ಅಂಕಣ ಸಂಗಾತಿ

ಗಜಲ್ ಲೋಕ

ನಂರುಶಿಯವರ ಗಜಲ್ ನಂದನವನ

  ಹಲೋ ನನ್ನ ಗಜಲ್ ಮನಸುಗಳೆ… ನಿಮಗೆಲ್ಲರಿಗೂ ಮಲ್ಲಿಯ ಹೃನ್ಮನದಿ ಸಲಾಮ್…

ಕಾಯುವುದು, ಕನವರಿಸುವುದು, ನಿರೀಕ್ಷಿಸುವುದು, ಕಂಬನಿ ಮಿಡಿಯುವುದು ಪ್ರೇಮಿಗಳೊಂದಿಗೆ ಕಲಾರಸಿಕರ ಸ್ವತ್ತೂ ಕೂಡ ಹೌದು. ಅಂತೆಯೇ ನೀವೆಲ್ಲರೂ ಈ ಗುರುವಾರದಂದು ಗಜಲ್ ಗೋ ಒಬ್ಬರ ರುಬರು ಗಾಗಿ ಹಂಬಲಿಸುತಿರುವಿರಿ ಅಲ್ಲವೇ…? ನಿಮ್ಮ ಇಚ್ಛೆಯಂತೆ ಇಂದು ಪ್ರತಿಭಾನ್ವಿತ ಗಜಲ್ ಗೋ ಅವರ ಚಂದದ ಹೆಜ್ಜೆ ಗುರುತುಗಳೊಂದಿಗೆ ನಾನು ತಮ್ಮ ಮುಂದೆ ಹಾಜರಾಗಿದ್ದೇನೆ. ಎಂದಿನಂತೆ ತಾವು ಅವರನ್ನು ತಮ್ಮ ತುಂಬು ಹೃದಯದಿಂದ ಸ್ವಾಗತಿಸುವಿರಿ ಎಂದು ನಂಬಿರುವೆ.ಸ್ವಾಗತಿಸುವಿರಲ್ಲವೇ….!!

