ಲೇಖನ
ಜೀವನದಲ್ಲಿ ಅಪ್ಪನ ಪಾತ್ರ
ಅನುಸೂಯ ಯತೀಶ್.
” ಅಪ್ಪ” ಎನ್ನುವ ಪದದಲಿಹುದು ಧೈರ್ಯ. ಅದರಿಂದಲೆ ಮೆರೆಯುತಿಹೆವು ಶೌರ್ಯ. ಅಮ್ಮನ ಕನಸುಗಳಿಗೆ ಅವನೆ ಆರ್ಯ. ಮಕ್ಕಳಿಗೆ ಜಗವ ಪರಿಚಯಿಸುವ ಮೌರ್ಯ. ಅನುಗಾಲ ಅನುಕ್ಷಣ ಅವಿರತ ಶ್ರಮಿಸುವನು .ಧರ್ಮ ಮಾರ್ಗವನು ಮಕ್ಕಳಿಗೆ ತೋರುವನು .ಮಾನವೀಯ ಮೌಲ್ಯ ಕಲಿಸುತ ಬೆಳೆಸುವನು. ಗುರಿಯೆಡೆಗೆ ನಮ್ಮ ನಡೆಸುತ ಸಾಗುವನು.ಅಪ್ಪನಿವನು ಬೆಪ್ಪನಲ್ಲ ಪ್ರೇಮದ ಹಂದರ .ಅಮ್ಮನ ಬಾಳಿನ ಹುಣ್ಣಿಮೆಯ ಚಂದಿರ ಕರುಳ ಕುಡಿಗಳಿಗೆ ಒಲವಿನ ಮಂದಿರ.ಭುವದ ಏಳಿಗೆಗೆ ಇವನೆ ಸುಂದರ. ಗಹನತೆಯಲಿ ತೋರುವನು ಗಾಂಭೀರ್ಯ . ಸೌಜನ್ಯದಲಿ ಕಾಣುವನು ಔದಾರ್ಯ . ಒಲವಿನ ಸುಧೆಯ ಹರಿಸುವ ಸ್ವರ ಮಾಧುರ್ಯ. ಸಕಲ ಸಮಸ್ಯೆಯ ಜಯಿಸುವ ಚಾತುರ್ಯ
ಅಪ್ಪ ಅಂದ್ರೆ ಆಕಾಶವಂತೆ ಪ್ರೀತಿ ವಾತ್ಸಲ್ಯಕೆ ಒಡೆಯನಂತೆ .ಸಾಧನೆಗೆ ಸ್ಪೂರ್ತಿಯ ಮೆಟ್ಟಿಲಂತೆ ಅನುದಿನವು ಹಾರೈಸುತಾ ಮಕ್ಕಳ ಶ್ರೇಯಸ್ಸನು ಬಯಸುವನಂತೆ.
ನಮ್ಮ ರಾಷ್ಟ್ರಪತಿಗಳಾಗಿದ್ದ ಅಂತಹ ಡಾಕ್ಟರ್ “ಎಪಿಜೆ ಅಬ್ದುಲ್ ಕಲಾಂ ” ಅವರು “ಒಂದು ದೇಶ ಬ್ರಷ್ಟಾಚಾರ ಮುಕ್ತವಾಗಬೇಕು ಆದರೆ ಸುಂದರ ಮನಸ್ಸುಗಳಿಂದ ಕೂಡಿರಬೇಕು ಎಂದಾದರೆ ಅಪ್ಪ-ಅಮ್ಮ ಮತ್ತು ಶಿಕ್ಷಣ ಈ ಮೂವರಿಂದ ಮಾತ್ರ ಸಾಧ್ಯ. ಎಂದಿದ್ದಾರೆ .
ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೂ ಹೆಚ್ಚಿನದಾಗಿದೆ . ಅವನ ನಡವಳಿಕೆ ಮೇಲ್ಪಂಕ್ತಿ ತೆಗೆದುಕೊಳ್ಳುವ ನಿರ್ಧಾರಗಳು, ಪ್ರತಿಯೊಂದು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಮೈಲಿಗಲ್ಲು ಆಗುತ್ತದೆ .
