ಪುಸ್ತಕ ಸಂಗಾತಿ
ಗೋಪಬಾಲನ ಮುಕ್ತಕಮಾಲೆ
ಪುಸ್ತಕ ಸಂಗಾತಿ
ಕೃತಿ :ಗೋಪಬಾಲನ ಮುಕ್ತಕಮಾಲೆ
ಕರ್ತೃ : ಗೋಪಾಲಭಟ್ ಸಿ ಯಚ್, ಕಾಸರಗೋಡು
ದೋಣಿ ಮುನ್ನಡೆಯಲು ಹಾಯಿ, ಹುಟ್ಟುಗಳು ಹೇಗೆ ಅತೀ ಅವಶ್ಯಕವೋ ಹಾಗೆಯೇ ಈ ಬಾಳು ಎಂಬ ಯಾನದಲ್ಲಿ ಜನನದಾರಭ್ಯ ಮರಣಪರ್ಯಂತ ಸದ್ವಿಚಾರಗಳನ್ನು ಪಾಲಿಸುವುದು ಬಲು ಮುಖ್ಯ. ಮನುಜ ಈ ಸದ್ವಿಚಾರಗಳನ್ನು ತಾನು ಮನನ ಮಾಡಿಕೊಂಡು ಮುಂದೆ ಸಾಗಿದರೆ ಮಾತ್ರ ಪಯಣ ಸುಗಮವಾಗುವುದು. ಇಲ್ಲವಾದಲ್ಲಿ ಅಲ್ಲಲ್ಲಿ ಎದುರಾಗುವ ಏರಿಳಿತಗಳನ್ನು ಧೈರ್ಯದಿಂದ ಮೆಟ್ಟಲು ಸಾಧ್ಯವಾಗದು. ಇಂಥಾ ಸಂದರ್ಭದಲ್ಲಿ ಮುಕ್ತಕಗಳೆಂದು ಸಾಹಿತ್ಯ ಪ್ರಕಾರದಲ್ಲಿ ಕರೆಯಲ್ಪಡುವ ಮುತ್ತಿನಂಥ ಮಾತುಗಳು ಮನಸ್ಸಿಗೆ ಯಾವ ರೀತಿ ವರ್ತಿಸಬೇಕು, ಎಂಥವರೊಂದಿಗೆ ಯಾವ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕು ಎಂಬ ಸೂಕ್ಷ್ಮಗಳನ್ನು ತಿಳಿಸಿಕೊಟ್ಟು ಸಾಗುವ ದಾರಿಗೆ ಬೆಳಕನ್ನು ಹರಿಸಿ ಗುರಿಮುಟ್ಟುವಲ್ಲಿ ಸಹಕರಿಸುತ್ತವೆ.
ಇದಕ್ಕೆ ಪೂರಕವೆಂಬಂತೆ ಗಡಿನಾಡು ಕಾಸರಗೋಡಿನ ಹಿರಿಯರೂ, ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯರೂ, ಲೇಖಕರೂ ಆದ ಶ್ರೀ ಗೋಪಾಲ ಭಟ್ ಸಿ ಯಚ್ ರವರ ” ಗೋಪಬಾಲನ ಮುಕ್ತಕ ಮುತ್ತುಗಳು ಎಂಬ ಶಿರೋನಾಮೆ ಹೊತ್ತ ಮುಕ್ತಕ ಕೃತಿ ನಮ್ಮೆಲ್ಲರ ಕರ ಸೇರುವುದಕ್ಕೆ ಸಜ್ಜಾಗಿರುವುದು ಬಹಳ ಸಂತಸದ ವಿಚಾರ. ಶ್ರೀಯುತರು ಈಗಾಗಲೇ ಇಪ್ಪತ್ತೆರಡು ಕೃತಿಗಳನ್ನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಮುದ್ರಿಸಿ ಪ್ರಕಟಿಸಿದ್ದು, ಅದರಲ್ಲಿ ಭಕ್ತಿಗೀತೆಗಳು, ಚುಟುಕುಗಳು, ಮಕ್ಕಳ ಕವನಗಳು ಎಂಬುದಾಗಿ ವಿಭಾಗಿಸಿ ನೋಡಿದಾಗ ಇತ್ತೀಚೆಗೆ ಬಿಡುಗಡೆಗೊಂಡ ಉದ್ಗ್ರಂಥ ” ಶ್ರೀ ಕೃಷ್ಣ ಚರಿತಾಮೃತ” ವು ವಿಶೇಷವಾಗಿ ಗಮನ ಸೆಳೆಯುತ್ತದೆ. ಅದರ ಬೆನ್ನಲ್ಲೇ ಮುಕ್ತಕ ರಚನೆಯಲ್ಲೂ ತಮ್ಮ ಕೃಷಿಯನ್ನು ಎಡೆಬಿಡದೆ ಮಾಡಿರುವ ಶ್ರೀಯುತರ ಮುಕ್ತಕ ಮುತ್ತುಗಳನ್ನು ಕನ್ನಡಾಂಬೆಯ ಪದತಲಗಳಿಗೆ ಅರ್ಪಿಸಿರುವುದು ನಿಜಕ್ಕೂ ಶ್ಲಾಘನೀಯ.
