ಕಾವ್ಯ ಸಂಗಾತಿ
ಗೋಡೆ
ಡಾ. ನಿರ್ಮಲಾ ಬಟ್ಟಲ

ಅಪ್ಪ ಕಟ್ಟಿದ ಮನೆ
ನಡು ಗೊಡೆಗಳಿಲ್ಲದ
ಹಳೆಯ ಕಾಲದ್ದು
ಪ್ರೀತಿ ವಿಶ್ವಾಸವೆನ್ನುವ ಮಣ್ಣುಬೆರೆಸಿ
ಒಗ್ಗಟ್ಟಿನ ಕಲ್ಲುಗಳನ್ನ ಒಂದರ ಮೇಲೊಂದಿಟ್ಟು ಕಟ್ಟಿರುವ
ಬಿರುಕುಗಳಿಲ್ಲದ ಯಾರು ಕೆಡುವದ
ಕೋಟೆಯಂತೆ ರಕ್ಷಿಸುವ ನಮ್ಮನ್ನ ಸುತ್ತುವರೆದ ನಾಲ್ಕುಗೋಡೆ
ಒಂದೇ ಬಾಗಿಲಿನದು….!
ಬಿಸಿಲು ಮಳೆ ಗಾಳಿಗೆ ತನ್ನ
ಎದೆಯೊಡ್ಡಿ ನಮ್ಮನ್ನೆಲ್ಲ ರಕ್ಷಿಸುವ ತನ್ನ ತೊಳ್ ತೊಲೆಗಳ
ಮೇಲೆ ಮಣ್ಣ ಮದ್ದೆಯಲ್ಲಿ ಕಾಳಜಿ ಬೆರೆಸಿ ಗಟ್ಟಿಗೊಳಿಸಿದ ಅಪ್ಪನಂತ ಮೇಲ್ಛವಣಿ…!
ವಿಶಾಲವಾದ ಪಡಸಾಲೆಯ ತುಂಬಾ
ಮುಚ್ಚುಮರೆಯಿಲ್ಲದ
ಒಲವುನಲಿವುಗಳು
ಪ್ರೀತಿ ಕುರುಹುಗಳು ಮರೆತ ಸಾವು ನೋವುಗಳು ಎಲ್ಲಕ್ಕೂ ಸ್ಪಂದಿಸುವ
ಪರಿಶುದ್ಧ ಮನಸ್ಸುಗಳ
ಬೇಧವಿಲ್ಲದೆ ಬದುಕುವ ಪರಿವಾರ…!
ನಾಗರೀಕವಲ್ಲದ ಗೋಡೆಗಳಿಲ್ಲದ ಮಣ್ಣಿನ ಮನೆ ಘನತೆಗೆ ಕುಂದು ತರುವ ಮನೆ
ಕೆಡವಿಕಟ್ಟಿದರಿಗ ಹೊಸ ಮನೆ
ತಂತ್ರಜ್ಞ ಕಟ್ಟಿದ ಕುಶಲ ಮನೆ
ಬಣ್ಣ ಬಣ್ಣದ ಗೋಡೆ ಗಳಿಂದ ಅಲಂಕರಿಸಿದ ಮನೆ
ಅಪರಿಚಿತರಂತೆ ಬಾಳುವ ಮನೆಮನಗಳ ನಡುವೆ ಗೋಡೆಗಳೆ
ತುಂಬಿದ ಅಪ್ಪನಿಲ್ಲದ ಸುಂದರ ಮನೆ…!
Super madam