ಅಳಿಸದ ಕಾಮನಬಿಲ್ಲು‌

ಕಥಾ ಸಂಗಾತಿ

ಅಳಿಸದಕಾಮನಬಿಲ್ಲು‌

ಮಧುಕರ್ ಬಳ್ಕೂರು

ಮದನ್ ಒಬ್ಬ ಬಿಲ್ಡಿಂಗ್ ಆರ್ಕಿಟೆಕ್ಟರ್. ಜೊತೆಗೆ ಚಿತ್ರಕಲಾಕಾರ. ವೃತ್ತಿ ಪ್ರವೃತ್ತಿಗಳೆರಡರಲ್ಲೂ ಕಲಾವಿದನಾದ ಅವನು ನಗರದ ಅದೆಷ್ಟೊ ಕಟ್ಟಡಗಳಿಗೆ ಅಂದ ಚೆಂದದಿಂದ ಜೀವ ಕೊಟ್ಟಿದ್ದ. ತನ್ನ ಜೀವನವನ್ನು ಕೂಡಾ ಸುಂದರ ಕಲಾಕೃತಿಯನ್ನಾಗಿಸಬೇಕೆಂದು ಕನಸು ಕಂಡಿದ್ದ. ಆದರೆ ಆರಂಭದಲ್ಲೆ ಬಿರುಗಾಳಿಯೊಂದು ಬಡಿದು ಅವನ  ಕನಸು ಮೇಲೆಳದಂತಾಯಿತು. ಹೌದು,

ಮದುವೆಯಾದ ಕೆಲವೇ ವರುಷಗಳಲ್ಲಿ ಅವನ ಮಡದಿ ತೀರಿಕೊಂಡಿದ್ದರು. ಮರುಮದುವೆ ಕಷ್ಟವಿಲ್ಲವಾದರೂ ಮಗ ವಿನೋದನ ಕಾರಣಕ್ಕಾಗಿ ಆ ಯೋಚನೆ ಮಾಡಿರಲಿಲ್ಲ. ತನಗೆ ಸಂಗಾತಿ ಸಿಕ್ಕಿದರೂ ಮಗನಿಗೆ ತಾಯಿ ಪ್ರೀತಿ ಸಿಗುವ ಬಗ್ಗೆ ಅವನಿಗೆ ಅನುಮಾನವಿತ್ತು. ಆದರೆ ವಿನೋದ ಮಾತ್ರ ತಾಯಿಯ ಪ್ರೀತಿ ಕಾಣದೆ ಮೂಢಿಯಾಗಿ ಹೋದ. ತಂದೆ ಮೇಲೆ ಪ್ರೀತಿ ಗೌರವಗಳಿದ್ದರೂ ಬೆರತು ಮಾತನಾಡಲು ಹಿಂಜರಿಕೆ. ತಂದೆಯೇ ಮಾತನಾಡಿಸ ಬಂದರೂ ಅವನು ದೂರ ದೂರ. ಮದನ್ ಗೆ ಕುಂಚವೇ ಅವನ ಪ್ರಪಂಚವಾಗಿತ್ತು. ಅವನು ತನ್ನ ಕೆಲಸಗಳಲ್ಲೆ ಮುಳುಗಿಹೋದ. ಮಗ ತನ್ನ ಲೋಕದಲ್ಲೆ ಕಳೆದುಹೋದ. ತಂದೆ ಮಗನ ನಡುವೆ ಭಾಂಧವ್ಯ ಇರಬೇಕಾದ ಕಡೆ ಅಂತರ ಕಾಣಿಸಿಕೊಂಡಿತು. ಇದು ದಿನದಿಂದ ದಿನಕ್ಕೆ ಜಾಸ್ತಿಯಾಯಿತು. ಮದನ್ ಗೆ ಇದೇ ಚಿಂತೆಯಾಯಿತು. ಬರುಬರುತ್ತಾ ಈ ಚಿಂತೆ ಅವನನ್ನು ಖಿನ್ನತೆಗೆ ತಳ್ಳಿತು. ತನ್ನ ಈ ಕಷ್ಟವನ್ನು ಫ್ಯಾಮಿಲಿ ಫ್ರೆಂಡ್ ಆದ ರಾಜೀವನಲ್ಲಿ ತೊಡಿಕೊಂಡ. ಮಗನಲ್ಲಿ ತನ್ನ ಬಗೆಗಿನ ಈ ಉದಾಸೀನತೆ ರಾಜೀವ್ ಗೆ ಮೊದಲೇ ತಿಳಿದಿತ್ತು. ಅದರಲ್ಲೂ ವಿನೋದ್, ರಾಜೀವ್ ನಲ್ಲೆ ಹೆಚ್ಚು ಸಲುಗೆ ಪ್ರೀತಿಯನ್ನು ಹೊಂದಿದ್ದ. ರಾಜೀವ್ ದಂಪತಿಗಳಿಗೆ ಬೇರೆ ಮಕ್ಕಳಿರಲಿಲ್ಲ. ಅವರು ವಿನೋದನನ್ನು ತಮ್ಮ ಸ್ವಂತ ಮಗನಂತೆಯೆ ಕಾಣುತ್ತಿದ್ದರು. ಇದೆಲ್ಲ ಗೊತ್ತಿದ್ದ ಮದನ್, ರಾಜೀವ್ ದಂಪತಿಗಳಿಗೆ ತನ್ನ ಮಗನನ್ನು ದತ್ತು ನೀಡಿದರೆ ಹೇಗೆ ಅಂತೆಲ್ಲ ಯೋಚಿಸಲಾರಂಭಿಸಿದ. ಕಡೆ ಪಕ್ಷ ತಂದೆ ತಾಯಿ ಇಬ್ಬರ ಪ್ರೀತಿಯೂ ಅವನಿಗೆ ಸಿಕ್ಕಿ ಅವನು ಸುಖವಾಗಿರುತ್ತಾನೆ ಹಾಗೂ ರಾಜೀವ್ ದಂಪತಿಗಳಿಗೂ ಮಕ್ಕಳಿಲ್ಲ ಅನ್ನೊ ಕೊರಗು ನೀಗಿದಂತಾಗಿ ಮುಂದೆ ಅವರು ಕೂಡಾ ನೆಮ್ಮದಿಯಿಂದಿರುತ್ತಾರೆ ಅನ್ನೊ ಆಲೋಚನೆ ಅವನದು. ಈ ನಿರ್ಧಾರವನ್ನೆ ರಾಜೀವನಲ್ಲಿ ಹೇಳಿಕೊಂಡ. ರಾಜೀವ್ ಗೆ ಮನಸ್ಸಿತ್ತಾದರೂ ಈ ಹೊತ್ತಿಗೆ ಅದಕ್ಕೊಪ್ಪಲು ಮನಸ್ಸು ಬರಲಿಲ್ಲ. ಬದಲಾಗಿ ತನ್ನ ಗೆಳೆಯ ಮೊದಲು ಖಿನ್ನತೆಯಿಂದ ಹೊರಬರುವುದು ಬೇಕಿತ್ತು. ಅವನು ಸಿಟಿಯ ಪ್ರಸಿದ್ದ ಮನೋವೈದ್ಯರಾದ ಮೇಘನಾರನ್ನು ಕಾಣಲು ಹೇಳಿದ. ನಂತರ ಎಲ್ಲವೂ ಸರಿ ಹೋಗುವುದಾಗಿ ಸಮಾಧಾನಿಸಿದ.