ಶ್ರೀ ಗೋಪಾಲಭಟ್ ರವರ ಮುಕ್ತಕಗಳನ್ನು ಅವಲೋಕಿಸಿದಾಗ ಅಷ್ಟೇನೂ ಕ್ಲಿಷ್ಟಕರವಲ್ಲದ ಪದಬಳಕೆಯಿಂದ ಜನ ಸಾಮಾನ್ಯರಿಗೂ ಅರ್ಥವಾಗುವಂತಹ ರಚನೆಗಳು ಕಂಡು ಬರುತ್ತವೆ.
ಹೇ ಮಾತೆ ಶಾರದೆಯೆ ನೀಡು ನೀ ವರವನ್ನು
ಸಾಮಧಾನದಿ ಬರೆಯೆ ಗೀತೆ ಮುಕ್ತಕವ
ಸೋಮಶೇಖರ ಪುತ್ರ ಗಣಪತಿಗೆ ನಮಿಸಿರುವೆ
ಧೀಮಂತೆ ವರ ನೀಡು ಗೋಪಬಾಲ ||
ಎಂಬುದಾಗಿ ಆರಂಭದಲ್ಲಿರುವ ಇವರ ಮುಕ್ತಕಗಳಲ್ಲಿ ತಾಯಿ ಶಾರದೆ, ವಿಘ್ನನಿವಾರಕ ಗಣಪ ಹಾಗೂ ಗುರುಗಳಿಗೆ, ಓದುಗರಿಗೆ ಬಿನ್ನವಿಸಿಕೊಂಡಿರುವುದನ್ನು ಕಾಣುತ್ತೇವೆ ಹಾಗೆಯೇ ಮುಂದೆ ಓದಿಕೊಂಡು ಹೋದಂತೆ ನಮಗೆ ಕಾಣಸಿಗುವುದು ಬದುಕಿನ ಪ್ರತಿ ಹೆಜ್ಜೆಯಲ್ಲೂ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು, ಏನನ್ನು ಅನುಸರಿಸಬೇಕು, ಏನನ್ನು ಮಾಡಕೂಡದು, ಅದರ ಪರಿಣಾಮಗಳೇನು ಎಂಬುದು ಈ ಕೃತಿ ಓದಿದ ಪ್ರತಿಯೊಬ್ಬನಿಗೂ ಲಭಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಗೋಪಬಾಲ ಅಂಕಿತದೊಂದಿಗೆ ಅರಳಿದ ಮುಕ್ತಕಗಳನ್ನು ಎರಡು ಭಾಗಗಳಾಗಿ ವಿಂಗಡಿಸಿರುವುದನ್ನು ಕಾಣಬಹುದು. ಭಾಗ ಒಂದನ್ನು ಪಾರಮಾರ್ಥಿಕ ಎಂಬುದಾಗಿ ಹೆಸರಿಸಿ ಸಂಪೂರ್ಣ ಭಗವದ್ಗೀತೆ ಶ್ಲೋಕಗಳ ಭಾವಾರ್ಥಗಳನ್ನು ಓದುಗರಿಗೆ ಸರಳವಾಗಿ ಅರ್ಥೈಸಿಕೊಳ್ಳುವಂತೆ ಮುಕ್ತಕ ರೂಪಕ್ಕಿಳಿಸಿ ರಚಿಸಿರುವುದು ಒಂದು ಮಹತ್ಸಾಧನೆ ಎಂದರೆ ತಪ್ಪಲ್ಲ. ಗೀತಾಸಾರವನ್ನು ಗದ್ಯಕ್ಕೆ ಬದಲಾಗಿ ಛಂದೋಬದ್ಧ ಮುಕ್ತಕದ ಮುಖೇನ ಹೆಚ್ಚು ಹೆಚ್ಚು ಕನ್ನಡಿಗರಿಗೆ ತಲುಪಿಸುವ ಈ ಉದ್ದೇಶದಿಂದ ಇದು ವಿಶಿಷ್ಟ ಸ್ಥಾನ ಪಡೆಯುತ್ತದೆ. ಹಾಗೆಯೇ ಭಾಗ ಎರಡರಲ್ಲಿ ಪ್ರಾಪಂಚಿಕ ವಿಷಯಗಳನ್ನು ಉಲ್ಲೇಖಿಸಿ ನಿತ್ಯ ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು, ಆದರಿಂದಾಗುವ ಲಾಭ ನಷ್ಟಗಳೇನು ಎಂಬುದನ್ನು ಬಹಳ ಸೊಗಸಾಗಿ ಕೃತಿಯೊಳಗಿಳಿಸಿದ್ದಾರೆ.
ಹೀಗೆ ಇಲ್ಲಿರುವ ಸುಮಾರು ಒಂಭೈನೂರು ಮತ್ತು ಐದು ನೂರು ಮುಕ್ತಕಗಳನ್ನು ಎರಡು ವಿಭಾಗಗಳಲ್ಲಿ ಒಂದೊಂದಾಗಿ ಓದಿ ಅರ್ಥೈಸಿಕೊಂಡಾಗ ನಮಗೆ ಬಾಳಿನಲ್ಲಿ ಯಾವ ರೀತಿ ಇರಬೇಕು, ಹೇಗೆ ಇರಬಾರದು, ಯಾವುದು ಉಚಿತ, ಯಾವುದು ಅನುಚಿತ ಎಂಬುದನ್ನು ಬಹಳ ಸರಳವಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿಕೊಟ್ಟಿದ್ದಾರೆ. ಓದುತ್ತಾ ಸಾಗಿದಂತೆ ಎಷ್ಟೊಂದು ನಿಜವಲ್ಲವೇ ಎಂದು ಪ್ರತಿ ಹಂತದಲ್ಲೂ ನಮಗೆ ಅನಿಸದೆ ಇರದು. ಏಕೆಂದರೆ ನಮ್ಮ ಸುತ್ತಮುತ್ತ, ಮನೆಯ ಒಳಗಿರಲಿ, ಹೊರಗಿರಲಿ ನಾವು ಹೇಗೆ ನಡೆದುಕೊಳ್ಳಬೇಕು, ತಪ್ಪಿದಲ್ಲಿ ಆಗುವ ಅನಾಹುತಗಳೇನು ಎಂಬುದನ್ನು ಕೆಲವೇ ಪದಗಳ ಮಿತಿಯಲ್ಲಿ ಛಂದೋಬದ್ಧವಾಗಿ ಬರೆದಿರುವ ಶ್ರೀ ಗೋಪಾಲ ಭಟ್ ರವರ ಮುಕ್ತಕ ಮುತ್ತುಗಳು ಸಮಾಜಕ್ಕೊಂದು ದಾರಿದೀಪವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಹಿರಿಯರಾದರೂ ಎಲ್ಲರೊಡನೆ ಬಹಳ ಸ್ನೇಹ,ಸೌಜನ್ಯದಿಂದ ನಡೆದುಕೊಳ್ಳುವ ಇವರು, ಸಾಹಿತ್ಯ ಪಯಣದಲ್ಲಿ “ಇನ್ನೂ ಕಲಿಯುತ್ತಿರುವವ ನಾನು” ಎಂಬ ಮನೋಭಾವನೆ ಎಂಥವರಿಗೂ ಆದರ್ಶಪ್ರಾಯವಾಗಿದೆ.
