ಗಝಲ್
ಡಾ.ಗೋವಿಂದ ಹೆಗಡೆ

ನಿನ್ನ ಕಣ್ಣೋಟ ತಾಕಿ ಇಲ್ಲಿ ಬೆಳಕು ಹರಿದಿದೆ
ನಿನ್ನ ಕರಸ್ಪರ್ಶದಲ್ಲಿ ಪುಲಕ ಹೊನಲಾಗಿದೆ
ಮಿಂಚು ಗೂಳಿ ಮೈಯನಿಡೀ ಉತ್ತು ಬಿತ್ತಿದೆ
ಫಸಲು ಹೇಗಿರಬಹುದು ಕಾತರ ಕುಡಿಯಾಗಿದೆ
ಎಂತಹ ಕರಿ ದುಗುಡ ಮಡುವಾಗಿತ್ತಿಲ್ಲಿ
ನಿನ್ನ ಕೈ ಸೋಕಿದ್ದೇ ತಡ ಎಲ್ಲ ಬದಲಾಗಿದೆ
ಸುಧೆಯನುಂಡವರು ಮಾತ್ರ ಅಮರರೇನು
ನೀನು ತಂದ ಅನುರಾಗಕ್ಕೆ ಸಾವೆಲ್ಲಿದೆ
ಹಿಗ್ಗನ್ನು ಬಿತ್ತಿ ಸುಗ್ಗಿ ಮಾಡುವ ರೀತಿ ನಿನ್ನದೇ
ಸೌದಾಮಿನಿ ನೀನು ಈಗ ಕಣಜ ತುಂಬಿದೆ
************