ಕಾವ್ಯ ಸಂಗಾತಿ
ಅಪ್ಪ, ತುತ್ತಿನ ಚೀಲ
ಡಾ. ಸದಾಶಿವದೊಡಮನಿ
ಅಪ್ಪ
ತುತ್ತಿನ ಚೀಲ
ಜೀವ ಕಾರುಣ್ಯದ ಕಡಲ
ಉಂಡರೂ ನೋವು
ಬೆಳದಿಂಗಳ ನಗೆ ನಕ್ಕು
ನಲಿವು ತುಳುಕಿಸುವ ಧೀರ
ಉಡಿ ಪ್ರೀತಿ ಅವ್ವನಿಗೆ
ಹಿಡಿ ಪ್ರೀತಿ ಅಪ್ಪನಿಗೆ
ಹಂಚಿದಾಗಲೂ
ಅಪ್ಪಿತಪ್ಪಿಯೂ ಬೇಸರಪಡದ ಅಪ್ಪ
-ನದು ಸಂತನ ನಿಲುವು
ಉಣ್ಣುವುದಲ್ಲಿ ಉಡುವುದರಲ್ಲಿ
ಅಪ್ಪನಿಗೆ ಯಾವಾಗಲೂ ಕೊನೆಯ ಪಾಲು
ಇದ್ದಷ್ಟೇ ಉಂಡು ಮಘೀ ನೀರು ಕುಡಿದು
ಊರ ಅಗಸಿಗೆ ಕೇಳುವ ಹಾಗೆ
ಢರೀ ಹೊಡೆಯುವ ಅಪ್ಪ
ಅರೆ ಹೊಟ್ಟೆಯಲ್ಲಿಯೂ ಸಂತುಷ್ಠಿ
ಹಾಲು ಹೊಳೆಯಂತಹ ಅಪ್ಪನ ನಡೆಗೆ
ಯಾರ್ಯಾರೋ ವಿಷವ ಬೆರಸಿದರೂ
ಸದಾ ಹಾಲು ಕರೆಯುವ ಹಸು
ಹೆಸರಿಗೇ ಅಪ್ಪ!
ಕರಳು ಮಾತ್ರ ಅವ್ವನದೇ!
ಅಪ್ಪನಾಗಿ ಅವ್ವನ ಪ್ರೀತಿ ತೋರುವ ಜೀವ
ಭೂಮಿಯ ಮೇಲೆ ಇದ್ದರೇ….,
ಅದು ಅಪ್ಪನದೇ!
ಅಪ್ಪನೆಂಬ ಆಲಕೆ
ಆಕಾಶ ಎಂಬ ರೂಪಕ
ತೊಡಿಸಿದರೂ ಅದು ಅರ್ಧಂಬರ್ಧ!
ಅಪ್ಪನ ವಿರಾಟ್ ವ್ಯಕ್ತಿತ್ವ ಅಕ್ಷರಗಳಲ್ಲಿ ಹಿಡಿದಿಡುವೆಂಬುದು ಬರೀ ಭ್ರಮೆ!
ಅಪ್ಪ ಎಂದೂ ತೀರಲಾರದ ಪ್ರೀತಿ
ಸದಾ ಪ್ರೀತಿಸುವುದೇ ಅಪ್ಪನೆಗೆ ಕೊಡುವ
ಗೌರವದ ಕಾಣಿಕೆ!