ಡಾಕ್ಟರ್ ಮೇಘನಾ ಹೆಸರಾಂತ ಮನೋವೈದ್ಯರಾಗಿದ್ದರು. ಸಿಟಿಯ ವೇಗದ ಜೀವನಕ್ಕೆ ಬಲಿಯಾಗಿ ಮನಸಿನ ಸಮತೋಲನ ಕಳೆದುಕೊಂಡ ಅದೆಷ್ಟೊ ಮಂದಿಗೆ ತಮ್ಮ ಮಾತುಗಳಿಂದ ಬೆಳಕಾಗಿದ್ದರು. ಮದನ್ ಕೂಡಾ ಅದೇ ಆಶಾಭಾವನೆಯಲ್ಲೆ ಅವರನ್ನ ಭೇಟಿಯಾಗಲು ಹೋದ.

ಆದರೆ ಆ ಒಂದು ಭೇಟಿ ಆಶಾಭಾವನೆಗೂ ಮಿಗಿಲಾಗಿ ತನ್ನ ಕನಸಿಗೆ ಮತ್ತೆ ಜೀವ ತರುವ ಗಳಿಗೆಯಾಗಿರುತ್ತೆ ಅಂತ ಅವನಂದುಕೊಂಡಿರಲಿಲ್ಲ. ಹೌದು, ಅವನ ಪಾಲಿಗೆ ಆ ಒಂದು ದಿನ ಹೋಳಿ ಹುಣ್ಣಿಮೆಯ ದಿನವೇ ಆಯಿತು. ಅವರನ್ನ ನೋಡಿದ ಮೊದಲ ನೋಟಕ್ಕೆನೆ ಅವನ ಹೃದಯ ಖಾಲಿ ಹಾಳೆಯಾದಂತಾಯಿತು. ಅವರು ಮೆಲುದನಿಯಲ್ಲಿ ಹೇಳಿದ ಹಲೋ ಎಂಬ ಅಣಿಮುತ್ತೆ ಆ ಹಾಳೆಗೆ ಬಣ್ಣವಾಗಿ ಬಡಿದಂತಾಯಿತು. ಕಲಾವಿದ ಮದನ್ ಮೊದಲ ಬಾರಿಗೆ ಕುಂಚದ ಸ್ಪರ್ಶವನ್ನು ಅನುಭವಿಸಿದಂತಾದ. ಆ ಸ್ಪರ್ಶಕ್ಕೆ ಮನಸಿನಲ್ಲಿ ಮಡುಗಟ್ಟಿದ ಖಿನ್ನತೆಯೆಲ್ಲಾ ಮಾಯವಾಗಿತ್ತು. ಮದನ್ ಅವರೆದುರು ಮಾತಾನಾಡುತ್ತಲೆ ಹೋದ. ತನ್ನ ಮಗ ತನ್ನಿಂದ ದೂರವಾಗುತ್ತಿರುವುದರ ನೋವನ್ನೆಲ್ಲಾ ತೊಡಿಕೊಂಡ. “ಮೊದಲು ನೀವು ನಿಮ್ಮ ಮಗನನ್ನು ಒಳ್ಳೆಯ ಸ್ನೇಹಿತನನ್ನಾಗಿ ನೋಡಿ. ನಿಧಾನವಾಗಿ ಅವನ ಆಸಕ್ತಿಗಳನ್ನ ತಿಳಿದುಕೊಳ್ಳಿ. ಅವನ ಜೊತೆ ಏನಾದರೂ ಆಟವಾಡಿ. ಆಟೋಟಗಳು ಎಂತವರನ್ನಾದರೂ ಹತ್ತಿರನನ್ನಾಗಿಸುತ್ತೆ. ಆಲ್ ದಿ ಬೆಸ್ಟ್. ನಿಮ್ಮ ಬದುಕು ಹಸಿರಾಗಿರಲಿ” ಅಂತಾ ಹೇಳಿ ಅವನ ಕೈ ಕುಲಕಿದರು. ಈ ಮೂಲಕ ತನಗೆನೆ ತಿಳಿಯದಂತೆ ಅವನ ಹೃದಯದಲ್ಲಿ ಕಾಮನಬಿಲ್ಲನ್ನ ಮೂಡಿಸಿದರು.