ಅಪ್ಪ ಎಂಬ ಎರಡಕ್ಷರ ಪ್ರತಿಯೊಂದು ಮಗುವಿನ ಪಾಲಿಗೆ ಪುಟಾಣಿ ಮರಿಗಳನ್ನು ಮತ್ತು ಅಮ್ಮ ಎಂಬ ಜೀವವನ್ನು ರಕ್ಷಿಸುತ್ತಿರುವ ಹಕ್ಕಿಗೂಡು.
ನನ್ನ ಬಾಳಿನಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾಗಿದೆ .
ನನ್ನ ಅಪ್ಪ ನನಗೆ ಕಳಿಸಿಕೊಟ್ಟ ಮರೆಯಲಾಗದ ಪಾಠ ಎಂದರೆ ಅದು ಸ್ವಾಭಿಮಾನ .ನಾವು ಬಡತನ ಇರಲಿ ಕಷ್ಟ ಇರಲಿ ನೋವುಗಳಲ್ಲಿ ಇರಲಿ ನಾವು ಎಂದಿಗೂ ಯಾರ ಮುಂದೆಯೂ ತಲೆ ತಗ್ಗಿಸ ಬಾರದು ಅವರ ಮುಂದೆ ಬೇಡಿ ಹೋಗಬಾರದು ಸ್ವಾಭಿಮಾನದಿಂದ ದುಡಿದು ತಿನ್ನಬೇಕು ಅವರ ಮುಂದೆ ಹೆಮ್ಮೆಯಿಂದ ತಲೆಯೆತ್ತಿ ಬೇಕು ಎಂದು ಇನ್ನೊಬ್ಬರ ಮುಂದೆ ಅಡಿಯಾಳಾಗಿ ನಿಲ್ಲಬಾರದು ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು.
ಮನಸಿದ್ದರೆ ಮಾರ್ಗ ಮನಸ್ಸಿನಂತೆ ಮಹಾದೇವ ಎಂಬ ಅಪ್ಪನ ನುಡಿಗಳು ನಮಗೆ ದಾರಿದೀಪ ವಾಗಿದ್ದವು .
ಅಪ್ಪ ಎಂದರೆ ನನ್ನ ನರನಾಡಿಗಳಿಗೆ ಸ್ಫೂರ್ತಿಯ ಚಿಲುಮೆ, ಆತ್ಮಸ್ಥೈರ್ಯ ತುಂಬುವ ಗಣಿ ,ಅಪ್ಪ ನಮ್ಮ ಬದುಕಿನಲ್ಲಿ ಭಾವನಾತ್ಮಕವಾಗಿ ಹೆಚ್ಚು ಪ್ರಭಾವ ಬೀರದಿದ್ದರೂ ಕೂಡ , ಜಗತ್ತನ್ನು ವಾಸ್ತವಿಕ ನಡೆಯ ಕಡೆಗೆ ನಮ್ಮನ್ನು ಕರೆದು ಜಗತ್ತನ್ನು ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತಾನೆ. ತಾಯಿಯಾದವಳು ಜ್ಞಾನ ನೀಡಿದರೆ ತಂದೆಯಾದವನು ಮೌಲ್ಯಗಳನ್ನು ಕಲಿಸಿ ಜೀವನ ರೂಪಿಸುತ್ತಾನೆ.