ಭೂಮಿಯು ಅತ್ತಿತು ನನ್ನ ಸ್ಥಿತಿಯ ಕಂಡು ಆಗಸವು ಅತ್ತಿತು

ನನ್ನ ಅಸಹಾಯಕತೆಯನ್ನು ಕಂಡು ಇಡೀ ಪ್ರಪಂಚವೆ ಅತ್ತಿತು

ವಹಶತ್ ರಜಾ ಅಲಿ ಕಲಕತ್ವಿ

       ಮನಸು, ಕನಸು ಮತ್ತು ನನಸು… ಇವುಗಳು ಮನುಷ್ಯನ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.‌ ‘ಮನಸು’ ಎನ್ನುವುದು ಎಲ್ಲ ಜೀವಜಂತುಗಳಿಗೆ ಇರುತ್ತದೆಯಾದರೂ ಅದನ್ನು ಫೀಲ್ ಮಾಡಿಕೊಂಡು, ಎದುರಿರುವ ವ್ಯಕ್ತಿಯ ಮನಸನ್ನು ಕದಿಯುವ, ತನ್ನ ಮನಸ್ಸಿನೊಂದಿಗೆ ಬೆಸೆದುಕೊಳ್ಳುವ ಕಾರ್ಯವನ್ನು ಮಾಡುತ್ತಿರುವುದು ಮಾತ್ರ ಮನುಷ್ಯನೆಂಬ ಪ್ರಾಣಿ! ತನ್ನ ಭಾವನೆಗಳನ್ನು ಅಭಿವ್ಯಕ್ತಿಸಲು ಭಾಷೆಯನ್ನು ಕಲಿತು, ಆ ಭಾವನೆಗಳಿಗೆ ಅಕ್ಷರಗಳಿಂದ ಬಣ್ಣ ತುಂಬಿ ಸಾಹಿತ್ಯವೆಂಬ ಕಾಮನಬಿಲ್ಲನ್ನು ಸೃಷ್ಟಿಸಿದ ಶ್ರೇಯಸ್ಸು ಮನುಷ್ಯನಿಗೆ ಸಲ್ಲುತ್ತದೆ. ಈ ಚಂದ್ರಚಾಪದ ಮೊದಲ ರಂಗೆಂದರೆ ಅದು ಕಾವ್ಯ. ಎಲ್ಲ ಭಾಷೆಗಳಲ್ಲಿ ಕಾವ್ಯವೆ ಸಾಹಿತ್ಯದ ದೇಹಲೀಜ್ ಎನ್ನಬಹುದು! ಈ ದೇಹಲೀಜ್ ಮನೆಯ ಸೌಂದರ್ಯವನ್ನು, ಮನಸುಗಳ ನೆಮ್ಮದಿಯನ್ನು ಕಾಪಾಡುತ್ತದೆ. ಈ ಹಿನ್ನೆಲೆಯಲ್ಲಿ ಕಾವ್ಯ ಕದಡಿದ ಮನಸ್ಸುಗಳನ್ನು ತಿಳಿಗೊಳಿಸಿ ಮುದ ನೀಡುತ್ತದೆ. ಕೋಮಲ, ಮಾಧುರ್ಯ, ಕಾಂತೆ…. ಎಂಬೆಲ್ಲ ಅನ್ವರ್ಥಕನಾಮಗಳೊಂದಿಗೆ ಬೆಸೆದಿರುವ ಕಾವ್ಯ, ಕಾವ್ಯಗಳ ರಾಣಿ ಎಂದು ಜಾಗತಿಕ ವಲಯದಲ್ಲಿ ಗುರುತಿಸಿಕೊಂಡಿರುವ ‘ಗಜಲ್’ ಅರಬ್ ನಿಂದ ಇರಾನ್ ಮಾರ್ಗವಾಗಿ ಭಾರತವನ್ನು ತಲುಪಿ, ಇಂದು ಎಲ್ಲ ಪ್ರಾದೇಶಿಕ ಭಾಷೆಗಳ ಜೀವನಾಡಿಯಾಗಿ ರಸಿಕರ ನಾಲಿಗೆಯಲ್ಲಿ ನರ್ತಿಸುತಿದೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡಮ್ಮನ ಮಡಿಲಲ್ಲಿ ಗಜಲ್ ಎಂಬ ಮಯೂರಿ ಗರಿ ಬಿಚ್ಚಿ ಕುಣಿಯುತಿದ್ದಾಳೆ. ಸದ್ಯದ ವರ್ತಮಾನ ಪರಿಸ್ಥಿತಿಯಲ್ಲಿ ಗಜಲ್ ಗೋ ಅವರ ಸಂಖ್ಯೆ ಸಾಸಿರದ ಗಡಿ ದಾಟುತ್ತಿದೆ. ಅಂಥಹ ಗಜಲ್ ಗೋ ಅವರಲ್ಲಿ ನಂರುಶಿ ಕಡೂರು ಇವರೂ ಕೂಡ ಒಬ್ಬರು.‌