ಅಲ್ಲಿಂದ ಹಿಂತಿರುಗಿದ ಮದನ್ ಗೆ ಆ ಕಾಮನಬಿಲ್ಲು ಅಳಿಸಲಾಗದ್ದು ಎನ್ನುವುದು ಖಾತ್ರಿಯಾಗಿಹೋಗಿತ್ತು. ಆ ಮಟ್ಟಿಗೆ ಅವರ ವ್ಯಕ್ತಿತ್ವ ಅವನನ್ನು ಆಕರ್ಷಿಸಿಬಿಟ್ಟಿತ್ತು. ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದು ಬಯಸಿದವನಿಗೆ ಒಂದು ವಿಷಯ ತಿಳಿಯಿತು. ಅವರು ಕೂಡಾ ತನ್ನಂತೆ ಸಂಗಾತಿಯನ್ನು ಕಳೆದುಕೊಂಡವರು ಹಾಗೆಯೆ ತನಗೆ ಮಗನಿರುವಂತೆಯೆ ಅವರಿಗೂ ಪ್ರತಿಕ್ಷಾ ಅನ್ನೊ ಮಗಳಿದ್ದಾಳೆಂದು. “ಜೀವನದಲ್ಲಿ ನನಗಿರುವ ಒಂಟಿತನ ಅವರಿಗೂ ಇದೆ. ವಿಚಿತ್ರ ಎಂದರೆ ನಾನು ನಿರ್ಜೀವ ವಸ್ತುವಿಗೆ ಕಲ್ಪನೆ ಭಾವನೆಯಿಂದ ಜೀವ ತುಂಬಿದರೆ, ಅವರು ಜೀವ ಇರುವ ಮನುಷ್ಯನಲ್ಲಿ ಜೀವಂತಿಕೆ ಸತ್ತಾಗ ಜೀವ ತುಂಬುವರು. ಆದರೆ ನನ್ನ ಪಾಲಿಗೆ ಶಾಶ್ವತ ಸಂಜೀವಿನಿಯಾಗಿ ನಿಲ್ಲುತ್ತಾರಾ…? ಗೊತ್ತಿಲ್ಲ. ಅದು ಸಾಧ್ಯವಾ..? ಯಾಕಾಗಬಾರದು.? ಕೊನೆಪಕ್ಷ ಒಂದು ಶಾಶ್ವತ ಸ್ನೇಹವಾದರೂ…? ಆದರೆ ಹೃದಯದಲ್ಲಿ ಅವರು ಮೂಡಿಸಿದ ಕಾಮನಬಿಲ್ಲು ಬೇರೆನೇ ಹೇಳುತ್ತಿದೆ. ಅದು ಬರೀ ಸ್ನೇಹವಲ್ಲ. ಅದಕ್ಕೂ ಹೆಚ್ಚಿನದೇ ಎಂದು..! ಹೌದು, ನನ್ನಿ ಈ ಬದುಕನ್ನು ಕಲಾಕೃತಿಯ ಹಾಗೆ ಕಟ್ಟಿಕೊಳ್ಳಬೇಕೆಂಬ ಕನಸಿಗೆ ಮತ್ತೆ ಜೀವ ಬರಿಸಿದವರೇ ಅವರು!! ಅವರಿಲ್ಲದೆ ನನ್ನಿ ಕನಸು ಪೂರ್ಣವಾಗದು” ಹಾಗಂದುಕೊಂಡವನೆ ಮದನ್ ತಡಮಾಡಲಿಲ್ಲ. ಅವರ ಬಳಿ ಹೋಗಿ ಸ್ನೇಹ ಹಸ್ತ ಚಾಚಿದ. ಅವರು ಕೂಡಾ ಅದೇ ಮನಸಲ್ಲೆ ಕೈ ಜೋಡಿಸಿದರು. ತಾವೊಬ್ಬ ಡಾಕ್ಟರ್ ಎಂಬ ಯಾವ ಭಾವನೆಯಿಲ್ಲದೆ ಸಹಜ ಹೆಣ್ಣು ಮಗಳಾಗಿ ಬೆರೆತರು. ಮದನ್ ಗೂ ಇದು ಇಷ್ಟವಾಗಿತ್ತು. ಇಬ್ಬರದು ಮಧ್ಯ ವಯಸು, ಪ್ರಬುದ್ಧ ಮನಸು. ದೈಹಿಕ ವಾಂಛೆಗಳಿಗಿಂತಲೂ ಹೆಚ್ಚಾಗಿ ಮಾನಸಿಕ ಸಾಂಗತ್ಯಕ್ಕಾಗಿ ಹಂಬಲಿಸುತ್ತಿದ್ದರು. ಅದಾಗಲೇ ಅವರ ನಡುವೆ ಒಲವು ಹೆಮ್ಮರವಾಗಿ ಬೆಳೆದಿತ್ತು. ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಹಾಗೂ ಆ ಪರಿಶುದ್ಧ ಪ್ರೀತಿಗೆ ಯಾವಂದು ಅಡೆತಡೆಗಳಿರಲಿಲ್ಲ. ಆದರೆ ಪ್ರೀತಿ ಬಂಧನವಾಗಲು ಮದನನ ಮನಸ್ಸು ಕಾಯುತ್ತಿತ್ತು. ಅದೊಂದು ದಿನ ಮದನ್ ಮದುವೆಯ ಪ್ರಸ್ತಾಪವನ್ನು ಅವರಲ್ಲಿ ಹೇಳಿಕೊಂಡ. ಮೇಘನಾರ ಮನಸ್ಸಿನಲ್ಲಿ ಇದೆ ಇತ್ತಾದರೂ ಮಗಳು ಪ್ರತಿಕ್ಷಾಳ ಭವಿಷ್ಯ ಒಂದು ಹಂತಕ್ಕೆ ಬರುವವರೆಗೂ ಇದು ಸಾಧ್ಯವಿಲ್ಲವೆಂದರು. ಮದನ್ ಗೂ ಇದೇ ಸರಿ ಎನಿಸಿತು. ಅಲ್ಲಿಯವರೆಗೂ ತಾವು ಮಕ್ಕಳ ಮುಂದೆ ಜೊತೆಯಾಗಿ ಕಾಣಿಸಿಕೊಳ್ಳುವುದು ಸೂಕ್ತವಲ್ಲ ಅನ್ನೊ ತೀರ್ಮಾನಕ್ಕೂ ಬಂದರು. ಇಬ್ಬರು ತಮ್ಮ ತಮ್ಮ ಮಕ್ಕಳ ಮನಸು, ಅವರ ಓದು, ಅವರ ವಿಚಾರಧಾರೆಗೆ ಹೆಚ್ಚಿನ ಒತ್ತು ಕೊಡುವ ಮನಸ್ಸು ಮಾಡಿದರು. ಅಲ್ಲಿಂದ ಅವರ ಪರಸ್ಪರ ಬೇಟಿ ಕಡಿಮೆಯಾಯಿತು. ಮಾತುಕತೆ, ಸ್ನೇಹ ಸಲ್ಲಾಪ ಫೋನ್ ಕಾಲ್ ಗಷ್ಟೆ ಸೀಮಿತವಾಯಿತು.

ಹೀಗೆ ವರುಷಗಳು ಸರಿದವು. ವಿನೋದ್ ಇದೀಗ ಬೆಳೆದು ನಿಂತಿದ್ದ. ಮೆಡಿಕಲ್ ಓದುತ್ತಿದ್ದ. ಇನ್ನು ಮದನ್, ಮೇಘನಾರವರು ಹೇಳಿದ ಸೂತ್ರವನ್ನು ಪಾಲಿಸಿದ್ದರ ಪರಿಣಾಮ ವಿನೋದ್ ತುಂಬಾನೆ ಬದಲಾಗಿದ್ದ. ವಿನೋದ್ ಮದನ್ ಗೆ ತುಂಬಾನೆ ಹತ್ತಿರನಾಗಿದ್ದ. ಇದೇ ಖುಷಿಯನ್ನು ಅವನು ಆಗಾಗ ಮೇಘನಾರವರ ಬಳಿ ಹೇಳಿಕೊಳ್ಳುತ್ತಲಿದ್ದ. “ಒಂದು ಹಂತದಲ್ಲಿ ಅವನು ನನ್ನಿಂದ ದೂರ ಆದ ಅಂತಲೇ ತಿಳಿದಿದ್ದೆ. ಆದರೆ ಈಗ ನೋಡಿ, ಒಂದು ಗಂಟೆ ಅವನ ಜೊತೆ ಮಾತನಾಡಿಲ್ಲ ಅಂದ್ರೆ ಚಡಪಡಿಸೋಕೆ ಶುರುಮಾಡ್ತೀನಿ. ನಿಮಗೆ ಎಷ್ಟು ಥಾಂಕ್ಸ್ ಹೇಳಿದ್ರುನೂ ಕಮ್ಮಿನೆ ಮೇಘನಾ. ಈಗಲೂ ಅವನ ಜೊತೆ ಶಟ್ಲ್, ಚೆಸ್ ಎಲ್ಲಾ ಆಡ್ತೀನಿ. ಶಟ್ಲ್ ನಲ್ಲಿ ಅವನ ಶಾಟ್ ಫೊರ್ಸ್ ಜೋರಾಗೆ ಇದೆ. ಅದಕ್ಕೆ ರಿಪ್ಲೈ ಕೊಡೋಕೆ ಆಗದೆ ಸೋಲ್ತಾ ಇರ್ತೀನಿ. ಮಗನ ಎದುರು ಸೋಲೋದು ಕೂಡಾ ಒಂಥರಾ ಖುಷಿ ಕೊಡುತ್ತೆ. ಆದರೆ ಚೆಸ್ ನಲ್ಲಿ ಅವನ ನಡೆ ತುಂಬಾನೆ ನಿಗೂಢವಾಗಿರುತ್ತೆ! ಅವನು ನನ್ನಿಂದ ಕೆಲ ವಿಷಯಗಳನ್ನ ಮುಚ್ಚಿಡ್ತಾ ಇದಾನೆನೋ ಅನ್ನಿಸುತ್ತೆ! ಮೊನ್ನೆ ಹೀಗಾಯ್ತು. ಅವನು ತನ್ನ ಫ್ರೆಂಡ್ಸ್ ಜೊತೆ ಬಾರಲ್ಲಿ ಪಾರ್ಟಿ ಮಾಡ್ತಿದ್ದ. ನಾನದನ್ನ ದೂರದಲ್ಲೆ ನೋಡಿದೆ. ಅವನು ಕುಡಿಯೋಕೆ ಬೇರೆ ಕಲ್ತಿದಾನೆ ಅನ್ನೊ ಬೇಸರವಿಲ್ಲ. ಆದರೆ ಅದನ್ನು ಕೂಡಾ ನನ್ನ ಜೊತೆಗೆನೆ ಮಾಡಬೇಕು ಅನ್ನೊದು ನನ್ನ ಆಸೆ. ಬೆಳೆದ ಮಗನಿಗೆ ವಿಸ್ಕಿ ಸೋಡಾ ಹದವಾಗಿ ಮಿಕ್ಸ್ ಮಾಡಿಕೊಟ್ಟು ಅವನ ಜೊತೆಯಲ್ಲಿ ಕುಡಿಯುವ ಆನಂದವೇ ಬೇರೆ. ಅಲ್ಲಿ ಮಕ್ಕಳನ್ನ ನಾವಾಗಿ ಹಾಳ್ ಮಾಡ್ತಾ ಇದೀವಿ ಅನ್ನೊ ಫೀಲ್ ಇರಲ್ಲ. ಅಲ್ಲಿ ಒಂದು ಕಂಟ್ರೊಲ್ ಇರುತ್ತೆ. ಹಾಗೆಯೆ ನನಗೂ ಫ್ರೆಂಡ್ಲಿ ಅನ್ನೋ ಫೀಲ್ ಬರುತ್ತೆ. ಇಂತಾ ಒಂದು ಕಂಪನಿನಾ ನಾನು ಅವನಲ್ಲಿ ಬಯಸೋದು ತಪ್ಪಿಲ್ಲಾ ಅಂತಿನಿ.. ನೀವೇನಂತೀರಿ…?”

