ಕಾವ್ಯ ಸಂಗಾತಿ
ಮೌನ
ಡಾ. ನಾಗರತ್ನ ಅಶೋಕ್ ಭಾವಿಕಟ್ಟಿ.
ಹಿಡಿದಷ್ಟು ಪುಟಿ ಪುಟಿದೇಳುವ
ಅದುಮಿದಷ್ಟೂ ಒತ್ತಡ ಸಹಿಸದ
ಮನವನಾವರಿಸುವ ಭಾವವೇ ಮೌನ
ಸ್ಪೋಟಿಸುವ ಬದಲು
ಒಡಲ ಸುಟ್ಟುಹಾಕುವ
ಅಂತರಂಗದ ಯುದ್ಧವೇ ಮೌನ
ಮಾತಿಗೆ ಅರ್ಥವಂ ದಿದ್ದರೆ
ನೂರೆಂಟು ಅರ್ಥ ನೀಡುವ
ಶಬ್ದದ ಸ್ಥಿತಿಯೇ ಮೌನ
ಕಲ್ಲುಕರಗಿಸುವ
ಕಠಿಣತೆಗೂ ಕಠಿಣವಾದ
ಶಕ್ತಿಯುತ ಆಯುಧವೇ ಮೌನ
ಅನುಭವದಂಬುಧಿಯ
ಅನುಭಾವದಾಗರವ
ಅನುಸಂಧಾನ ಮಾಡಿಸುವುದೇ ಮೌನ
ಜೊತೆ ಇರುವಷ್ಟು ಹೊತ್ತು
ಶಾಂತಿ ಸಮತೆ ನೀಡಿ
ಸಹಜತೆ ಕಾಯುವುದೇ ಮೌನ
ಹುಚ್ಚೆದ್ದ ಉನ್ಮಾದದ ಏರಿಳಿತಕ್ಕೆ
ವಿರಾಮ ವಿದಾಯ ಹೇಳಿ
ಸಮಸ್ಥಿತಿಗೆ ತರುವದೇ ಮೌನ
ವಿಘಟನೆಯ ಮರೆಮಾಚಿ
ಬೇಡವಾದುದ ಹೊರಗಿರಿಸಿ
ನಿರ್ಲಕ್ಷದಿ ಶಿಕ್ಷಿಸುವ ಶಿಕ್ಷೆಯೇ ಮೌನ