುರು ಹರುಷದ ಹನಿಗಳು ತರಬಾರದೆ ನಿನ್ನ ಪ್ರೀತಿಯ ಧಾರೆ


Leave a Reply

Back To Top