ಬದುಕು ಹರಿದ ಕೌದಿ

ಕಾವ್ಯ ಸಂಗಾತಿ

ಬದುಕು ಹರಿದ ಕೌದಿ

ಜಬೀವುಲ್ಲಾ ಎಂ. ಅಸದ್

ಬೆಳಕ ದಾರಿಯಲ್ಲಿ
ಕತ್ತಲ ಹೆಜ್ಜೆಗಳ ಸದ್ದು
ಕಾಣದ ಕಣ್ಣುಗಳಿಗೆ
ಕೇಳದ ಕಿವಿಗಳಿಗೆ
ಬಡಬಡಿಸುವ ನಾಲಗೆಯ ಗುದ್ದು
ಎದ್ದು ಹೊರಡಬೇಕು ಮೊದಲು
ಬಯಲಿನೆದೆಯ ಕಡೆಗೆ
ವೈಷ್ಯಮ್ಯದ ಬೇಲಿಗಳ ಹಾದು
ಹಾಡಬೇಕು ಪ್ರೀತಿ – ಶಾಂತಿಯ ಹಾಡು

ನಿಂತ ನೀರಿನ ಬತ್ತದ ದಾಹ
ನೆಲದ ನೋವಿಗೆ
ಮುಗಿಲ ಮುಲಾಮಿನ ಮೋಹ
ನೇಗಿಲಿನ ಗೆರೆಗೆ
ಹಸಿರು ಕನಸಿನ ಬಿತ್ತನೆ
ಹಸಿವಿನ ವಿರುದ್ಧ ಕ್ರಾಂತಿಯ ಚಿಂತನೆ
ಪರಾಪಜಯ ಅಮುಖ್ಯವಿಲ್ಲಿ
ನೆತ್ತರು ಬೇವರಾಗುವ ಹರಿವಿನಲ್ಲಿ
ಗೆದ್ದರೂ ಸೋಲು, ಸೋತರೆ ಸಾವು
ಎಂದಿಗೂ ಮುಗಿಯದ ಹೋರಾಟದ ಜಿದ್ದಾ ಜಿದ್ದಿ
ಹೊಲಿದಷ್ಟು ಬದುಕು
ಹರಿದ ಕೌದಿ!

ಹೀಗೆ ಇರದು ಏನು
ಯಾಖಚಿತ್ ಬದಲಾಗುವುದು ಎಲ್ಲವೂ
ಹೂವರಳಿ ಸುಗಂಧ ಬೀರಿ
ಬಾಡಿ ಮಣ್ಣಾಗುವ ಸರದಿ
ಬರುವುದು ಈ ಶರೀರದ ಪಾಳಿ
ಮರೆಯದಿರಿ ಎಂದಿಗೂ

ಕಾಲ ಕಟ್ಟುವುದಿಲ್ಲ ಕಟ್ಟು ಕಥೆಗಳನ್ನು
ಮನುಷ್ಯರಿಗಷ್ಟೇ ಪ್ರತಿಷ್ಠೆಯ ಹುಚ್ಚು
ಗತವೆಲ್ಲ ಅಜೀರ್ಣದ ಮೋರಿ
ಅರುಗಿಸಲಾಗದು ಸುಡುವ ಸತ್ಯಗಳನ್ನು
ತೂಗಿದಂತೆ ಭಾರದೆಡೆಗೆ ತರಾಜು
ಸತ್ಯಗಳ ವೇಷದಲ್ಲಿ ಸುಳ್ಳುಗಳ ದರ್ಬಾರ್
ಸಹನೆಯ ಮನಸ್ಸುಗಳು ಹಾರಾಜಿಗಿವೆ ಬಜಾರಿನಲ್ಲಿ
ಬೇಕಿಲ್ಲ ಯಾರಿಗೂ
ಮಾನವೀಯತೆ ಸತ್ತಿದೆ, ಹುಷಾರ್!


Leave a Reply

Back To Top