ಅಪ್ಪನಾದವನು ತನ್ನ ದೊಡ್ಡ ದೊಡ್ಡ ಆಸೆಗಳನ್ನು ಬಲಿಕೊಟ್ಟು ನಮ್ಮ ಚಿಕ್ಕಪುಟ್ಟ ಕನಸುಗಳನ್ನು ಈಡೇರಿಸಲು ಹಾತೊರೆಯುತ್ತಾನೆ ಅಪ್ಪ ಎಂದಿಗೂ ಎಲೆ ಮರೆಯ ಕಾಯಿಯಂತೆ ನಮಗೆ ಅಪ್ಪ ಎಂದ ತಕ್ಷಣ ಬಿಸಿಲು ಮಳೆ ಚಳಿ ಯಾವುದಕ್ಕೂ ಬಗ್ಗದೇ ಹಗಲು ಇರುಳು ಎನ್ನದೆ ದುಡಿದ ನನ್ನ ಪಾಲಿಗೆ ಸರ್ವಸ್ವವಾಗಿ ದ್ದರು .ನಮಗೆ ಏನು ಬೇಕು ಎಂದು ನಾವು ಎಂದು ಚಿಂತಿಸಿದವರಲ್ಲ ನಮ್ಮ ಜೀವನಕ್ಕೆ ಅಗತ್ಯವಾದ ಎಲ್ಲವನ್ನೂ ಪಡೆಯುವ ಶಕ್ತಿಯನ್ನು ನಮ್ಮಲ್ಲಿ ತುಂಬಿದವರು ನಮ್ಮಪ್ಪ.
ಮಾತೃದೇವೋಭವ ಪಿತೃದೇವೋಭವ ಎಂದರೆ ತಂದೆ-ತಾಯಿಯರು ದೇವರಿಗೆ ಸಮಾನ ಇದು ನಮ್ಮ ಹಿಂದೂ ಸಂಸ್ಕೃತಿಯ ಒಂದು ಶಿಕ್ಷಣವಾಗಿದೆ .ತಂದೆ ಮತ್ತು ತಾಯಿ ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ಶ್ಲಾಘನೀಯ ಕಾರ್ಯ ಎಂದು ಹೇಳಬಹುದು. ಅಮ್ಮ ಭೂಮಿಯಂತೆ ಅಪ್ಪ ಆಕಾಶದಂತೆ . ಮಕ್ಕಳಿಗೆ ಅಮ್ಮ ದೇವತೆಯಂತೆ ಕಂಡರೆ ಅಪ್ಪ ಅವರ ಜೀವನದ ರಿಯಲ್ ಹೀರೋ ಆಗಿರುತ್ತಾನೆ ಏನೇ ಒಳಿತು-ಕೆಡುಕುಗಳು ಸಂಭವಿಸಿದರೂ ಅಪ್ಪನ ಮೊರೆಹೋಗುತ್ತಾರೆ. ಅವನು ಸಕಲ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾನೆ. ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೆಲ ಮಕ್ಕಳಿಗೆ ತಂದೆ ಎಂಬ ಅರ್ಥವಾಗದೆ ಹಿರಿಯ ಶ್ರೇಷ್ಠ ಗುರು ಸ್ವಾಮಿ ದೇವರು ಇತ್ಯಾದಿ ಪದಗಳನ್ನು ಕೂಡ ಅಪ್ಪ ಎನ್ನುವ ಪದಕ್ಕೆ ಬಳಸಲಾಗುತ್ತದೆ .
ತಾಯಿಯನ್ನು ಭೂ ಮಾತೆಗೆ ಹೋಲಿಸುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿ ಪಾಠವಿದೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವನು ಸ್ವತಃಅಪ್ಪನಾದ ಬಳಿಕ . ಒಬ್ಬ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ತನ್ನ ಮಕ್ಕಳ ಕೈಯಲ್ಲಿ ಮಾಡಿಸಲು ಬಯಸುತ್ತಾನೆ. ತಾನು ಸಾಧಿಸಲಾಗದ ಗುರಿಯನ್ನು ತನ್ನ ಮಕ್ಕಳಿಂದ ಸಾಧಿಸಲು ಬಯಸುತ್ತಾನೆ .ಅದನ್ನು ಸಾಧಿಸಲು ಹುರಿದುಂಬಿಸುತ್ತಾನೆ. ತಾನು ಬಯಸಿದ್ದನ್ನು ಪಡೆಯಲಾಗದಿದ್ದರೂ ಮಕ್ಕಳಾದರು ಬಯಸಿದ್ದನ್ನು ಪಡೆಯಲಿ ಎಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲ ಮಾಡುತ್ತಾನೆ. ಕಷ್ಟಪಡುತ್ತಾನೆ ಅವರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಾನೆ.
