ಅಪ್ಪನ ದಿನದ ವಿಶೇಷ

ಕಾವ್ಯ ಸಂಗಾತಿ

ಅಪ್ಪನಿಗೊಂದು ಗಜಲ್

ನಯನ. ಜಿ. ಎಸ್.

ಹೃದಯದ ಗರ್ಭದಲ್ಲಿರಿಸುತ ಪೋಷಿಸಿದೆ ನೀನೆನ್ನ ಪ್ರತಿಫಲವನ್ನೇಕೆ ಬಯಸಲಿಲ್ಲ
ಬಾಳ ನೊಗಕ್ಕೆ ಹೆಗಲಾಗಿ ಹೊತ್ತೆ ನೀನೆನ್ನ ಭಾರವ ಉತ್ಪ್ರೇಕ್ಷೆಯನ್ನೇಕೆ ಬಯಸಲಿಲ್ಲ

ಕಾಡಿ ಕುಗ್ಗಿಸಿ ಎಬ್ಬಿಸಿದ ವ್ಯಥೆಗಳು ನೂರೆಂಟು ತಿರುತಿರುವಿನ ಪಥದ ಉದ್ದಗಲಕೂ
ಬಿದ್ದೆದ್ದ ನನ್ಮೊದಲ ಹೆಜ್ಜೆ ಹೆಜ್ಜೆಗೂ ಗರೆದೆ ಬಾಷ್ಪವ ಅಭಿವ್ಯಕ್ತಿಯನ್ನೇಕೆ ಬಯಸಲಿಲ್ಲ

ಯಶಕೆ ಚಕ್ಷುಗಳ ಅರಳಿಸಿ ಮರೆತೆ ಏಕೆ ಪೇರಿಸಿದ ಅಸ್ಮಿತೆಯ ಸೆಳೆತವ ಎದೆಯಲಿ
ಹಿಗ್ಗಿ ಉಸುರಿದ ದಿವ್ಯಭಾವದ ರಸದಿ ಮೌನಿಯಾದೆ ಪ್ರಶಂಸೆಯನ್ನೇಕೆ ಬಯಸಲಿಲ್ಲ

ಮಿಡಿವ ಎನ್ನುಡಿಯ ಪದ ಪದಕೂ ಲಾಂದ್ರವಾಗಿ ಗಮ್ಯವ ಜತನಗೊಳಿಸಿ ಬೆಳೆಸಿದೆ
ಎತ್ತರೆತ್ತಕ್ಕೇರಿದ ಕುಡಿಯ ಮಂದಹಾಸದಲೇ ಮೆರೆದೆ ಗೌರವವನ್ನೇಕೆ ಬಯಸಲಿಲ್ಲ

ಸತ್ಯಗಳ ಪಥ್ಯದ ಹಿರಿಮೆಯಲಿ ಸವೆಸುತ ಪ್ರತಿಕ್ಷಣಗಳನು ಧನ್ಯಳಾದಳು ‘ನಯನ’
ಮೈವೆತ್ತ ವಿಜಯಕೆ ನಿಸ್ವಾರ್ಥ ರೂವಾರಿಯಾದರೂ ಜ್ಯೇಷ್ಠತೆಯನ್ನೇಕೆ ಬಯಸಲಿಲ್ಲ


Leave a Reply

Back To Top