ಕಾವ್ಯ ಸಂಗಾತಿ
ಅನುಸಂಧಾನ
ಶೀಲಾ ಭಂಡಾರ್ಕರ್
ಹುಡುಕುತ್ತೇನೆ ನಿನ್ನನ್ನು
ಲೆಕ್ಕವಿಲ್ಲದ ನಕ್ಷತ್ರಗಳ
ಮಿಣುಕು ಮಿಣುಕು
ನಾಟ್ಯದೊಳಗೆ.
ಆತುರಗಾರ ಚಂದ್ರನೂ
ನಿನ್ನ ನೆನಪಿಸುತ್ತಾನೆ..
ಅವಸರದಿ ಅವಿತುಕೊಳ್ಳುವಾಗ
ಮೋಡದ ಸೆರಗಿನೊಳಗೆ
ಬೀಸಿ ಬರುವ ತಂಗಾಳಿಯೊಂದು
ಸದ್ದಿಲ್ಲದೆ ತುಟಿಗಳಿಗೆ
ಬಿಸಿ ಮುತ್ತಾಗುವ
ತುಂಟ ಸಮಯದಿ
ನೀನೇ ಇರುವೆ
ಆ ಇರುವಿಕೆಯೊಳಗೆ.
ಹಿತ್ತಲ ಮೂಲೆಯ ಗಿಡದಲ್ಲೀಗ
ಅಬ್ಬಲಿಗೆಯ ಶ್ರಾಯ.
ಹೂ ಅರಳುವ ಮೃದು ಮಧುರ
ಪರಿಮಳವಾಗಿ ನೀನಿರುವೆ.
ಗಂಧ ಸುಗಂಧದೊಳಗೆ.
ಸಂಜೆಗಳು ಕೆಂಪಾಗಿ
ಸೂರ್ಯ ಮುಳುಗುವಾಗ
ಕಾಡುವ ನೆನಪಾಗುವೆ..
ಅಂಗಳದಲ್ಲಿ ಆಟವಾಡುವ
ಬುಲ್‍ಬುಲ್ ಜೋಡಿ ಹಕ್ಕಿಗಳ
ಸಲ್ಲಾಪಗಳ ಸದ್ದು ಗದ್ದಲದೊಳಗೆ.
ನಿಶ್ಶಬ್ದವಾದ ನುಡಿಯೊಂದು
ಪಿಸು ಉಸುರಿತು
ಒಳಗೊಳಗೆ,
ಯುಗಗಳಿಂದ ಹುಡುಕುತಿದ್ದ
ನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,
ನಿನ್ನೊಂದಿಗೆ ನನ್ನೊಳಗೆ.
ಶೀಲಾ ಭಂಡಾರ್ಕರ್
ಚೆನ್ನಾಗಿದೆ ಮೇಡಂ ಈ ನಿಮ್ಮ ಸಾಲುಗಳು ‘ಹುಡುಕುತ್ತೇನೆ ನಿನ್ನನ್ನು ”
Congrats
Thank you sir.