ಕಾವವ್ಯಸಂಗಾತಿ
ಹಂಬಲು
ಶಾಲಿನಿ ಆರ್ ಹುಬ್ಬಳ್ಳಿ
ಬರೆಯಲಾರದ ಕಥೆಗೆ
ನೂರಾರು ಕವಲುಗಳ ವ್ಯಥೆ
ಬಯಲಾಗಲು ಇಲ್ಲಿ
ಇಲ್ಲದ ಕೋಣೆಗಳು
ಪಿಸು ಮಾತುಗಳ
ಬಿಸಿಯುಸಿರ ತಾಪಗಳಿಗೆ
ಕೀಲಿ ಕೈ ಕಳೆದ
ಮುರಿದ ಬಾಗಿಲುಗಳ,
ಸಂದು ಗುಂದುಗಳಲಿ
ಅಳಿಸಲಾರದ ಕಲೆಗಳು
ಹಸಿದ ಹೊಟ್ಟೆ ಅರೆಬೆತ್ತಲು
ಮಾತುಗಳ ತುಂಬ
ಎಲುಬು ಗೂಡಿನ ಹಂದರ
ನೆತ್ತರಾರಿ ಬಿಕ್ಕುತಿದೆ
ಓಟು ನೋಟಿನ
ಸಂತೆಯೊಳಗೆ ಮೌಲ್ಯದ
ಹುಡುಕಾಟ ಬಿಕರಿಯಾಗಿದೆ
ಸಿಗದಂತೆ ಕಂಡವರಿಗೆ,
ಹಿಮದ ತಣ್ಣನೆಯ ನಡೆಗೂ
ಆರದ ಜ್ವಾಲೆಯ ಪ್ರಲಾಪ
ಸತ್ತ ಹೆಣದ ಗೋರಿಗು
ಬೆವರಿನ ಪಸೆಗೆ ತೇವದಿ
ಹಸಿಯಾಗಿ ಸಡಿಲಿದೆ,
ಅರೆ! ಮತ್ತೇನು ಮೊಗದೇನು
ಜೋಳಿಗೆಯದು ತುಂಬದು
ಸತ್ಯ ಸಂವಿಧಾನಕೆ,
ಅಸೂಯೆ ಕಾಮನೆ
ವಿಷಯಾವಾಸನಾದಿಗಳೇ
ಬಲುಭಾರ ಅದಕೆ,
ಕಕ್ಷೆಗೆ ಬರದ ಗ್ರಹಗತಿ
ಕರುಳ ಬೂದಿಯದು
ಕವಡೆ ಕಾಸಿಗೂ ಸಿಗದೆ
ಚಲಾವಣೆಯಿರದ
ಸವೆದ ನಾಣ್ಯದಂತಿದೆ,
ಹೃದಯ ಶೂನ್ಯದಲಿದೆ
ದೇಹದಾಸರೆ ತಪ್ಪಿ
ಆತ್ಮವದು ನಲುಗಿದೆ,
ದಯೆ ದಾಕ್ಷಿಣ್ಯದ
ಕೂಗಿಗೆ ಗಂಟಲು ಕಟ್ಟಿದೆ
ಪಾತ್ರಗಳ ಸೃಷ್ಟಿಯಲ್ಲಿ
ಸೃಷ್ಡಿಸಿದ ಮಾತುಗಳಲಿ
ಹುಲುಮಾನವನವನು
ದೇವಗಿಂತ ಮಿಗಿಲೆನುತಲಿಹನು
ವೀರನವನು ಸತ್ತ ದನಿಗೆ
ದನಿಗೂಡಿಸಿ ಹಸಿವ
ನೀಗಿಸಿ ಮುಗಿಲ ಕಾಂಬನು
ತೋರುವ ತೋರಿಸುವ
ರಹದಾರಿಯಲಿ ಸತ್ಯವೆ
ಗೆಲುವನೆನುವನು,
ಬರುವನೆ ಅವನು ಮತ್ತೆ?
ಬುದ್ದನಾಗಿ ಬಸವನಾಗಿ
ಕದಳಿವನದ ಅಕ್ಕನಾಗಿ
ನಿಗಿ ನಿಗಿ ಕೆಂಡವನಳಿಸಿ
ಶಾಂತಿ ಸಮಾಧಾನವ
ಮನಸ್ಸಿಗೆ ಮತ್ತೆ ಮತ್ತೆ
ನಾಟುವಂತೆ ಭೋಧಿಸುವ
ಮನದ ಮೂಲೆಗೆ ಬಂದು
ಕುಳಿತು ಕಣಿ ಹೇಳುತ
ಸಾಂತ್ವಾನಿಸಿ ನೆನ್ನೆ
ನಾಳೆಗಳು ನನ್ನದೆನುವವರು?