ಕರ್ಮಮಾಡಲು ಮಾತ್ರ ನಿನಗಿಹುದು ಅಧಿಕಾರ
ಕರ್ಮಫಲಗಳ ನೀನು ಬಯಸಬೇಡ
ಕರ್ಮವನು ನೀ ಮಾಡು ಕರ್ತವ್ಯ ಬುದ್ದಿಯಲಿ
ಕರ್ಮ ಮಾಡೆನೆನದಿರು ಗೋಪಬಾಲ ||
ಭಗವದ್ಗೀತೆಯ ಕರ್ಮಣ್ಯೇವಾಧಿಕಾರಸ್ತೆ ಮಾ ಪಲೇಷು ಕದಾಚನ ಶ್ಲೋಕವನ್ನು ಬಹಳ ಸರಳವಾಗಿ ಮೇಲೆ ಹೇಳಿದ್ದಾರೆ..
ಹಾಗೆಯೇ ಇನ್ನೂ ಕೆಲವನ್ನು ನೋಡುವ…
ಅರ್ಜುನನಿಗೆ ಶ್ರೀ ಕೃಷ್ಣನು : ನಾನು ನಕ್ಷತ್ರಗಳಿಗೆ ಅಧಿಪತಿಯಾದ ಚಂದ್ರನೂ, ವೇದಗಳಲ್ಲಿ ಸಾಮವೇದವೂ, ದೇವತೆಗಳ ರಾಜ ಇಂದ್ರನೂ, ಇಂದ್ರಿಯಗಳಲ್ಲಿ ಮನಸ್ಸು ಆಗಿರುವೆನು ಎಂಬ ಶ್ಲೋಕದ ಮುಕ್ತಕವನ್ನು ಇಲ್ಲಿ ಕಾಣುತ್ತೇವೆ
ನಾನು ನಕ್ಷತ್ರಗಳಾ ಅಧಿಪತೀ ಚಂದ್ರ ತಿಳಿ
ನಾನು ವೇದಗಳಲ್ಲಿ ಸಾಮವೇದ
ನಾನು ದೇವತೆಗಳಾ ಇಂದ್ರನೇ ಆಗಿರುವೆ
ನಾನಿಂದ್ರಿಯದಿ ಮನಸು ಗೋಪಬಾಲ ||
ಹಾಗೆಯೇ ಎಲ್ಲ ಸತ್ಕರ್ಮಗಳನ್ನು ಪೂರೈಸಿದವ ಮತ್ತೆ ಈ ಲೋಕದಲ್ಲಿ ಹುಟ್ಟಿ ಬರಲಾರ ಎಂಬುದಾಗಿ ಹೇಳುತ್ತಾನೆ..
ತಾನವನು ಜಗದಲ್ಲಿ ಮತ್ತೆ ಜನಿಸನು ತಿಳಿಯೊ
ಮಾನವಂತನು ಮಾಡೆ ಎಲ್ಲ ಕರ್ಮಗಳ
ನೀನು ತಿಳಿ ಆ ಪರಮ ಪರಮಾತ್ಮನನು ಮನುಜ
ತಾನು ತಪದಿಂ ಕಾಣ್ವ ಗೋಪಬಾಲ ||
ಅಲ್ಲದೇ ಈ ಲೋಕದ ನಿನ್ನ ಕರ್ಮಗಳನ್ನು ಕಳೆಯುವ ಉಪಾಯವನ್ನು ತಿಳಿಸುವೆ ಸರಿಯಾಗಿ ಮನನ ಮಾಡಿಕೊಳ್ಳು ಎನ್ನುತ್ತಾನೆ….