ನಮ್ಮ ಅಪ್ಪ ನಮ್ಮ ಜೀವನದ ಸ್ಫೂರ್ತಿ ನಾವು ಬಾಲ್ಯದಲ್ಲಿದ್ದಾಗ ಹಲವಾರು ನೀತಿ ಕಥೆಗಳನ್ನು ಹೇಳುವ ಮೂಲಕ ನಾವು ನಡೆಯಬೇಕಾದ ಸರಿದಾರಿಯನ್ನು ತೋರಿದ ಗುರುವಾಗಿದ್ದಾರೆ .ನಮ್ಮ ಪ್ರತಿ ಹಂತದಲ್ಲೂ ನಾವು ಮಾಡುವ ತಪ್ಪುಗಳನ್ನು ತಿದ್ದುತ್ತ ಸರಿಗಳನ್ನು ಎತ್ತಿಹಿಡಿಯುತ್ತ ಮಾರ್ಗದರ್ಶನ ಮಾಡುತ್ತ ನಡೆಯಲು ಸೂಚಿಸುತ್ತಿದ್ದ ಸಲಹೆ-ಸೂಚನೆಗಳು ಮಾರ್ಗದರ್ಶನಗಳು ತುಂಬುತ್ತಿದ್ದ ಅತ್ಮವಿಶ್ವಾಸ ಪ್ರತಿಯೊಂದು ವಿಚಾರಗಳು ನನ್ನನ್ನು ಪ್ರತಿಕ್ಷಣವೂ ಬಡಿದೆಬ್ಬಿಸುತ್ತವೆ.
ನಮ್ಮ ಅಪ್ಪನಿಗೆ ನನ್ನನ್ನು ಕಂಡರೆ ಬಹಳ ಹೆಮ್ಮೆ. ಅವರಿಂದು ಹೆಣ್ಣುಮಕ್ಕಳು ಎಂದು ನಮ್ಮನ್ನು ಹೀಯಾಳಿಸಲು ಇಲ್ಲ. ಅವರಿಗೆ ಹೆಣ್ಣು ಮಕ್ಕಳೆಂದರೆ ಸರ್ವಸ್ವ ನಮ್ಮ ಮನೆಯಲ್ಲಿ ನನಗೆ ಮತ್ತು ನನ್ನ ಅಕ್ಕನಿಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತಿದ್ದರು ಹಾಗೆಂದು ಮಗನನ್ನು ನಿರ್ಲಕ್ಷಿಸುತ್ತಿದ್ದರು ಎಂದು ಅರ್ಥವಲ್ಲ .ಮೂವರನ್ನು ಸಮಾನವಾಗಿ ಕಾಣುತ್ತಿದ್ದರು. ಹೆಣ್ಣು ಗಂಡು ಎಂಬ ಭೇದ ನಮ್ಮ ಬಳಿ ಸುಳಿಯಲು ಬಾರದಂತೆ ಎಚ್ಚರ ವಹಿಸಿದರು ನಮ್ಮಪ್ಪ.
ನಮ್ಮ ಸಾಧನೆ ಕಂಡು ಇತರರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ವಿಪರ್ಯಾಸ ಎಂದರೆ ಇಂದು ನನ್ನ ಅಪ್ಪ ನನ್ನ ಮುಂದೆ ಇಲ್ಲ ಹೃದಯಾಘಾತದಿಂದ ಅವರು ನಮ್ಮಿಂದ ದೂರ ಸರಿದ ದಿನ ನನ್ನ ಜೀವನದ ಅತ್ಯಂತ ದುಃಖದ ದಿನವಾಗಿತ್ತು .ಒಟ್ಟಾರೆ ಹೇಳುವುದಾದರೆ ಅಪ್ಪನಿಗೆ ಅಪ್ಪನಿಗೆ ಸಾಟಿ .