ಅಪ್ಪನ ದಿನದ ವಿಶೇಷ

ಕಾವ್ಯ ಸಂಗಾತಿ

ಅಪ್ಪ

ಯಾಕೊಳ್ಳಿ .ಯ.ಮಾ

ದುಡಿಮೆ ಮಾತ್ರ
ನಂಬಿ ಬದುಕು
ಎಂದುಲಿದ
ಜಮೀನುದಾರ..

ಇರುವದು ಅಂಗೈ
ಅಗಲ‌ ಭೂಮಿಯಾದರೂ
ಊರ ಬದುಗಳೆಲ್ಲ
ಅವನ ಬೆವರಿಂದ
ಹಸಿರಾದವು

ಬಿದ್ದ ಪ್ರತಿ ಹನಿಯೊಳಗೂ
ಒಡೆಯರ ಖಾಜನೆ
ತುಂಬಿಸುವ
ಇರಾದೆಯಲೆ ಬದುಕಿದ್ದ

ಬಾಳಿನಲಿ ಅತೃಪ್ತಿಯೇ
ಇರದ ಆತ ರಕ್ತ
ಬೆವರಾಗಿಸುತ್ತಲೇ ಹೋದ

ನಿತ್ಯ ಕುಡಿಯುವ ಪ್ರತಿ
ಗುಟುಕಲೂ
ಸೇದುವ ಒಂದೊಂದು
ಜುರಿಯಲೂ
ಸಂಕಟಗಳ ಸುಡುತ್ತಿದ್ದ

ಊರಲ್ಲೇ ಇದ್ದು
ಸಾಯದ ಅಪ್ಪ
ಎಲ್ಲೋ ಹೋಗಿ
ಜೀವ ಬಿಟ್ಟು
ನಿಜವಾದ ವಿಶ್ವಾತ್ಮನಾದ

ತಾನು ಬೆಳೆಯದ
ಅಕ್ಕರಗಳ
ಬೆಳೆಯನು
ಮಕ್ಕಳ ಬಾಳಲಿ
ಬಿತ್ತಿ ಬೆಳಕನೇ ಇತ್ತ

ನೆಟ್ಟಗೇ ತಾಲೂಕು
ಗಡಿ ದಾಟದ
ಅಪ್ಪನ‌ಮೊಮ್ಮಕ್ಕಳೀಗ
ದೇಶದ ಗಡಿದಾಟಿದ್ದಾರೆ

ಆಗಸದ ನಕ್ಷತ್ರವಾದ
ಅಪ್ಪ ನೋಡಿ
ನಲಿಯುತ್ತಿರಬಹುದು

ಶುಭೋದಯ


Leave a Reply

Back To Top