ಮೇಘನಾ ‘ಹೌದು’ ಎಂಬಂತೆ ನಗು ಬೀರಿದರು. ನಂತರ ಮೌನದಲ್ಲಿ ಅವನನ್ನೊಮ್ಮೆ ನೋಡಿ ಹೀಗಂದರು, “ಮಕ್ಕಳೆದುರು ಪ್ರೆಂಡ್ಲಿಯಾಗಿರುವುದರಿಂದ ಒಂದು ಲಾಭವಿದೆ ಮದನ್, ಅವರು ನಮ್ಮ ಪ್ರತಿ ಹೆಜ್ಜೆಯನ್ನು ಅರ್ಥ ಮಾಡ್ಕೊತಾರೆ‌. ನಮ್ಮ ಪ್ರತಿಕ್ಷಾಳನ್ನೆ ತೆಗೆದುಕೊಳ್ಳಿ, ನನಗಾಗ ಬೇರೆ ಬೇರೆ ಕಡೆಯಿಂದ ಮದುವೆ ಪ್ರಸ್ತಾಪ ಬರುತ್ತಿತ್ತು. ನಿಮಗೆ ಪ್ರತಿಕ್ರಯಿಸಿದಂತೆ ನಾನು ಅವಳ ವಿಷಯಕ್ಕಾಗಿಯೆ ತಿರಸ್ಕರಿಸಿದ್ದೆ. ಅದು ಅವಳಿಗೆ ತಿಳಿಯಿತು. ಆಗ ಅವಳಂದ ಮಾತು ನೆನಪಾದ್ರು ಸಾಕು. ನಾನು ತುಂಬಾ ಸೆಕ್ಯೂರ್ ಅನ್ನೊ ಫೀಲ್ ಬರುತ್ತೆ. ಬರೀ ಹತ್ತು ವರುಷ ಆಗವಳಿಗೆ. ಮಮ್ಮಿ, ನೀನು ನನ್ನ ಬಗ್ಗೆ ಯೋಚನೆ ಮಾಡಬೇಡ. ನಾನು ನನ್ನ ಎಲ್ಲಾ ಕೆಲಸಗಳನ್ನು ಮಾಡ್ಕೊತಿನಿ ನೀನು ಮದುವೆ ಆಗು ಅಂದಳು. ಅವಳನ್ನೊಮ್ಮೆ ಅಪ್ಪಿಕೊಂಡವಳೆ ಕಣ್ಣೀರಾಗಿದ್ದೆ. ನನ್ನೆದೆ ತುಂಬಿ ಬಂದಿತ್ತು. ಆ ವಯಸ್ಸಿಗೆನೆ ಅವಳು ಪ್ರಬುದ್ಧಳಾಗಿದ್ದಳು. ನನ್ನನ್ನು ತುಂಬಾನೆ ಅರ್ಥ ಮಾಡಿಕೊಂಡಿದ್ದಳು. ಆದರೆ ನನಗೆ ನನ್ನ ಕರ್ತವ್ಯವನ್ನು ಅರ್ಧದಲ್ಲೆ ನಿಲ್ಲಿಸೋಕೆ ಇಷ್ಟ ಇರಲಿಲ್ಲ. ಈಗಂತೂ ಅವಳು ದೊಡ್ಡವಳಾಗಿದ್ದಾಳೆ. ಮೆಡಿಕಲ್ ಓದುತ್ತಿದ್ದಾಳೆ. ತನ್ನ ಜೀವನ ಸಂಗಾತಿಯನ್ನೆ ಅವಳೇ ಆಯ್ಕೆ ಮಾಡಿಕೊಂಡಿದಾಳೆ. ಹುಡುಗಾನೂ ನೋಡೋಕೆ ಮುದ್ದಾಗಿದಾನೆ. ಮೆಡಿಕಲ್ ಓದ್ತಿದಾನೆ. ಹೆಸರು ವಿನೋದ್. ಸಾಕಷ್ಟು ಬಾರಿ ನಮ್ಮ ಮನೆಗೆ ಬಂದಿದಾನೆ. ನನಗೂ ನನ್ನ ಫ್ಯಾಮಿಲಿ ಮೆಂಬರ್ ಏನೋ ಅನ್ನಿಸುವಷ್ಟು ಹತ್ತಿರವಾಗಿದಾನೆ. ನನಗಿನ್ನೆನು ಬೇಕು..? ಬಹುಶಃ ಇನ್ಮುಂದೆ ನನ್ನ ಬಗ್ಗೆ , ಐ ಮಿನ್ ನಮ್ಮ ಬಗ್ಗೆ ಯೋಚನೆ ಮಾಡೊ ಟೈಮು ಬಂತು ಅಂದುಕೋತಿನಿ” ಎನ್ನುತ್ತಾ ಪರೋಕ್ಷವಾಗಿ ತಮ್ಮ ಮದುವೆಯ ಬಗ್ಗೆ ನೆನಪಿಸಿದರು.

