ಒಂದು ಹೊಸ ಗಜಲ್

ಕಾವ್ಯ ಸಂಗಾತಿ

ಒಂದು ಹೊಸ ಗಜಲ್

ಯ.ಮಾ.ಯಾಕೊಳ್ಳಿ

ಅರಳುವ ಪ್ರೀತಿ ಅರಳಲಿ ಹಿಂಜರಿಕೆ ಏಕೆ ಸಖನೆ
ಹೊಸ ಮಳೆಗಾಲಕೊಮ್ಮೆ ಮರ ಚಿಗುರುವುವೆ ಸಖನೆ

ಒಂದುದಿನ ನೊಂದು ಮುಗಿಸಲು ಜೀವನವು ಏಕದಿನ ದಾಟವಲ್ಲ
ನದಿಯ ಪಯಣ ನಿರಂತರ ಹಲವು ತಿರುವುಗಳಿವೆ ಸಖನೆ

ಬಿದ್ದವರು ಮತ್ತೆದ್ದು ಹೊಸ ಹೆಜ್ಜೆ ತುಳಿಯಲೇಬೇಕು
ಬಿದ್ದೆವೆಂದು ಬಿದ್ದಲ್ಲೆ ಬೀಳುವದು ತಪ್ಪಲ್ಲವೇ ಸಖನೆ

ಹೊಸ ಹೊಸತನು ಚಿಗುರಿಸಲೆಂದೆ ಲೋಕ ಕಾದಿದೆ
ನಿರಾಶೆಯ ಹುದುಲಿಂದ ಕಿತ್ತೆಳೆದು ಹೊಸತು ಮೂಡು ವವೆ ಸಖನೆ

ಅಳುತ್ತ‌ ಕೂಡದು ‌ಮರ,ದುಃಖಿಸಲು ಗಾಳಿಗೆಲ್ಲಿದೆ ಹೊತ್ತು
ತಮ್ಮ ಕಾಯಕದಿ ನಿರತ ,ಉದಾಹರಣೆ ನಮಗಲ್ಲವೆ ಸಖನೆ

ಕಳೆದ ಎಲೆಗಳ ಜಾಗದಲೆ ಹೊಸ ಜೀವ ಮೂಡಿವದು
ಕಡಿದ ಕಾಂಡದಲೆ ಮತ್ತೊಂದು ಗಿಡ ಮೊಳೆಯುವದ ಲ್ಲವೆ ಸಖನೆ

ಅತ್ತಲಿಂದ ಹೊತ್ತೇನೂ ತಾರದ ಯಯಾಒಯ್ಯಲೇನೂ ಇಲ್ಲ
ನೋವಿನೊಳಗೂ ಸಂತಸ ಕಾಣುತ್ತಲಿರು ಇದೇ ಜೀವನ ವಲ್ಲವೆ ಸಖನೆ


Leave a Reply

Back To Top