ನಿನಗೆ ಪೇಳುವೆನೀಗ ಕೇಳು ಅರ್ಜುನ ನೀನು
ಮನನ ಮಾಡಿಕೊ ಐದು ಕಾರಣಗಳಲ್ಲಿ
ಸನುಮನದಿ ತಿಳಿ ನೀನು ಕರ್ಮವಂತ್ಯವಗೊಳಿಪ
ಘನ ಸಾಂಖ್ಯೋಪಾಯ ಗೋಪಬಾಲ ||
ಹಾಗೆಯೇ ಪ್ರಾಪಂಚಿಕ ಮುಕ್ತಕಗಳನ್ನು ನೋಡುವುದಾದರೆ…
ಅಧಿಕಾರ ಅಂತಸ್ತು ನಿತ್ಯ ಶಾಶ್ವತವಲ್ಲ
ಮುದದಿಂದ ಜೀವನದಿ ಇದನರಿಯಬೇಕು
ಬದಿಗಿರಿಸಿ ಐಸಿರಿಯ ಮಹದಾಸೆ ತೊರೆ ನೀನು
ಮದನಮೋಹನ ಕಾಯ್ವ ಗೋಪಬಾಲ ||
ಮಾತಿನಿಂದಲಿ ಸರಸ ಮಾತಿನಿಂದಲಿ ವಿರಸ
ಮಾತಿಂದಲೇ ಜಗಳ ನೋಡು ಜನರಲ್ಲಿ
ಮಾತಾಡುವೆಡೆಯಿರಲಿ ಸಂಯಮವು ನಿನ್ನಲ್ಲಿ
ಮಾತು ಮುತ್ತಂತಿರಲಿ ಗೋಪಬಾಲ ||
ಉದಾತ್ತ ವ್ಯಕ್ತಿತ್ವ ಹೊಂದಿದ ಶ್ರೀಯುತರ ಈ ಗೋಪಬಾಲನ ಮುಕ್ತಕ ಮುತ್ತುಗಳು ಕೃತಿಗೆ ಆಶಯನುಡಿ ಬರೆಯುವ ಅವಕಾಶ ನನಗೆ ಒದಗಿರುವುದು ಸಂತೋಷ ತಂದಿದೆ. ಹಾಗೆಯೇ ಎಲ್ಲರನ್ನೂ ಪ್ರೋತ್ಸಾಹಿಸುವ ಶ್ರೀಯುತರು ರಚಿಸಿದ ಕೃತಿ, ಮುಕ್ತಕ ಮುತ್ತುಗಳು ಮನೆ ಮನಗಳಲ್ಲಿ ಬೆಳಕಾಗಿ ಪ್ರಜ್ವಲಿಸಲಿ, ಅದು ಸಕಲರ ಬಾಳಿಗೊಂದು ಕಿರಣವಾಗುವುದರೊಂದಿಗೆ ಹಿರಿಯರಾದ ಶ್ರೀ ಗೋಪಾಲ ಭಟ್ ಸಿ ಯಚ್ ರವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಿ, ಕನ್ನಡ ನಾಡು, ನುಡಿಯ ಹಿರಿಮೆ ಎಲ್ಲೆಡೆ ಪಸರಿಸಲಿ ಎಂದು ಆಶಿಸುತ್ತೇನೆ.
ಹರಿನರಸಿಂಹ ಉಪಾಧ್ಯಾಯ
ತುಂಬಾ ಚೆನ್ನಾಗಿದೆ ಸರ್, ವಿಮರ್ಶೆ.ಅನಂತ ನಮನಗಳು ಮತ್ತು ಧನ್ಯವಾದಗಳು.
ಧನ್ಯವಾದಗಳು ಸರ್
ಭಗವದ್ಗೀತೆಯನ್ನು ಆಧರಿಸಿ ಮುಕ್ತಕ ರೂಪದಲ್ಲಿ ಬರೆದಿರುವ ಸುಂದರ ಕೃತಿಯ ಪರಿಚಯಕ್ಕೆ ಅವಕಾಶ ನೀಡಿದ ಸಂಪಾದಕರಿಗೆ ಅನಂತ ಧನ್ಯವಾದಗಳು
ಸಂಗಾತಿ ಪತ್ರಿಕೆಯ ಸಂಪಾದಕರಿಗೆ ಅನಂತ ನಮನಗಳು, ವಂದನೆಗಳು ಮತ್ತು ಧನ್ಯವಾದಗಳು.