ವಿನೋದ್ ಅಂತಾ ಹೆಸರು ಕೇಳುತ್ತಲೇ ಮದನ್ ಗೆ ಸಿಡಿಲು ಬಡಿದಂತಾಯಿತು. ಅವನು ಮತ್ತೊಮ್ಮೆ ಆ ಹೆಸರನ್ನ ಕನ್ಫರ್ಮ್ ಮಾಡಿಕೊಂಡ. ಈ ಬಾರಿ ಮೇಘನಾರ ಮುಖದಲ್ಲಿ ಗಾಬರಿ ಕಾಣಿಸಿತು. ತನ್ನ ಮಗಳಾ ಮದನ್ ನ ಮಗನನ್ನು ಪ್ರೀತಿಸುತ್ತಿರುವುದು.!! ಯಾಕೊ ಅವರಿಗೆ ಕಣ್ಣು ಕತ್ತಲಾಗಿ ತಲೆ ಸುತ್ತು ಬಂದು ಬೀಳುವಂತಾದರು. ಮದನ್ ಅವರನ್ನು ಎತ್ತಿ ಹಿಡಿದು ಆಲಂಗಿಸಿಕೊಂಡ. ಆದರೇನು… ಭಾವನೆಗಳು ಒಂದೇ ಏಟಿಗೆ ಒಡೆದು ಚೂರಾಗಿದ್ದವು. ವಿನೋದ್ ಪ್ರತಿಕ್ಷಾ….. ಯಾಕೊ ಮದನನ ಮನಸ್ಸು ನಂಬಲೇ ಇಲ್ಲ.

ಮದನ್ ವಿನೋದನನ್ನು ಈ ಬಗ್ಗೆ ವಿಚಾರಿಸಿದ. ವಿನೋದ ಕೂಡಾ ಹಿಂಜರಿಕೆಯಿಂದಿಲೇ  ಹೌದು ಎನ್ನುತ್ತಾ ಒಪ್ಪಿಕೊಂಡ. “ಡ್ಯಾಡಿ, ನಾನು ಪ್ರತಿಕ್ಷಾ ಕಳೆದ ಒಂದು ವರುಷದಿಂದ ಪ್ರೀತಿಸ್ತಾ ಇದೀವಿ. ಅವಳು ತುಂಬಾ ಒಳ್ಳೆಯ ಹುಡುಗಿ. ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವಳಾದರೂ ಸ್ವಭಾವ ಬುದ್ದಿಯಲ್ಲಿ ನನಗಿಂತಲೂ ದೊಡ್ಡವಳು. ಅವಳಿಗೆ ಅಪ್ಪ ಇಲ್ಲ. ಅವಳ ಅಮ್ಮ ಫೇಮಸ್ ಮನೋವೈದ್ಯೆ. ಡಾಕ್ಟರ್ ಮೇಘನಾ ಅಂತ. ಅವರು ಕೂಡಾ ಅಷ್ಟೆ ಒಳ್ಳೆಯವರು. ನನಗಂತೂ ಅವರನ್ನ ನೋಡ್ತಾ ಇದ್ರೆ ನನ್ನ ಅಮ್ಮನೆನೋ ಅನಿಸುತ್ತೆ. ಬಹುಶಃ ಹಿಂದಿನ ಜನ್ಮದಲ್ಲಿ ಅವರು ನನಗೆ ಅಮ್ಮನಾಗಿದ್ದಿರಬೇಕು. ನಾನಂತೂ ಅಮ್ಮನನ್ನು ನೋಡಿಲ್ಲ. ಸಂಗಾತಿ ಹಾಗೂ ತಾಯಿ ಇಬ್ಬರು ನನಗೆ ಸಿಕ್ತಿದಾರೆ. ನಾನು ತುಂಬಾ ಅದೃಷ್ಟವಂತ ಅಂತ ನನಗೆ ಈಗ ಅನ್ನಿಸ್ತಾ ಇದೆ. ಐ ಯಾಮ್ ಸಾರಿ ಡ್ಯಾಡ್, ನೀವು ಇದಕ್ಕೆ ವಿರೋಧಿಸಲ್ಲ ಅಂತಾ ಗೊತ್ತು, ಆದ್ರು ಇಷ್ಟು ದಿನ ಇದನ್ನ ನಿಮ್ಮ ಬಳಿ ಹೇಳಿಕೊಳ್ಳಲಾಗಲಿಲ್ಲ. ಈಗ ಅಂತೂ ನನಗೆ ತುಂಬಾನೆ ಖುಷಿಯಾಗ್ತ ಇದೆ. ನೀವೇನು ತಿಳ್ಕೊಳ್ಳಲ್ಲ ಅಂದ್ರೆ, ಇದೇ ಖುಷಿಗೆ ನಿಮ್ಮ ಜೊತೆ ಡ್ರಿಂಕ್ ಮಾಡೋಣ ಅಂತಾ. ನೀವು ನನಗೆ ಕಂಪನಿ ಕೊಡಬೇಕು. ನೀವೇ ಹೇಳ್ತಾ ಇದ್ರಿ, ಮನಸ್ಸು ಖುಷಿಯಾಗಿದ್ದಾಗಲೆ ಕುಡಿಬೇಕು. ದುಃಖ ಇದ್ದಾಗ ಅಲ್ಲಾ ಅಂತ. ಪ್ಲೀಸ್ ಬನ್ನಿ” ಎನ್ನುತ್ತಾ ಅವನ ಕೈ ಹಿಡಿದು ಕರೆದ.

