ಆಷಾಢ

ಕಾವ್ಯ ಸಂಗಾತಿ

ಆಷಾಢ

ಹೆಚ್.ಮಂಜುಳಾ

ಇದೇಕೆ ಬಂದಿತೋ ಆಷಾಢ
ಮನಸ್ಸೆಲ್ಲಾ ಕವಿದ ಕಾರ್ಮೋಡ..!

ಹೆಣ್ಣು:
ತವರವರು ಬಂದಾರೆ ಕರೆಯಲು
ನಿಮಗೊಪ್ಪಿಗೆಯೇ ನಾ ಹೊರಡಲು
ತೋಚದು ನನಗೇನೂ ಮಾಡಲು
ಮುಂದಡಿಯಿಡಲೇಕೋ ಹಿಗ್ಗಾಲು ಮುಗ್ಗಾಲು..!

ಗಂಡು:
ನನ್ನವಳಾಗಿ ಮೂರು ದಿನ ಕಳೆದಿಲ್ಲ
ಇದನ್ನಾರು ಮಾಡಿದರೋ ನಮಗಿದು ಸಲ್ಲ
ನಿನ್ನನ್ನು ಅಗಲಿರಲು ನನಗೆ ಮನಸ್ಸಿಲ್ಲ
ಈ ಮನಗಳನ್ನು ಇವರೇಕೆ ಅರಿತಿಲ್ಲ?!

ಹೆಣ್ಣು:
ಬಿರಿದ ಭೂಮಿಗೆ ಸುರಿದಿದೆ ವರ್ಷಧಾರೆ
ಒಣಗಿದ ಲತೆಗೆ ಹರಿದಿದೆ ಹರ್ಷಧಾರೆ
ನಲಿದು ದುಂಬಿಯೊಡಗೂಡಿದೆ ಸುಮಸಿರಿ
ಇದ ನೋಡುತಾ ನಿಮ್ಮನಗಲಿ ನಾ ಹೇಗೆ ಇರಲಿ..?!

ಗಂಡು:
ನೀನಿಲ್ಲದೇ ಸುಳಿಯುವ ಗಾಳಿಯೂ ಬಿರುಸು
ನೀ ಮುಡಿಯದ ಪುಷ್ಪದ ಸುಗಂಧವೂ ಹಳಸು
ಕುಳಿರ್ಗಾಳಿಯ ಶೀತಲತೆಯೂ ಸುಡುವ ಬಗೆ
ಮಳೆ ಹನಿದ ಮಣ್ಣಿನ ಘಮವೂ ಹಗೆ..!

ಹೆಣ್ಣು:
ನಾ ಹೊರಟ ಗಳಿಗೆಯಲಿ ಓ ಮೋಡ ಬಾ ಕವಿದು
ನಾ ಹೊರಟ ದಾರಿಯಲಿ ಓ ಮಳೆಯೇ ನೀ ಸುರಿದು
ಕೆರೆ ಕಟ್ಟೆಗಳೇ ಒಡೆದು ನನ್ನ ದಾರಿಗೆ ಅಡ್ಡವಾಗಿ
ಪಯಣವ ನಿಲ್ಲಿಸಿ ಉಳಿಯಲು ನೀವು ಸಹಕಾರಿಯಾಗಿ…!!


Leave a Reply

Back To Top