           ಸಾರಸ್ವತ ಲೋಕದಲ್ಲಿ ‘ನಂರುಶಿ’ ಎಂದೆ ಚಿರಪರಿಚಿತರಾಗಿರುವ ಶಿವಪ್ರಕಾಶ ರು. ಕುಂಬಾರ ರವರು ರುದ್ರಪ್ಪ ಈ ಕುಂಬಾರ ಮತ್ತು ನಂಜಮ್ಮ ಇ ಕುಂಬಾರ ದಂಪತಿಗಳ ಮುದ್ದಿನ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ‌ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಕಡೂರಿನಲ್ಲಿ ೧೯೮೯ ರೇ ಫೆಬ್ರುವರಿ ೦೭ರಂದು ಜನಿಸಿದ್ದಾರೆ. ಐಟಿಐ ಮತ್ತು ಡಿಪ್ಲೋಮಾ ಪಧವಿಧರರಾದ ಶ್ರೀಯುತರು ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೆಯಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಅಭಿಯಂತರರಾದರೂ ಪ್ರವೃತ್ತಿಯಿಂದ ಉತ್ತಮ ಬರಹಗಾರರಾದ ನಂರುಶಿಯವರಿಗೆ ಕುಂಬಾರರ ತಿರುಗಣಿ ಸೊಳ ಕಲ್ಲುಗಳ ಜೊತೆಯ ಹದವಾದ ಮಣ್ಣಿನಲ್ಲಿ ಇದ್ದು, ಬಿದ್ದು, ಎದ್ದು, ಕಾಯಕವನ್ನು ಮಾಡಿ ಮಡಿದ ಜನಗಳ ಮನದ ಮಿಡಿತವೇ ಅವರ ಸಾಹಿತ್ಯದ ಮೂಲ ತಿರುಳು. “ಅಮೃತ ಸಿಂಚನವು ನಿಮಗಾಗಿ” ಕವನ ಸಂಕಲನವು ೨೦೧೫ ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ ಪ್ರಕಟಿತಗೊಂಡು, ಮರು ಮುದ್ರಣಕ್ಕೆ ಸಿದ್ದವಾಗಿದೆ. “ಕಾಮನಬಿಲ್ಲು ಬಣ್ಣ ಬೇಡುತಿದೆ” (೨೦೧೭) ಎನ್ನುವ ಗಜಲ್ ಸಂಕಲನವನ್ನು ತಮ್ಮ ಮದುವೆಯ ದಿನದಂದು, “ನೇರಿಶಾ” (೨೦೨೦) ಎನ್ನುವ ಗಜಲ್ ಸಂಕಲನವನ್ನು ತಮ್ಮ ಮಗಳ ಪ್ರಥಮ ವರ್ಷದ ಹುಟ್ಟುಹಬ್ಬದಂದು,  “ಮಣ್ಣಿನ ಕಣ್ಣುಗಳು” (೨೦೨೧) ಖಸಿದಾ ಸಂಕಲನ “ಪ್ರಣಯದ ಬೆನ್ನೇರಿ” (೨೦೨೧) ಎಂಬ ಕಾದಂಬರಿ ಎರಡು ಕೃತಿಗಳನ್ನು ತಮ್ಮ ಮಗಳ ಎರಡನೇ ವರ್ಷದ ಹುಟ್ಟುಹಬ್ಬದಂದು ಲೋಕಾರ್ಪಣೆ ಮಾಡಿರುವುದು ಅವರ ವ್ಯಕ್ತಿತ್ವದ ಕೈಗನ್ನಡಿಯಾಗಿದೆ. ಈಗ ಮಗಳ ಮೂರನೇ ವರ್ಷದ ಜನ್ಮದಿನಕ್ಕಾಗಿ ಅವರ “ಬೆಂಕಿ ಹರಿಸಿದ ನದಿ” ಕಥಾ ಸಂಕಲನದೊಂದಿಗೆ “ಪ್ರಣಯದ ಬೆನ್ನೇರಿ” ಮತ್ತು “ಅಮೃತ ಸಿಂಚನವು ನಿಮಗಾಗಿ” ಎಂಬ ಎರಡು ಕೃತಿಗಳ ಮರು ಮುದ್ರಣಗೊಂಡ ಕೃತಿಗಳು ಜನಾರ್ಪಣೆಗೆ ಸಿದ್ದಗೊಂಡಿವೆ. ಇವರ ಸಹ ಸಂಪಾದಕತ್ವದಲ್ಲಿ “ಗಜಲ್ ಸಂಭ್ರಮ” (೨೦೨೦) ಎನ್ನುವ ಗಜಲ್ ಸಂಕಲನವು ಪ್ರಕಟಗೊಂಡಿದೆ. ಇದರೊಂದಿಗೆ ತಮ್ಮದೆ ಒಂದು ಪ್ರಕಾಶನ ಮಾಡಿಕೊಂಡು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತ ಸಾಹಿತ್ಯಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಬರಹಗಳು ಸ್ಥಳೀಯ ಹಾಗೂ ಜಿಲ್ಲಾ, ರಾಜ್ಯ ಮಟ್ಟದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‌ ನಾಡಿನಾದ್ಯಂತ ಜರುಗಿದ ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯ ಪ್ರೀತಿಯನ್ನು ಮೆರೆದಿದ್ದಾರೆ.

        ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಶ್ರೀಯುತರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ‘ಮೇಘ ಮೈತ್ರಿ ಪುಸ್ತಕ ಬಹುಮಾನ’, ಬೆಂ.ನ.ಜಿ.ಸಾ. ಪರಿಷತ್ತಿನ ‘ಯುವಕಾವ್ಯ ಪ್ರತಿಭಾ ಪ್ರಶಸ್ತಿ’, ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ‘ಕಾವ್ಯ ಚೂಡಮಣಿ ರತ್ನ’, ರಾಜ್ಯ ಪ್ರಶಸ್ತಿ, ನವಚೈತನ್ಯ ಉದಯ ಪ್ರತಿಷ್ಠಾನದಿಂದ ‘ರಾಜ್ಯೋತ್ಸವ ಯುವಕವಿ ಪ್ರಶಸ್ತಿ’, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ‘ಸಿಸಿರಾ ಯುವಕಾವ್ಯ ಪ್ರಶಸ್ತಿ’, … ಮುಂತಾದ ಹತ್ತು ಹಲವು ಪ್ರಶಸ್ತಿಗಳು ನಂರುಶಿಯವರ ಸಾಮಾಜಿಕ ಮತ್ತು ಸಾಹಿತ್ಯಿಕ ಜವಾಬ್ದಾರಿಯನ್ನು ಹೆಚ್ಚಿಸಿವೆ.