ಇಷ್ಟು ವರುಷಗಳಿಂದ ಆಸ್ಥೆಯಿಂದ ಕಟ್ಟಿದ ಕಲಾಕೃತಿ ಅಲುಗಾಡಲಾರಂಭಿಸಿತು. ಇದು ಅಸ್ತಿತ್ವಕ್ಕೆ ಬಿದ್ದ ಪೆಟ್ಟು. ವಿಧಿ ಇಷ್ಟೊಂದು ಕ್ರೂರಿನಾ…ಎಂದು ಅಂದುಕೊಳ್ಳುತ್ತಲೇ ಮದನ್ ಕುಸಿದು ಹೋದ. ವಿನೋದ್ ಗ್ಲಾಸ್ ಗೆ ವಿಸ್ಕಿ ಸುರಿಯುತ್ತಿದ್ದ. ಅವನಿದೀಗ ರೆಕ್ಕೆ ಬಲಿತ ಹಕ್ಕಿಯ ಮನಸು. ಮದನ್ ಅವನನ್ನೆ ನೋಡುತ್ತಲಿದ್ದ. “ಖುಷಿ ಅವನಿಗೆ. ದುಃಖ ನನಗೆ. ಅವನ ಈ ಖುಷಿಗೆ ನಾನು ಕುಡಿಯಬೇಕು. ಅವನಿಗೆ ಕಂಪನಿ ಕೋಡಬೇಕು. ಅಯ್ಯೋ…. ಇಷ್ಟು ವರುಷಗಳಲ್ಲಿ ನನ್ನೊಂದಿಗೆ ಇಷ್ಟು ಖುಷಿಯಿಂದ ಮಾತನಾಡಿದ್ದೆ ಇಲ್ಲ. ಅವನು ಯಾವತ್ತು ಇಷ್ಟು ಖುಷಿಯಿಂದ ಇದ್ದಿದ್ದು ನೋಡೆ ಇಲ್ಲಾ. ಮೈ ಗಾಡ್… ನನಗೆ ಶಕ್ತಿ ಕೊಡು” ಎಂದು ಮನಸಲ್ಲೇ ಅಂದುಕೊಳ್ಳುತ್ತಾ ಪೆಗ್ ಏರಿಸಿದ. ದುಃಖಕ್ಕೆ ಹೃದಯವೆ ಕಿತ್ತುಕೊಂಡು ಬಂದಂತಾಯಿತು. “ಸಾರಿ ಮೇಘನಾ, ನಾನು ಸೋತುಬಿಟ್ಟೆ. ನಾನಲ್ಲ ನಾವು. ಆದರೆ ನನ್ನ ಮಗನ ಮನಸ್ಸನ್ನ ನೀವು ಗೆದ್ರಿ. ನಿಮಗಿನ್ನು ಹೊಸ ಜವಾಬ್ದಾರಿ. ನನ್ನ ಮಗನಿಗೆ ನೀವು ತಾಯಿ ಪ್ರೀತಿ ಕೊಡಬೇಕು. ಪ್ಲೀಸ್ ಇಲ್ಲಾ ಅನ್ನಬೇಡಿ, ನನ್ನ ಹಾಗೂ ನನ್ನ ಮಗನ ಮೇಲಿನ ನಿಮ್ಮ ಋಣ ತುಂಬಾ ದೊಡ್ಡದು. ಸಾರಿ, ನಂದು ಇಲ್ಲಿಗೆ ಮುಗೀತು” ಎಂದು ಮನಸಲ್ಲೆ ಹೇಳಿಕೊಂಡವನೆ ಮತ್ತೊಂದು ಪೆಗ್ ಏರಿಸಿದ. ಆ ಕಡೆಯಿಂದ ಮೇಘನಾರವರ ಕಾಲ್ ಬಂತು. ರಿಸೀವ್ ಮಾಡಿದ. ಮಾತು ಸತ್ತು ಹೋಗಿತ್ತು. ಮೇಘನಾರಿಗೆ ಎಲ್ಲಾ ತಿಳಿಯಿತು. ಆ ಮೌನದಲ್ಲೆ ಇಬ್ಬರು ನಿಶ್ಚಯಿಸಿದರು. ಮಕ್ಕಳ ಆಸೆಗೆ ನಾವು ತಡೆ ಆಗಬಾರದೆಂದು. ತಾವೇ ಕಟ್ಟಿಕೊಂಡ ಪ್ರೀತಿಯ ಸೌಧವನ್ನು ಅದೇ ಮೌನದಲ್ಲಿ ತಾವೇ ಕೆಡವಿಕೊಂಡರು. ಎದುರಿಗಿದ್ದ ವಿನೋದ ಸಂಭ್ರಮಿಸುತ್ತಲೇ ಇದ್ದ. ತನಗೆ ಗೊತ್ತಿಲ್ಲದೆ ತಂದೆಯ ಹೃದಯದಲ್ಲಿ ಬಿರುಗಾಳಿ ಎಬ್ಬಿಸಿದ್ದ.

ವಿಷಯ ರಾಜೀವ್ ಗೆ ತಿಳಿಯಿತು. ಅವನು ನೊಂದುಕೊಂಡ. ಆದರೆ ಮಕ್ಕಳ ಪ್ರೀತಿಗಾಗಿ ತಮ್ಮ ಪ್ರೀತಿಯನ್ನೆ ತ್ಯಾಗ ಮಾಡಿಕೊಳ್ಳುವುದು ಯಾಕೊ ಅವನಿಗೆ ಸರಿ ಕಾಣಲಿಲ್ಲ. ಅದಕ್ಕಿಂತ ಹೆಚ್ಚಾಗಿ ಎರಡನೇ ಬಾರಿಯೂ ತನ್ನ ಸ್ನೇಹಿತನ ಜೀವನ ಹೀಗೆ ಕತ್ತಲಾಗುತ್ತಿರುವುದನ್ನ ನೋಡಿ ಸಹಿಸಲಾಗಲಿಲ್ಲ. ಅವನು ಸ್ವಲ್ಪ ಹೊತ್ತು ಯೋಚಿಸಿದ. ಬಹು ದಿನಗಳಿಂದ ತನ್ನ ಮನಸ್ಸಿನಲ್ಲಿರುವ ಆಶಯವನ್ನು ಮದನನ ಬಳಿ ಹೇಳಿಕೊಳ್ಳಲು ಮುಂದಾದ. “ಈ ಸಮಯದಲ್ಲಿ ಹೀಗೆ ಕೇಳ್ತೆನೆ ಅಂತಾ ಅನ್ಕೊಬೇಡ. ಇಷ್ಟು ವರುಷವಾಯಿತು. ನಮಗಂತೂ ಆ ದೇವರು ಮಕ್ಕಳ ಭಾಗ್ಯ ಕರುಣಿಸಲಿಲ್ಲ. ಹಿಂದೊಮ್ಮೆ ನೀನೇ ವಿನೋದನನ್ನು ದತ್ತು ನೀಡಲು ಬಂದಿದ್ದೆ. ನನಗಾಗ ಮನಸ್ಸಿದ್ದಿತಾದರೂ ನಿರಾಕರಿಸಿದ್ದೆ. ಅದಾದ ಮೇಲೆ ನಾನೆ ಖುದ್ದಾಗಿ ಈ ವಿಷಯವನ್ನು ಪ್ರಸ್ತಾಪಿಸಬೇಕು ಅಂದುಕೊಂಡೆ. ಯಾಕೊ ಸಾಧ್ಯವಾಗಿರಲಿಲ್ಲ. ಆದರೆ ಈಗ ಕೇಳಿಕೊಳ್ಳುತ್ತಿದ್ದೇನೆ. ತಪ್ಪು ತಿಳಿಯಬೇಡ. ಇದನ್ನ ನನ್ನ ಕೋರಿಕೆ ಎಂದೆ ತಿಳಿ. ನಮಗಾದರೂ ಮುಂದೆ ಯಾರಿದಾರೆ..?ವಿನೋದ್ ನನ್ನ ಮಗನಾದರೆ, ನನ್ನ ಎಲ್ಲಾ ಆಸ್ತಿ ಸಂಪತ್ತಿಗೂ ಅವನೆ ಹಕ್ಕುದಾರನಾಗುತ್ತಾನೆ. ಅಷ್ಟೇ ಅಲ್ಲ, ಕೊನೆಗಾಲದಲ್ಲಿ ನನಗೂ ನನ್ನವಳಿಗೂ ಒಂದು ಆಸರೆ ಸಿಕ್ಕ ನೆಮ್ಮದಿ. ನೀನು ಇದಕ್ಕೆ ಒಪ್ಪಿದ್ದಲ್ಲಿ ನೀನು ಕೂಡಾ ಮೇಘನಾರನ್ನ ಮದುವೆಯಾಗಬಹುದು. ಅಷ್ಟೆ ಅಲ್ಲಾ, ಮುಂದೆ ವಿನೋದ್ ಹಾಗೂ ಪ್ರತಿಕ್ಷಾರ ಪ್ರೀತಿಯೂ ಉಳಿಯುತ್ತದೆ. ಆದರೆ ಇದೆಲ್ಲ ಆಗಬೇಕೆಂದರೆ ವಿನೋದನನ್ನು ನಾನು ದತ್ತು ತೆಗೆದುಕೊಂಡಾಗ ಮಾತ್ರ. ಯೋಚಿಸಿ ನೋಡು. ನೀನು ಅಂದೇ ವಿನೋದನನ್ನು ದತ್ತು ನೀಡಲು ಬಂದಾಗ ನಾನು ಒಪ್ಪಿಕೊಂಡಿದ್ದರೆ, ಈಗ ಯಾವ ಪ್ರಶ್ನೆಯೂ ಏಳುತ್ತಿರಲಿಲ್ಲ. ವಿಚಾರ ಮಾಡು. ಇದರಲ್ಲಿ ಸ್ವಾರ್ಥಕ್ಕಿಂತ ಎಲ್ಲರ ಹಿತವೂ ಇದೆ. ಮಗನ ಪ್ರೀತಿಯ ಸಲುವಾಗಿ ನಿನ್ನ ಹೃದಯದಲ್ಲಿರುವ ಮೇಘನಾರ ಪ್ರೀತಿಯನ್ನು ಕೊಲ್ಲಬೇಡ. ಒಂದು ವೇಳೆ ನಿನ್ನ ಮಗನಿಗೆ ಈ ವಿಚಾರ ಗೊತ್ತಾದರೆ ಅವನು ಸಂತೋಷವಾಗಿರುತ್ತಾನ..? ಇಲ್ಲ. ಇಷ್ಟಾದ ಮೇಲೆ ಅವನು ಪ್ರತಿಕ್ಷಾಳನ್ನು ಮದುವೆ ಆಗುತ್ತಾನೆಂದುಕೊಂಡೆಯಾ ? ಖಂಡಿತಾ ಇಲ್ಲಾ. ನೀನು ಈ ವಿಷಯದಲ್ಲಿ ಹಠ ಹಿಡಿದು ಸುಮ್ಮನಾದರೆ ಮುಂದೆ ಯಾರೊಬ್ಬರಿಗೂ ನೆಮ್ಮದಿ ಇಲ್ಲ. ಅದನ್ನ ಮಾತ್ರ ನೆನಪಿಡು. ಒಂದು ಒಳ್ಳೆಯ ನಿರ್ಧಾರಕ್ಕೆ ಬಾ. ನಿನ್ನ ಮಗನನ್ನು ನಾನು ಒಪ್ಪಿಸುತ್ತೇನೆ. ಯಾರು ಏನನ್ನುತ್ತಾರೆ ಅನ್ನೊದು ಬೇಡ. ಇಲ್ಲಿ ಯಾರು ಕೂಡಾ ಯಾವ ತಪ್ಪನ್ನು ಮಾಡಿಲ್ಲ. ಮಾಡ್ತಾನೂ ಇಲ್ಲ ‌. ವಿಶಾಲವಾಗಿ ಯೋಚಿಸು. ನನಗೊತ್ತು, ಈ ಕ್ಷಣಕ್ಕೆ ಈ ನಿರ್ಧಾರಕ್ಕೆ ಬರೋದು ನಿನಗೆ ಕಷ್ಟವೇ. ಆದರೆ ನಿನ್ನ ಈ ಒಂದು ನಿರ್ಧಾರದಿಂದ ಮುಂದೆ ಎಲ್ಲರೂ ಖುಷಿಯಿಂದ ನೆಮ್ಮದಿಯಿಂದ ಇರುತ್ತಾರೆ ಅನ್ನೊದನ್ನ ಮರೆಯಬೇಡ. ಯೋಚನೆ ಮಾಡು.”

