ಕಾವ್ಯ ಸಂಗಾತಿ
ನೀನಿತ್ತ ಹುಟ್ಟು
ಬೆಂಶ್ರೀ ರವೀಂದ್ರ
ಅಪ್ಪ ನಿನಗಾಗಿ ಎಂದೂ ಕವನ ಬರೆಯಲಿಲ್ಲ
ಯಾಕೆಂದರೆ ನನ್ನ ಕಣ್ಣ ಪಾಪೆಯಲ್ಲಿ ಮೂಡಿರಲಿಲ್ಲ ನಿನ್ನ ಚಿತ್ರ ; ಇಂದು
ನೆನಪುಗಳ ಗುತ್ತಿಗೆ ಕೈಯಿಟ್ಟು ಜಾಲಾಡಿಬಿಟ್ಟೆ
ಅದು ತಂಪಾದ ಶುದ್ಧ ನೀರು ; ಗಂಗೆ
ಚುಕುಬುಕು ರೈಲಿಗೆ ತೋರುತ್ತಲಿದೆ
ನಿತ್ಯ ಹಸಿರು ಬಾವುಟ
ಥಟ್ಟನೇಕೆ ತೋರಿದೆ ಬದುಕೆಂಬ
ರೈಲಿಗೆ ಕೆಂಪು ಬಾವುಟ
ಏನು ಅವಸರವಿತ್ತು ತೋಟದ ಸಸಿಗಳು
ಹೂ ಬಿಡುವ ಮುನ್ನ ನಡೆದುಬಿಟ್ಟೆಯಲ್ಲ
ನಿನಗಾದ ಅನುಭವವು ನಮಗಾಗಲೆಂದೆ
ಆದರೆ
ನಮಗಾಗಿ ಬಿಟ್ಟಿದ್ದೆ ಗಟ್ಟಿಗಿತ್ತಿ
ನಿನ್ನ ಹುಡುಗಿಯನಿಲ್ಲಿ
ಎಂದೂ ಉಡುಗಲಿಲ್ಲ ಅವಳ ಧೀಶಕ್ತಿ
ನಿನ್ನ ತೋಟಕೆ ಗಟ್ಟಿ ಬೇಲಿಯ ಕಟ್ಟಿ
ಸಸಿಗಳಿಗೆ ಪಾತಿಯಲಿ ನೀರುಣಿಸಿ
ಗೊಬ್ಬರವನಿತ್ತು ಹಣ್ಣುಗಳು ತೂಗಾಡಿದ್ದು
ನೋಡಿದಳು ಕಣ್ಣು ತುಂಬಾ
ಅವಳ ಕಣ್ಣ ಪಾಪೆಯಲ್ಲಿ ನೀನೇ ಇದ್ದೆ.
ನಿನ್ನೂರಲ್ಲಿ ನಿನ್ನಪ್ಪ ಅಮ್ಮ ಬೆಳೆಸಿದ್ದ
ಆಲವೇ ಆಶ್ರಯ
ನೀನಿಲ್ಲದಿದ್ದರೂ ಚಾಚಿತ್ತು ನಿನ್ನ ಸೂರು
ಅರಿತೆ ನಿನ್ನ
ಹೇಳು ಕೇಳುಗಳ ಹಾಡಿಗೆ ಕಿವಿಯನೊಡ್ಡಿ
ಗಾಂಧಿಯನ್ನು ಮೆಚ್ಚಿದವನ, ಕೃಷ್ಣನ
ಅವಾಹಿಸಿದವನ, ಗೀತೆಯೇ ಆದವನ
ಸಂಸಾರದ ಸಾರ ಹೀರಿ
ಸಿರಿಮುಡಿಯ ಸಂತನಾದವನ
ಸದಾ ಪುಟಿವ ಚೈತನ್ಯವಾಗಿದ್ದ ಸತ್ಯ
ಕಾಯಕ ನಿಷ್ಠನ ಗುರು ಹಿರಿಯರಲಿ ಶಿಷ್ಟನ
ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು
ನಿನ್ನ ಹೆಸರು ಹೆಗಲಲ್ಲಿ, ಅಮ್ಮ ಬಗಲಲ್ಲಿ
ಸಾಗಿರುವ ದೂರ ತಿಳಿಯಲಿಲ್ಲ
ದೋಣಿಸಾಗಲಿ ಜೀವನ ಸಾಗರದಲ್ಲಿ
ನೀನಿತ್ತ ಹುಟ್ಟು ಕೈಬಿಡುವುದಿಲ್ಲ
ಚಂದದ ನುಡಿನಮನ
ಭಾವಪೂರ್ಣ ಕವನ.ಅಭಿನಂದನೆಗಳು
ನುಡಿ ನಮನ ಚೆನ್ನಾಗಿದೆ.
“ನೀನಿತ್ತ ಹುಟ್ಟು ಕೈ ಬಿಡುವುದಿಲ್ಲ”ಅಪ್ಪನ ಬಗ್ಗೆ ಇಂತಹ ಮನ
ಬೆಚ್ಚಗಾಗಿಸುವ ಅನುಭೂತಿ, ಸೊಗಸಾದ ನುಡಿನಮನ.
ಮಾಲತಿಶ್ರೀನಿವಾಸನ್