ಕಾವ್ಯ ಸಂಗಾತಿ
ಒಂದು ಸುಳ್ಳು
ಅನಸೂಯ ಜಹಗೀರದಾರ
ನೀನು ಸುಳ್ಳು ಹೇಳಿದೆ
ನನಗೆ ಗೊತ್ತಾಗದೆಂದು ತಿಳಿದೆ
ಅಥವಾ ನಿಧಾನವಾಗಿ ಗೊತ್ತಾಗಲೆಂದು ಬಗೆದೆ
ಆ
ಸುಳ್ಳಿನ ಹಿಂದೆಯೇ ನಾನಡೆದೆ
ಕಾರಣ ಕಂಡುಹಿಡಿಯಬಯಸಿದೆ
ಒಂದು ಸುಳ್ಳಿಗಂಟಿದ ಮತ್ತೊಂದು ಸುಳ್ಳು
ಅದರ ಜೊತೆಗೊಂದು ಮಗದೊಂದು
ಪೋಣಿಸುತ್ತಾ ಸರಮಾಲೆಯಾಗಿಸಿ
ನನ್ನ ಕೊರಳಿಗರ್ಪಿಸಿದೆ
ಆದಾಗ್ಯೂ ಅದು ನನಗೆ ಉರುಳೆನಿಸಲಿಲ್ಲ
ಅದು ಬೇರೆಯ ಮಾತು..!!
ಅಪ್ರಿಯ ಸತ್ಯ ಏಕೆ ನುಡಿಯಬೇಕೆಂದೂ
ಸತ್ಯದ ಕಗ್ಗತ್ತಲ ಕಾಡನ್ನು ಏಕೆ ದರ್ಶಿಸಬೇಕೆಂದು
ಬಹು ಎಚ್ಚರಿಕೆಯಲ್ಲಿ ಸುಳ್ಳು ನೀನು ಹೇಳಿದ್ದನ್ನು
ಅದರ ಹಿಂದಿನ ಸತ್ಯವನ್ನು
ನಾನು ಸಜಜವಾಗಿಯೇ ಭೇದಿಸಿದೆ
ಬಹು ಕುತೂಹಲವಿತ್ತು
ನಿನ್ನ ಮೊಗದ ಚರ್ಯೆಯನ್ನು
ಬರಹದ ಗ್ರಾಫಾಲಜಿಯನ್ನು
ದನಿಯ ಕಂಪನ ತರಂಗಗಳನ್ನು
ಒರೆಗೆ ಹಚ್ಚಿದೆ
ಬಹು ಉತ್ಸುಕತೆಯಿಂದ ನಾನು
ನಿನ್ನ ನಡೆಯ ಜಾಡನ್ನು ಅನ್ವೇಷಿಸಿದೆ
ಸುಳ್ಳೊಂದು ಅರಗಿನ ಅರಮನೆಯೆಂದು
ನಿನಗೂ ಗೊತ್ತು
ನನಗೂ…!!
ಮನಃಶಾಸ್ತ್ರದ ಅನ್ವಯತೆ
ಟೆಲಿಪತಿಯ ತನ್ಮಯತೆ
ಇಬ್ಬರಿಗೂ ಗೊತ್ತು..!!
ಅದೂ ಬೇರೆಯ ಮಾತು..!!
ಆದರೆ..,
ಆ..,
ಕಾರಣದಲಿ ಗಟ್ಟಿಯಾಗಿ ತಳವೂರಿತ್ತಲ್ಲ
ಆ ಬೇರು..ಚಿಗುರ ಹಸಿರು
ಅದ ಕಳೆದುಕೊಳ್ಳುವ ಭಯದಲಿ
ನೀ ಸುಳ್ಳು ಹೇಳಿದೆ..
ಇದನ್ನೂ ಸಹಜವಾಗಿಯೇ ನಾ ಭೇದಿಸಿದೆ
ಇನ್ನೇತರ ಭಯ..
ತೊಗೊ ಮಾತಿದು..
ನಿನ್ನ ಸುಳ್ಳನ್ನೂ ಪ್ರೀತಿಸಿದೆ
ಪ್ರೀತಿಸುತ್ತೇನೆ
ಮತ್ತು ಪ್ರೀತಿಸುವೆ..!!