 ಮದನ್ ಗೆ ಒಂದು ಕ್ಷಣ ಏನ್ ಅನ್ನಬೇಕು ಅಂತಾನೆ ತೋಚಲಿಲ್ಲ. ರಾಜೀವ್ ಅವನ ಮೌನವನ್ನು ಅರ್ಥ ಮಾಡಿಕೊಂಡ. ಮಾರನೇ ದಿನವೇ ವಿನೋದ್ ಹಾಗೂ ಪ್ರತಿಕ್ಷಾಳನ್ನು ತನ್ನ ಮನೆಗೆ ಕರೆಸಿಕೊಂಡ. ಈ ಎಲ್ಲಾ ವೃತ್ತಾಂತವನ್ನು ಅವರಿಗೂ ಹೇಳಿದ. ತಮ್ಮ ತಂದೆ ತಾಯಿ ಈ ತರಹದ ಒಂದು ಪ್ರೀತಿಯಲ್ಲಿ ಇದ್ದರು ಎಂದು ತಿಳಿದೇ ಅವರು ಶಾಕ್ ಆದರು. ರಾಜೀವ್ ಅವರಿಬ್ಬರನ್ನು ಸಮಾಧಾನಿಸಿದ. ಮದನ್ ಗೆ ಹೇಳಿದ ಪರಿಹಾರವನ್ನು ಅವರಿಬ್ಬರಿಗೂ ಮನದಟ್ಟಾಗುವಂತೆ ವಿವರಿಸಿದ. ವಿನೋದ್ ಸ್ವಲ್ಪ ಹೊತ್ತು ಯೋಚಿಸಿದ. ಅವನಿಗೂ ಅದೇ ಸರಿಯೆನಿಸಿತು. “ನೀವು ನನ್ನ ದತ್ತು ಪಡೆಯುವುದಕ್ಕೆ ನನ್ನದೇನು ತಕರಾರಿಲ್ಲ. ಆದರೆ ಇದಕ್ಕೆ ಅಪ್ಪ ಒಪ್ಪಬೇಕು. ಅದಕ್ಕಿಂತ ಹೆಚ್ಚಾಗಿ ಅಪ್ಪ ಮೇಘನಾರನ್ನ ಮದುವೆ ಆಗಬೇಕು. ಅವರ ಪ್ರೀತಿ ಉಳಿಯುವುದಕ್ಕಾಗಿ ನಾನು ಏನು ಮಾಡಲು ಕೂಡಾ ಸಿದ್ದ. ಇದು ಬರೀ ನನ್ನ ಮಾತಲ್ಲ. ಪ್ರತಿಕ್ಷಾಳದು ಕೂಡಾ. ಒಂದು ವೇಳೆ ನಾನು ನಿಮ್ಮ ಮಗನಾಗಿ ಬಂದರೂ ಏನಂತೆ..? ನನ್ನ ಜಾಗದಲ್ಲಿ ಮಗಳಾಗಿ ಪ್ರತಿಕ್ಷಾ ಇರುತ್ತಾಳೆ. ಇನ್ನು ನಮ್ಮಿಬ್ಬರ ಮದುವೆ? ಅದಿನ್ನು ಬಹಳ ದೂರಾನೆ ಇದೆ. ಅದರ ಬಗ್ಗೆ ಈಗಲೇ ಯೋಚನೆ ಬೇಡ. ಪ್ಲೀಸ್…ಹೇಗಾದರೂ ಮಾಡಿ ಮೊದಲು ಅಪ್ಪನನ್ನು ಒಪ್ಪಿಸಿ” ಎಂದು ಕೈ ಮುಗಿದು ಕೇಳಿಕೊಂಡ. ಅವನ ಕೋರಿಕೆಗೆ ಪ್ರತಿಕ್ಷಾ ಕೂಡಾ ದನಿಯಾದಳು. ರಾಜೀವ್ ವಿನೋದನನ್ನು ಬಾಚಿ ತಬ್ಬಿಕೊಂಡ. ಅವನಿಗಾದ ಸಂತೋಷಕ್ಕೆ ತಕ್ಷಣವೇ ಮದನ್ ಗೆ ಫೋನಾಯಿಸಿದ. “ವಿನೋದ್ ನಿನ್ನ ಮಗನಾಗಿ ಬರಲು ಒಪ್ಪಿದರೆ ಸಂತೋಷ. ಇದರಲ್ಲಿ ನನ್ನ ಅಭ್ಯಂತರ ಏನು ಇಲ್ಲಾ. ಮಿಕ್ಕಿದ ವಿಚಾರ ನನ್ನನ್ನೇನು ಕೇಳಬೇಡ” ಅಂತಾ ತನ್ನ ನಿರ್ಧಾರ ಹೇಳಿ ಮದನ್ ಫೋನಿಟ್ಟ. ರಾಜೀವ್ ಒಂದು ಹಂತಕ್ಕೆ  ನಿರಾಳನಾದ. ಇನ್ನು ಮೇಘನಾ ಹಾಗೂ ಪ್ರತಿಕ್ಷಾರನ್ನ  ಮದನ್ ಒಪ್ಪಿಕೊಳ್ಳಬೇಕು. ಖಂಡಿತಾ ಒಪ್ಪುತ್ತಾನೆ. ಕಲಾವಿದ ಅವನು. ಮೇಘನಾ ಅನ್ನೊ ಸ್ಪೂರ್ತಿಯಿಲ್ಲದೆ ಅವನು, ಅವನ ಕುಂಚ ಎರಡೂ ಮಾತನಾಡದು.

