ಕಾವ್ಯ ಸಂಗಾತಿ
ಭ್ರೂಣ ಹತ್ಯೆ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಈಗ ಹುಡುಗಿಯಾಗಿ ಕೂಳಿಗಾಗಿ
ಬೀದಿಬೀದಿಯಲಿ ಕೈಚಾಚುವ
ಈ ಬಾಲೆ ಬೀದಿಗೆ ಹುಟ್ಟಿನಲೆ
ಎಸೆಯಲ್ಪಟ್ಟ ಪಾಪದ ಹಸುಳೆ!
ಪ್ರೀತಿ ಪಾತಕ ಬಲೆಗೆ ಬಿದ್ದ ಮೀನು
ಮದುವೆ ಇಲ್ಲದೆ ಕೆಟ್ಟ ಬಸಿರ ಹೊತ್ತು
ಹೆತ್ತವರ ಕರುಳ ರೋದನ ಆಲಿಸಿ
ತನ್ನುದರದ ಕೂಸನೆ ತೊರೆದ ತಾಯಿ!
ಭಿಕ್ಷು ಮುದುಕಿ ಆಸರೆಯಲಿ
ಬೆಳೆದು ಹುಡುಗಿಯಾದ ತಬ್ಬಲಿ
ಮತ್ತೆ ನಡುಬೀದಿಗೆ ಬಂದಳು
ಸಾಕು ತಾಯಿ ಸಹ ಮಡಿದು
ದುರುಳ ಕಣ್ಣ ನದರಿಗೆ
ಸದಾ ತುತ್ತಾದ ಆ ಮೊಗಕೆ
ಕ್ರಮೇಣ ಚೆನ್ನ ಕಾಣುವುದೆ
ಕೊರಳ ಕ್ರೂರ ಹಗ್ಗವಾಗಿ
ಹೆಸರಿಲ್ಲದ ಒಂದು ದಂಧೆ
ಮನೆ ಸೇರಿ ಬಂಧಿ!
ಇತ್ತ ಸಾಯಲೂ ಬಿಡದೆ
ಅಂಥ ಬಾಳು ಬದುಕಲೂ ಆಗದೆ
“ಭ್ರೂಣಾವಸ್ಥೆಯಲ್ಲೇ ಕಿತ್ತೆಸೆಯದೆ
ಏಕೆ ನನ್ನ ಆ ಕೆಟ್ಟ ಹೊಟ್ಟೆಯಲಿಟ್ಟಳು
ಹೆತ್ತ ತಾಯಿಯೆಂಬ ಆ ಹೆಂಗಸು”?
ಹಗಲಿರುಳು ಕೊರಗಿ ಕೂಡ
ರಾತ್ರಿ ರಾತ್ರಿಯಲು ಕಂಡರಿಯದ
ಬೆತ್ತಲೆ ಮೈ ಬಿಸಿ ಜಿಡ್ಡು ಅಳಿಸುವ
ಬಣ್ಣಬಣ್ಣದ ತೆವಲು ತಣಿಸುವ
ಈ ಇಂಥ ಬದುಕು ಎಂಥ ಬದುಕು!
ಹೌದು, ಆ ಒಂದು ಭ್ರೂಣ ಹರಣ
ಇಂಥ ಬದುಕಿಗೆ ಅಂದೆ ಮುಕ್ತಿಯ
ಮಣ್ಣೆಳೆದು ಮುಚ್ಚಿದ್ದರೆ ಆ ತಾಯಿ?
ಎಂಥ ಕಠೋರ ಪರಿಸ್ಥಿತಿಯಲು
“ಭ್ರೂಣ ಹತ್ಯೆ ಮಹಾಪಾಪ… ಶಿಕ್ಷೆ”!
ಭ್ರೂಣ ಹತ್ಯೆ ಪಾಪವೇ ?
ಚೆನ್ನಾದ ವರ್ಣನೆ.
Congrats Murthy for describing this very powerfully