ವಾಸನೆಗಳ ಹುತ್ತ

ಕಾವ್ಯ ಸಂಗಾತಿ

ವಾಸನೆಗಳ ಹುತ್ತ

ಡಾ. ಅರಕಲಗೂಡು ನೀಲಕಂಠ ಮೂರ್ತಿ

Isolated abstract smoke.

ಮಾನವ ದುರ್ವಾಸನೆಗಳು
ಭುಸುಗುಡುವ ಜಂಭದ ಹುತ್ತ!
ಪ್ರತಿ ರಂಧ್ರದಿಂದೊಂದು
ಎಗರಿ ಹೊರಗೆ ರಾಚುವ ಒಂದೊಂದು
ವಿಲಕ್ಷಣ ವಾಸನೆ

ತೊಳೆದು ತೊಳೆದು
ಉಜ್ಜುಜ್ಜಿ ತೊಳೆವ
ದಿನನಿತ್ಯ ಸರ್ಕಸ್ ಪ್ರದರ್ಶನ
ಜಗದೆಲ್ಲ ಜೀವಿಗಳಲು
ಈತನೊಬ್ಬನೆ ಇಂಥ ಘನ ನಿದರ್ಶನ

ಮೈಮನ ಮರೆತು
ತಪ್ಪಿದರೂ ಒಂದೇ ಒಂದು ದಿನ
ಎಲ್ಲ ಥರದ ಮಜ್ಜನ
ತಿಪ್ಪೆಯಿಂದುಗ್ಗುವುದೇ ಆಹಾ ಸುವಾಸನೆ
ಅಂಥ ಗಾಢಗಬ್ಬು ದುರ್ಘಂಧ
ಇದು ಬಾಹ್ಯ ಮಜಲ ಕತೆ…

ಅಂತರಂಗದ ಮಜಲಿನಲಿ
ಒಳಪದರು ಪದರುಗಳ ಗೂಢತೆ
ಸಾಮ್ರಾಜ್ಯ ರಹಸ್ಯಕಿಂತ ಘಾಟು!

ಆರಂಭಕೆ
ಭಕ್ತಿ ಎಂಬ ಬಲು ಬೂಟಾಟಿಕೆ
ಹೊರಸೂಸುತ್ತಾ ಸುತ್ತಿ ಸುತ್ತಿ
ಮೇಲೇರಿ ಕುಣಿವ ಗಂಧದಕಡ್ಡಿ
ಸಾಂಬ್ರಾಣಿ ಧೂಮ!

ಪ್ರೀತಿ ಪ್ರೇಮಗಳೆಂಬ ಸುವಾಸನೆ
ಮೊದಮೊದಲು ಮಲ್ಲಿಗೆ ಸಂಪಿಗೆ
ಮೂಗು ಹೊಳ್ಳೆಗಳೊಳಗೆ
ತುರುಕಿದ ಕಡಿವಾಣ
ನಂತರ ಕುತ್ತಿಗೆ ಹಿಡಿವ ನಂಜು…!

ಹೀಗೆ ಸಹಾಯ ಹಸ್ತದ ಸಂಚು
ಹಗೆಯ ಝಳಪಿಸುವ ಮಚ್ಚು
ಬೆಕ್ಕಿನ ಸಪ್ಪಳರಹಿತ ಕಳ್ಳ ನಡೆ
ಮತ್ಸರ ಬೀಜ ಬಿತ್ತುವ ಹೆಡೆ

ಒಂದ ಎರಡ ಜಗದೆಲ್ಲ ಹರವಿಗು
ಆಗಾಗ ಹಾಸಿ ಸುತ್ತಿಡುವ
ಮಾಯಾ ಚಾಪೆಯ ಕಣ್ಣಿಗೆ ರಾಚುವ
ಥಳಥಳಿಸುವ ಅಸಾಧ್ಯ ರಂಗು!

ಒಟ್ಟಿನಲಿ
ಒಳ ಬಿಲಗಳಲಿ
ಯಥೇಚ್ಛ ಚಿಮ್ಮುವ
ರಕ್ಕಸ ಸದ್ದಿನ ದುರ್ಘಂಧ ಬಚ್ಚಿಟ್ಟು
ಮತ್ತೆಮತ್ತೆ ಸ್ವಾರ್ಥಸಾಧನೆಗೆ ಆಚೆಬಿಟ್ಟು
ಹೊರ ಮೈಮೇಲೆ ಮುಗ್ಧಾತಿಮುಗ್ಧ
ಮುಗುಳುನಗೆಯ ಆಯಸ್ಕಾಂತ
ಈ ಮನುಜ!



One thought on “ವಾಸನೆಗಳ ಹುತ್ತ

  1. ಈ ಪ್ರಪಂಚವೇ ಹಾಗೆ.ಒಳಗೊಂದು ಹೊರಗೊಂದಿನ ದೈನಿಕ. ಇರುವ ತನಕ ಈಜ ಬೇಕು. ಚೆನ್ನಾಗಿ ಚಿತ್ರಿಸಿದ್ದೀರ ನಮ್ಮಗಳ ಪಾಡು !
    Congrats

Leave a Reply

Back To Top