ಅಪ್ಪನಿಗೆರಡು ಕವಿತೆಗಳು

ಕಾವ್ಯ ಸಂಗಾತಿ

ದೇವರಾಜ ಹುಣಸಿಕಟ್ಟಿ

ಅಪ್ಪ


ಅಪ್ಪನೆಂದರೆ
ಅಳುವ ನುಂಗಿ
ನಗುವ ಗಾಢ ಮೌನಧಾರಿ..!(ದಾರಿ )
ಅವ್ಹ ಸವೆಸಿದ ದಾರಿಯಲಿ
ನನ್ನ ಹೆಜ್ಜೆ ಗುರುತುಗಳ
ನನಗೂ ಕಾಣದಂತೆ ನೋಡುವ
ನೋಡುತ ನೋವ ಮರೆತು
ನಗುವ ನಕ್ಷತ್ರ…!!

ಅಪ್ಪನೆಂದರೆ ಕಾಲದ ಕೈಗೆ
ಸೋತಾಗಲೆಲ್ಲ ಭರವಸೆಯ
ಬೆಳಕಿನ ಸೆಲೆ…!
ಚಿಕ್ಕ ಚಿಕ್ಕ ಗೆಲುವಿಗೆಲ್ಲ
ಹಿಂದಿನಿಂದಲೆ ಹೆಮ್ಮೆ
ಪಡುವ ನೆಲೆ…!!

ಅಪ್ಪನೆಂದರೆ
ಕಪ್ಪು ನೆಲದ ಅಕ್ಷರ..!
ಮೌನ ಮುರಿದು
ಮಾತಿಗಿಳಿಯದ ಶಿಖರ…!!

ಅಪ್ಪನೆಂದರೆ ಅಗಣಿತ
ಸ್ವರಭಾರ – ನೋವುಗಳ
ಉಂಡು ಉಗುಳು ನುಂಗಿದವ…!
ಒಮ್ಮೊಮ್ಮೆ ಹೀಗೆ
ಜೀವನೋತ್ಸಾಹ ಇಂಗದೆ
ಸಂತಸಗಳ ಸುರಿ ಮಳೆಗೈದು
ಸಂತನಂತೆ ನಿಲ್ಲುವವ…!!

ಅಪ್ಪನೆಂದರೆ ಅರ್ಥವಾಗದೆ
ಉಳಿದ ಪದ್ಯ ಗದ್ಯ
ಸದ್ಯ ಅಕ್ಷರಕ್ಕೆ ಸಿಗದ ಸವ್ಯಸಾಚಿ…!!

ಅಪ್ಪನೆಂದರೆ
ಜ್ಞಾನತಕ್ಕೂ ಅಜ್ಞಾತಕ್ಕೂ
ಕೂಡುವ ಕೊಂಡಿ…!!

*******

ಅಪ್ಪನೆಂಬ ಕಲ್ಪವೃಕ್ಷ


ನನ್ನ ಅಪ್ಪ ನಿನ್ನ
ನೋಡಿಯೆ ತನ್ನ ಬೇರುಗಳ
ಊರ ತುಂಬಾ ಆಳಕ್ಕೆ
ಇಳಸಿರಬೇಕ್ ನೋಡು…
ನಿನ್ನ ಹಂಗ್….
ಕಲ್ಪ ವೃಕ್ಷವೇ ನಿನ್ನ ಸಂಗ..
ನಿನ್ನ ಹಂಗ್ ಎತ್ತರಕ್ಕೆ
ಬೆಳದ ಎಂದ್ ನಾನು ಹೇಳಲಾರೆ
ನೀನ್ ಸೋಸಿ ತುಂಬಿದ ಏಳಿನೀರಿನ ಹಂಗ್…
ಒಳುತು ಕೆಡುಕುಗಳ ಮಧ್ಯ ಬರೀ ಅಮೃತದಂತ ಒಳಿತನ್ನೇ ಆಯ್ದು ತುಂಬಿದ ನೋಡು ನನ್ನ ತಲಿಯೊಳಗ ನಿನ್ನ ಹಂಗ್…
ಪ್ರೀತಿಯಿಂದ ಹಿಂಗ್….

ಈಗಲೂ ಅನಿಸುತ್ತೆ
ನಿನ್ನ ನೋಡಿಯೆ ಕಲಿತಿರಬೇಕು ಕೊಬ್ಬರಿ ಮಿಠಾಯಿ ಹಂತಾ ಸಿಹಿಮಾತು…ಹಿಂಗ್
ನಿನ್ನ ತಿಂದರೆ ನಾಲಿಗೆ ತಂಪು..
ಅಪ್ಪನ ಮಾತ್ ಕೇಳಿಸಿ
ಕೊಂಡ್ರೆ ಕಿವಿ ತಂಪು..

ನಿನ್ನ ನೋಡಿ ಊರಿಗೆಲ್ಲ ನೆರಳಾದ ಎನ್ನಲಾರೆ..
ಸುಮ್ನೆ ಹಿಂಗ್…. ಅವ್ಹಾ ಹೃದಯ ಶ್ರೀಮಂತ ಇದ್ದ ಎಂದೂ ಮರೆಯಲಾರೆ..
ನಾನು ಹಂಗ್..
ಓಣಿಯ ಜೋಪಡಿಯ ಮುದ್ದು ಮಕ್ಕಳಿಗೆ ಯುಗಾದಿಗೆ ಒಮ್ಮೆಯಾದ್ರು ಅವ್ಹಾ ಕೊಡಿಸುತ್ತಿದ್ದ ಒಂದೆರಡು ಜೊತೆ ಬಟ್ಟಿ ಮರೆಯಲಿ ಹ್ಯಾಂಗ್…

ನೀನು ಧರೆಗೆ ಉರುಳಿ ತೊಲೆಯಾದೆ..
ಅವ್ಹಾ ಜೀವಂತ ನಮ್ಮ ಮನೆಗೆ ತೊಲೆಯಾಗಿದ್ದ….
ಅಂದ್ರೆ ತಪ್ಪಾಗಲಾರದು ನೋಡು ಹಿಂಗ್…
ನಾರು ಬೇರು ತೊಟ್ಟಾಗಿ
ಸ್ವಚ್ಛತೆಯ ಗುಟ್ಟಾಗಿ
ಮಳೆಗೆ ರಕ್ಷಣೆಯ ಗೂಡಾಗಿ
ಬಳಕೆಯಾದೆ ನೀನು…
ಅವನು ಹಿಂಗ್ ಮನೆ ಮಂದಿ ಸಲುವಾಗಿ ಚಪ್ಪಲಿ ಹಂಗ್ ಗುಟ್ಟಾಗಿ
ಸವೆದೋದ…
ಅಪ್ಪ ಕಲ್ಪವೃಕ್ಷವಾದ ಎಂದ್ರೆ ಅಲ್ಪ ಸ್ವಲ್ಪ ನ್ಯಾಯ ಸಿಕ್ಕಂಗೆ ಆಗುತ್ತೇನೋ.. ಹಿಂಗ್.. ನಿನ್ನ ಹಂಗ್


One thought on “ಅಪ್ಪನಿಗೆರಡು ಕವಿತೆಗಳು

  1. ಎರಡೂ ಕವಿಗಳು ತುಂಬಾ ಚೆನ್ನಾಗಿವೆ.

Leave a Reply

Back To Top