      ಏಕಕಾಲದಲ್ಲಿಯೆ ಫಲವತ್ತಾದ ಭೂಮಿ ಮತ್ತು ಖಬರಸ್ತಾನ್ ಆಗಿ ಪರಿವರ್ತನೆ ಹೊಂದುವ, ಹೊಂದುತ್ತಿರುವ ಏಕೈಕ ಸ್ಥಳವೆಂದರೆ ಅದು ಮನುಷ್ಯನ ಹೃದಯ! ಹೆಪ್ಪುಗಟ್ಟಿದ ಕಂಬನಿಯು ಪ್ರೀತಿಪಾತ್ರರಾದವರ ತೋಳ ತೆಕ್ಕೆಯಲ್ಲಿ ಸದಾ ಆವಿಯಾಗಲು ಹವಣಿಸುತ್ತಿರುತ್ತದೆ. ಹೆಪ್ಪುಗಟ್ಟಿದ ಕಣ್ಣೀರಿಗೆ ಕಾವು ಕೊಡುವ ಮಂತ್ರಜಾಲವೆಂದರೆ ಅದೂ ‘ಗಜಲ್’. ಈ ಗಜಲ್ ಅಳುವವರನ್ನು ನಗಿಸುತ್ತದೆ, ನಗುವವರನ್ನು ಅಳಿಸುತ್ತದೆ. ಅಂತೆಯೇ ಗಜಲ್ ಎಂದರೆ ಸಹೃದಯ ಓದುಗರಿಗೆ, ಬರಹಗಾರರಿಗೆ ಯಾವಾಗಲೂ ಅಚ್ಚುಮೆಚ್ಚು. ಈ ಗಜಲ್ ಲೋಕದ ಯಾನ ಭಾರವಾದ ಮನಸುಗಳಿಗೆ, ಕನಸುಗಳಿಗೆ ಲಾಲಿ ಹಾಡಿ ಸಂತೈಸುತ್ತದೆ, ಪ್ರೋತ್ಸಾಹದ ಮಾತುಗಳಿಂದ ಬೆನ್ನು ತಟ್ಟುತ್ತದೆ. ಈ ಕಾರಣಕ್ಕಾಗಿಯೇ ಇಂದು ಗಜಲ್ ಪಾಗಲ್ ಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಗಜಲ್ ಗೋಯಿಯಲ್ಲಿ ವಿಶಿಷ್ಟ ಕಲೆಯೊಂದನ್ನು ಸಿದ್ಧಿಸಿಕೊಂಡಿರುವ ಗಜಲ್ ಗೋ ನಂರುಶಿ ಕಡೂರು ಅವರ ಗಜಲ್ ಗಳಲ್ಲಿ ಲೌಕಿಕ ಪ್ರೀತಿ, ವಿರಹ, ಮೋಹ, ಅಧ್ಯಾತ್ಮ, ಸಾಮಾಜಿಕ ಕಳಕಳಿ, ಸಾಮಾಜಿಕ ವ್ಯವಸ್ಥೆಯ ನಗ್ನ ಚಿತ್ರ, ಮೌಢ್ಯತೆಯ ಖಂಡನೆ, ಸ್ತ್ರೀ ಸಂವೇದನೆಯ ನೆಲೆಯಲ್ಲಿ ಸ್ತ್ರೀ ಸಮಸ್ಯೆಗಳ ಚಿತ್ರಣ, ಪುರುಷ ಪ್ರಧಾನ ಸಮಾಜದ ಅಟ್ಟಹಾಸ, ಧರ್ಮ, ಬಡತನದ ಬೇಗೆ, ಮೇಲು-ಕೀಳೆಂಬ ಅಪಾಯದ ಕತ್ತಿ, ರೈತರ ಗೋಳು, ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನ, ಮಲೆನಾಡಿನ ಪ್ರಕೃತಿ ಸೌಂದರ್ಯ, ತಾಯಿ-ಮಡದಿ-ಮಗಳ ಮೋಹ, ಮಂಗಳಮುಖಿಯರ ಗೋಳಾಟ, ಜಾತಿಯ ಕಚ್ಚೆಹರುಕತನ, ಐತಿಹಾಸಿಕ, ಧಾರ್ಮಿಕ ಮತ್ತು ಪೌರಾಣಿಕ ಮಹನೀಯರ ವ್ಯಕ್ತಿ ಪರಿಚಯ,… ಮುಂತಾದ ವಿಷಯಗಳಿವೆ.