ಮದನನ ಮನಸ್ಸು ಬತ್ತಿಹೋಗಿತ್ತು. ಆದರೂ ಬಹಳ ದಿನಗಳ ನಂತರ ಕುಂಚ ಹಿಡಿದು ಕುಳಿತಿದ್ದ. ಏನೋ ಒಂದು ಮಹತ್ತರವಾದದ್ದು ಘಟಿಸುತ್ತೆಂಬ ಭಾವದಲ್ಲಿ. ಅದು ಅವನ ಮನೆಯ ವರಾಂಡ. ಸುಂದರ ಸಂಜೆ. ಇನ್ನೇನು ಸೂರ್ಯ ಮುಳುಗಬೇಕು. ಬಹುದಿನಗಳ ಕಲ್ಪನೆಯ ಆ ಚಿತ್ರಕ್ಕೆ ಭಾವಸ್ಪರ್ಶ ಸಿಗದೆ ಅವನ ಕೈಗಳು ಸೋತವು. ಕುಂಚವು ಕೈ ಜಾರಿತು. ಅದನ್ನ ಮತ್ತೆ ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಮತ್ತೆ ಜಾರಿತು. ‘ಓ ಗಾಡ್… ಈ ಕೈಗಳಿಗೆ ಕುಂಚ ಕೂಡಾ ಭಾರವಾಯಿತಾ..?’ ಎಂದು ನಿಟ್ಟುಸಿರುಬಿಡುತ್ತಾ ಮತ್ತೊಮ್ಮೆ ಅದನ್ನು ಹಿಡಿಯಲು ಹೋದ. ಹಿತವಾದ ತಂಗಾಳಿಯ ಜೊತೆಗೆ ಸಾಕ್ಷಾತ್ ಚಂದ್ರನೆ ಬಂದಂತೆ ಒಂದು ರೂಪ ಅವನ ಬಳಿಯಲ್ಲಿ ಬಿದ್ದಿದ್ದ ಆ ಕುಂಚವನ್ನು ಅವನ ಕೈಗಿಟ್ಟಿತು. ಆ ಚಂದ್ರಮನ ಕಣ್ಣಲ್ಲಿ ಮೇಘನಾ ಕಂಡರು. ಹೌದು,  ಪ್ರತಿಕ್ಷಾ…ಇವಳೆನಿಲ್ಲಿ ಎಂದು ಅಚ್ಚರಿಪಡುವಾಗಲೆ ಅವನ ಕಣ್ಣುಗಳು  ಮೇಘನಾರನ್ನ ಅರಸಿದವು. ಊಹ್ಹೂ…  ಆಕಾಶದಲ್ಲಿ ಚಂದ್ರನ ಉದಯವಾಗಿ ಬಹಳ ಸಮಯವೇ ಆಗಿತ್ತು. ಓಹ್..ಯಾವ ಚಿತ್ರವನ್ನು ಬರೆಯಬೇಕು?  ಚಂದ್ರನದಾ..? ಇಲ್ಲಾ ಸೂರ್ಯನದಾ..? ಅವನ ಕಣ್ಣು ಮತ್ತೆ ಸೂರ್ಯಾಸ್ತವನ್ನೆ ಹುಡುಕಾಡಿತು. ಸೂರ್ಯನಿಗೆ ಮರೆಯಾಗಿಯೇ ಎಂಬಂತೆ ದೂರದಲ್ಲಿ ವಿನೋದ್ ನಿಂತಿದ್ದ. ಜೊತೆಗೆ ರಾಜೀವ. ಜಸ್ಟ್ ಒಂದು ನಿಮಿಷ ಅಷ್ಟೆ. ಸೂರ್ಯ ಕೂಡಾ ಜಾರಿ ಹೋದ. ಬೇರೊಂದು ಲೋಕವನ್ನು ಬೆಳಗಲು ಹೋಗುವಂತೆ. ಮದನ್ ಅವರಿಬ್ಬರನ್ನು ನೋಡಿದ. ಅವನಿಗೆ ಎಲ್ಲಾ ಸ್ಪಷ್ಟವಾಯಿತು. ಒಂದು ಕ್ಷಣ ಸ್ತಬ್ದನಾದ. ಕಣ್ಣು ಮುಚ್ಚಿಕೊಂಡು ಧೀರ್ಘವಾದ ನಿಟ್ಟುಸಿರುಬಿಟ್ಟ. ಸಪ್ತ ಬಣ್ಣಗಳೊಂದಿಗೆ ಸಪ್ತಪದಿಯ ತುಳಿಯಲೆಂಬಂತೆ ಆ ಕಾಮನಬಿಲ್ಲು ಅವನ ಎದೆಗೆ ಮೊದಲ ಹೆಜ್ಜೆ ಇಟ್ಟಂತಾಯಿತು. ಕಣ್ತೆರೆಯುತ್ತಾನೆ ಮೇಘನಾ… ಮೇಘನಾ ಅವನನ್ನೊಮ್ಮೆ ತಣ್ಣಗೆ ನೋಡಿದಳು. ಅವರ ಮುಖದಲ್ಲಿಯೂ ಅದೇ ಮಂದಹಾಸ.. ಎಂದೆಂದಿಗೂ ಇದು ಮಾಸದು ಅನ್ನುವ ಆತ್ಮವಿಶ್ವಾಸ… ಕಲಾಕೃತಿ ಅಳಿಸಿ ಹೋಗಲಿಲ್ಲ. ಬದಲಾಗಿ ಮತ್ತೊಂದು ಕಲಾಕೃತಿ ಅರಳಿ ನಿಂತಿತ್ತು. ಅದು ವಿನೋದ್, ಪ್ರತಿಕ್ಷಾ ಕಣ್ಣಲ್ಲಿ ಕಾಣುತ್ತಿತ್ತು.


                      ಮಧುಕರ್ ಬಳ್ಕೂರು

Leave a Reply

Back To Top