ನಾ ಕಂಡ ಬಸವನಲ್ಲದೆ…ನನ್ನೊಳಗಿನ ಶಾಂತ ಸಂತ

ಕಾವ್ಯ ಸಂಗಾತಿ

ನಾ ಕಂಡ ಬಸವನಲ್ಲದೆ…

ನನ್ನೊಳಗಿನ ಶಾಂತ ಸಂತ

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ

ಅಪ್ಪ ನನ್ನೊಳಗಿನ
ಅದಮ್ಯ ಜೀವದ್ರವ್ಯ.
ಮೈದುಂಬಿಹರಿವ
ಜೋಗದಂತೆ ಭವ್ಯ .
ನಾ ಕಂಡ ಪರ್ಯಾಯ ಬಸವ,
ಕರ್ಮಯೋಗಿ ಶರಣ ಪ್ರಣೀತ ಜೀವಿ.

ನೂರಾರು ಬೆಗುದಿಗಳ ನಡುವೆ
ಹೋರಾಡಿ ಗೆಲುವುದೇ
ಜೀವನವೆಂದು ಕಲಿಸಿದವ.
ಸೋಲು ಗೆಲವಿನಲಿ, ಸಮಚಿತ್ತತೆ
ಕಷ್ಟ ಕಾರ್ಪಣ್ಯಗಳಿಗೆ ಹೆದರದೆ
ಹಸಿವನು ಗೆದ್ದು ಎದ್ದವ.

ಪ್ರವಾಹದ ವಿರುದ್ಧ
ಈಜುವ ಛಲ ತುಂಬಿದವ.
ಹರಿದ ಜೋಳಿಗೆ,
ಮುರುಕು ಮನಸುಗಳ ನಡುವೆ
ಸೋತು ಹೋದ ಕನಸುಗಳಿಗೆ
ರೆಕ್ಕೆ ಪುಕ್ಕ ಕಟ್ಟಿದವ.

ಶ್ರಮ ಸಂಸ್ಕೃತಿ ಕಲಿಸಿದವ
ಕಾಫಿಟ್ಟು ಸಲುಹಿದವ.
ದುಃಖಕ್ಕೆ ಬೆನ್ನು ಕೊಟ್ಟವನಲ್ಲ ,
ಆತ ಸ್ಥಿತಪ್ರಜ್ಞ.
ಮಾತೃ ಹೃದಯದ ಛಲದಂಕಮಲ್ಲ
ಹದುಳ ಹರಕೆಯಿತ್ತು ಹರಿಸಿದವ.

ದಾರ್ಶನಿಕ ಕಾಯಕಯೋಗಿ
ಶರಣ ತತ್ವದ
ಪ್ರಾಮಾಣಿಕರಣದ ಕರಡಿಗೆ.
ಸಮಚಿತ್ತದ ಗುಣಗ್ರಾಹಿ,
ಸದಾ ಸಂತೃಪ್ತ ಹಸನ್ಮುಖಿ
ಸದಾಸುಖಿ ಜೀವನ್ಮುಖಿ…

ಅವ್ವ ಪುರಾಣೇತಿಹಾಸ ಮಾಹಿತಿ ಕಣಜ
ಅಪ್ಪ ಜ್ಞಾನಮುಖಿ ಶಿಕ್ಷಣದ ಪ್ರತ್ಯಕ್ಷ ಪ್ರಾತ್ಯಕ್ಷಿಕೆ.
ಅಪ್ಪ ಹಚ್ಚಿಟ್ಟ ಎದೆ ಹಣತೆ
ಸದಾ ಬೆಳಗುತಿದೆ.
ಸಂತತನದಿ ಜೀವಕಾರುಣ್ಯ
ಪ್ರೀತಿಯ ಒಲವಾಗಿ ಬಲವಾಗಿ.

ಅಪ್ಪ ನನ್ನೊಳಗೆ
ವಿಶ್ವಪಥದ ಸಂತನಾಗಿ
ಅನುದಿನವು ಬದುಕು ಬೋಧಿಸುತ್ತ,
ಬೆಳಕಾಗಿ ಪ್ರಜ್ವಲಿಸುತ್ತ,
ಕಾಯಕ ದಾಸೋಹಗಳ
ಜೀವಪ್ರೀತಿಯ ಸೆಲೆಯಾಗಿ ಸೃಜಿಸುತ್ತಿದ್ದಾನೆ.


3 thoughts on “ನಾ ಕಂಡ ಬಸವನಲ್ಲದೆ…ನನ್ನೊಳಗಿನ ಶಾಂತ ಸಂತ

  1. ಬದುಕು ನೀಡಿ ಬಾಳಲು ಕಲಿಸುವ ಅದ್ಭುತ ವ್ಯಕ್ತಿತ್ವದ ಅಪ್ಪನ ಕುರಿತ ಕವನ ತುಂಬಾ ಚೆನ್ನಾಗಿದೆ.

  2. ಅಪ್ಪನೆಂಬ ಮಾಂತ್ರಿಕ,ಅಪ್ಪನೆಂಬ ಅನಂತ.,ಅಪ್ಪನೆಂಬ ಆಕಾಶ,ಎಷ್ಟು ಬಣ್ಣಿಸಿದರೂ ಸಾಲದು.
    ಸಹೋದರಿಯ ಕವಿತೆ ತುಂಬಾ ಆಪ್ತವಾಗಿದೆ.

  3. ಅಪ್ಪ ಒಂದು ಸುಂದರ ಅನುಭವ
    ಬರೆಯದೇ ಉಳಿದ ವೆಸಾಲುಗಳು
    ಅಭಿನಂದನೆಗಳು ಮೈ ತ್ರ

Leave a Reply

Back To Top