        ಜಾತಿಯ ಎಡಬಿಡಂಗಿತನ, ಅವಕಾಶ ಸಿಂಧು ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಬೆಳಕಲ್ಲಿ ಜಾತಿಯ ಚೆಲ್ಲಾಟ, ಕತ್ತಲಾದೊಡೆ ಜಾತಿಯನ್ನು ಮೀರಿದ ಕಾಮಾಯಣ. ಇದಕ್ಕೊಂದು ಪರಂಪರೆ ಇರುವುದೇ ದೊಡ್ಡ ದುರಂತ.‌ ಇಲ್ಲಿ ಗಜಲ್ ಗೋ ಅವರು ಜಾತಿಯತೆಯನ್ನು ವಿಡಂಬಿಸಿದ ರೀತಿ ನೋಡುವ ಬನ್ನಿ…!

ಗಂಡು ಹೆಣ್ಣಿನ ಪ್ರೀತಿ ಮೋಹದ ಕಾಮದಾಟಕೆ ಯಾವುದಿದೆ ಜಾತಿ

ಮರೆತೆವೆಂದು ಹಿರಿಯರು ಹೊಡೆದಾಡಿ ಸತ್ತಿದ್ದ ಜಾತಿ ಧರ್ಮ ಯಾವುದು ಸಾಕಿ

ಈ ಮೇಲಿನ ಷೇರ್ ನಮ್ಮ ನರನಾಡಿಗಳಲ್ಲಿ ಮನೆ ಮಾಡಿದ ಜಾತಿಯ ಕರಾಳತೆಯನ್ನು ಬಯಲಿಗೆಳೆಯುತ್ತದೆ. ಜಾತಿಯತೆಯ ಅಟ್ಟಹಾಸ ಮೇಲ್ವರ್ಗದವರ ಐಚ್ಚಿಕತೆಯನ್ನು ಕಾಪಾಡುತ್ತ ಬಂದಿದೆ. ಹಾಸಿಗೆಯಲ್ಲಿ ಇಲ್ಲದ ಜಾತಿಯತೆ ಅನ್ನದ ತಟ್ಟೆಯಲ್ಲಿ ಇಣುಕಿ ನೋಡುತ್ತದೆ. ಕಾಮತೃಷೆಗಾಗಿ ನಮ್ಮ ಸಾಮಾಜಿಕ ವ್ಯವಸ್ಥೆ ಜಾತ್ಯತೀತತೆಯ ಸೋಗು ಹಾಕಿ ಬೆವರನ್ನು ಸುರಿಸಿ ಮರುಗಳಿಗೆಯಲ್ಲೆ ರಕುತ ಹರಿಸುತ್ತದೆ. ಇದು ಎರಡು ಮುಖಗಳನ್ನು ಹೊಂದಿದ್ದು, ಸಾತ್ವಿಕ ಸಮಾಜಕ್ಕೆ ಯಾವತ್ತೂ ಮಾರಕವೇ ಆಗಿದೆ ಎಂದು ಗಜಲ್ ಗೋ ಅವರು ವಿಷಾದ ವ್ಯಕ್ತಪಡಿಸುತ್ತಾರೆ.‌

      ನಮ್ಮ ಸಾಮಾಜಿಕ ಜೀವನದಲ್ಲಿ ಹಲವಾರು ಸಂಬಂಧಗಳಿವೆ. ಅವುಗಳಲ್ಲಿ ಗಂಡ-ಹೆಂಡತಿಯ ಬಂಧ ಅನನ್ಯ. ಸ್ವರ್ಗದಲ್ಲಿ ಮದುವೆಗಳು ನಿಶ್ಚಯವಾಗುತ್ತವೆ, ದಂಪತಿಗಳ ಪ್ರೀತಿಯ ಬೆಸುಗೆ ಏಳೇಳು ಜನ್ಮದಲ್ಲೂ ಇರುತ್ತದೆ ಎಂದು ನಂಬಿರುವ ಹೃದಯಗಳಲ್ಲಿ ಪ್ರೀತಿ ಎಂಬ ಹಣತೆ ಯಾವಾಗಲೂ ಉರಿಯುತ್ತಿರುತ್ತದೆ. ಅಂತೆಯೇ ಗಂಡನಾದವನು ತನ್ನ ಹೆಂಡತಿಯನ್ನು ಬಿಟ್ಟಿರಲು ಬಯಸುವುದೆ ಇಲ್ಲ. ಈ ಬಾಂಧವ್ಯವನ್ನು ಶ್ರೀಯುತರ ಷೇರ್ ಒಂದರ ಮುಖಾಂತರ ತಿಳಿಯಬಹುದು.

