ಸಮ್ಮೋಹನ

ಕಾವ್ಯ ಸಂಗಾತಿ

ಸಮ್ಮೋಹನ

ಮಮತಾ ಶಂಕರ್

ನಿನ್ನ ಮೌನವಷ್ಟೇ ಸಾಕಾದವರ ಮುಂದೆ ಮಾತೇಕೆ ವ್ಯರ್ಥ ಮಾಡುವೆ…
ಕೆಲವೊಮ್ಮೆ ಏನೂ ಮಾತಾಡದಿರುವುದೇ ಅತೀ
ಸಾಹಸದ ಕೆಲಸ

ಎಷ್ಟೇ ಮುರಿದು ಬಿದ್ದಿದೆ ಅಂದರೂ
ಈ ಹೃದಯ ಬಿಟ್ಟು ಕೊಡದೇ ಇರುವುದು ಒಲುಮೆಯನ್ನೇ…. ಇರಬಹುದು

ಎಷ್ಟೊಂದು ಜೋಡಿ ಹಕ್ಕಿಗಳು ಆಕಾಶದಲ್ಲಿ…
ಮತ್ತೆ ಹಸಿರೆಲೆಯ ಮರೆಯಲ್ಲಿ ಮೆರೆಯುವಾಗ
ಕನಸು ಕತ್ತರಿಸಿದ ರೆಕ್ಕೆಗಳ ನೇವರಿಸಿಕೊಳ್ಳುತ್ತಾ
ಕುಳಿತವಳ ನಿಟ್ಟುಸಿರು ಗಾಳಿಗೂ ತಾಕುವುದಿಲ್ಲ

ಜೋಡಿ ಹಕ್ಕಿಗಳ ಬೇರಾಗಿಸಲು ಬೇಡನೇ
ಬರಬೇಕೆಂದೇನಿಲ್ಲ… ಒಂದು ಸಣ್ಣ ನಿರ್ಲಕ್ಷ್ಯ ಸಾಕು

ನವಿರಾದ ಸೀರೆಯುಟ್ಟು ಬಳುಕುವ
ಗಾಜಿನ ಷೋಕೇಸಿನ ಚೆಂದದ ಗೊಂಬೆ
ನೋಡುವ ಎಲ್ಲಾ ಕಣ್ಣುಗಳಿಗೂ
ಸೊಬಗಿಯೇ….

ಸಂಜೆ ದೀಪ ಮುಡಿಸುವ ಹೊತ್ತು
ಅವಳಿಗೆ ಹೊಳೆದು ಹೋಯಿತು
ಉರಿಯದ ಮೊಂಬತ್ತಿಗೆ ಕತ್ತಲನ್ನು ಓಡಿಸುವ ತಾಕತ್ತಿರುವುದಿಲ್ಲ….

ಕೆನ್ನೆ ಮತ್ತು ದಿಂಬನ್ನು ತೋಯಿಸದ ಪ್ರಬುದ್ಧತೆ ಕಣ್ಣೀರಿಗೀಗ

ವಿಷಾದದಲ್ಲಿ ಕಳೆಯುವ ರಾತ್ರಿಗಳು
ಮುಂಗೈಯ ಮೇಲೆ ಬಣ್ಣದ ಚಿಟ್ಟೆಯಾಗಿ ಬಂದು ಕುಳಿತ ಪ್ರೇಮ ಹಾರಿ ಹೋದ ಗಳಿಗೆ ನೆನಪಾಗುತ್ತಿಲ್ಲ…ಕೈಯ ತುಂಬಾ ಉಳಿಸಿಹೋಗಿದೆ ರೆಕ್ಕೆಗಳ ಹುಡಿ ಬಣ್ಣವೀಗ

ಸಂಜೆಗೆಂಪಿನ ಮೋಹಕ ಆಕಾಶ ನೋಡುತ್ತಾ ಅಂದುಕೊಂಡಳು
ಈ ಪ್ರೀತಿ ಎಂಬುದೇ ಹೀಗೆ
ಸದಾ ಸಮ್ಮೋಹನ….


6 thoughts on “ಸಮ್ಮೋಹನ

  1. ಮಮತಾ
    ಮತ್ತೇ ಮತ್ತೇ ಓ ದ ಬೇಕೇನಿಸುವ ಕವಿತೆ ಅಭಿನಂದನೆಗಳು ಗೆಳತಿ

    1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

Leave a Reply

Back To Top