ಮನೆಯಲಿ ನಲಿಯುತ ಬಾಳಲು ಇರಲೆಬೇಕು ಆಕೆಯು

ಅವಳಿಲ್ಲದೆ ನನ್ನ ಯಾರೂ ಕುಣಿಸಲು ಸಾಧ್ಯವಿಲ್ಲ

ಮನೆಗೆ ಕಳೆ ಬರುವುದೇ ಹೆಂಡತಿಯ ಬಳೆಗಳ ಸದ್ದಿನಿಂದ ಹಾಗೂ ಕಾಲ್ಗೆಜ್ಜೆಯ ಝೇಂಕಾರದಿಂದ! ಅವಳು ಮನೆಯಲ್ಲಿ ಇರದೆ ಹೋದರೆ ಎಲ್ಲವೂ ಮಿಸ್ಸಿಂಗ್ ಫೀಲ್ ಆಗುತ್ತೆ ಎಂಬ ದಾಂಪತ್ಯ ಗೀತೆಯನ್ನು ಗಜಲ್ ಗೋ ಅವರು ತಮ್ಮ ಗಜಲ್ ನಲ್ಲಿ ದಾಖಲಿಸಿದ್ದಾರೆ. ಇನ್ನೂ ಕುಣಿಯಲು-ಕುಣಿಸಲೂ ಎಲ್ಲದರಲ್ಲಿ ಅವಳೆ ರಿಂಗ್ ಮಾಸ್ಟರ್ ಎಂಬುದನ್ನು ನಂರುಶಿಯವರು ತುಂಬಾ ಚೆನ್ನಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

      ಗಜಲ್ ಲೋಕವು ಇಂದು ಕರುನಾಡಿನಾದ್ಯಂತ ಸದ್ದು, ಸುದ್ದಿ ಮಾಡುತ್ತಿದೆ.‌ ಓದುಗ ದೊರೆಗಳ ಮನವನ್ನು ಕದ್ದು, ಅವರ ಹೃದಯದಲ್ಲಿ ರಾರಾಜಿಸುತ್ತಿದೆ. ಇಂಥಹ ಗಜಲ್ ಪರಪಂಚ ಶ್ರೀ ಶಿವಪ್ರಕಾಶ ಕುಂಬಾರ ಅವರಿಂದ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.

ಮರೆತು ಕೂಡ ನೀನು ನನ್ನನ್ನು ನೆನಪಿಸಿಕೊಳ್ಳಲಿಲ್ಲ

ನಿನ್ನ ನೆನಪಿನಲ್ಲಿ ನಾನು ಎಲ್ಲವನ್ನೂ ಮರೆತಿರುವೆ

ಬಹದ್ದೂರ್ ಶಾಹ ಜಫರ್

     ಗಜಲ್ ನ ಮೇಲಾ ತಮ್ಮ ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ಏನಂತೀರಿ.. ಹೌದೆಂದು ತಲೆಯಾಡಿಸುತ್ತಿರುವಿರಲ್ಲವೆ..ನನಗೊತ್ತು, ನಮ್ಮ ಗಜಲ್ ಮಾಶುಕಗಳ ಮನಸು. ಆದರೂ ಏನು ಮಾಡೋದು, ಕಾಲದ ಸರಪಳಿಯಲ್ಲಿ ಬಂಧಿಯಾಗಿರುವೆ…..ಇಂದಿನ ಈ ಪರಿಚಯದ ದೇಹಲಿಜ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ತಮ್ಮ ಮುಂದೆ ಹಾಜರಾಗುವೆ ಎಂದು ಪ್ರಮಾಣ ಮಾಡುತ್ತ, ಇಲ್ಲಿಂದ ನಿರ್ಗಮಿಸುವೆ…!!


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top