ಕಾವ್ಯ ಸಂಗಾತಿ
ಸದ್ದಿಲ್ಲದೆ
ಅನಿತಾ
ಅದೆಷ್ಟೋ ಬಾರಿ ಮಾತಿನ ಗೂಡಿಂದ
ಮೌನದ ಗವಿಯೊಳಗೆ ಅಡಗಬೇಕೆಂಬ
ಹಂಬಲ ಬದಲಾಗಿದೆ!
ನಿಶ್ಯಬ್ದದ ಹಾದಿಯಲಿ ಕೊಂಚ,
ಕೊಂಚವಾದರೂ ಸಪ್ಪಳ ಮಾಡುವ
ತಂಗಾಳಿಯು ಮೂಕಾಗಿದೆ!
ಬಾನಿನ ಮೋಡಗಳು ಕಪ್ಪಾದರೂ
ಹನಿಯಾಗಿ ಭುವಿ
ಸೇರದೇ ಮಂಕಾಗಿದೆ!
ಮನೆಯ ಕಿಟಕಿ, ಬಾಗಿಲುಗಳು
ತೆರೆದಾಗ, ಮುಚ್ಚಿದಾಗ ಬರುತ್ತಿದ್ದ ಸದ್ದಿಗೂ
ದಂಗು ಬಡಿದಂತಾಗಿದೆ!
ಹತ್ತಿರದ ಮಾಮರದಲಿ ಹಾಡುತ್ತಿದ್ದ ಕೋಗಿಲೆ
ಸ್ವರವ ಹಿಂಬಾಲಿಸುವ ಮನವು
ನೀರವತೆಯ ಬಯಲಿಗೆ ಹೆಜ್ಜೆ ಹಾಕಿದೆ!
ನೀರಸ ಬದುಕಿಗೆ ಮಾತಿನ ಜಾಡು
ಜಾದೂ ತೋರಲೆಂದು
ನೀನಿರದ ಮನೆಯ ಗಡಿಯಾರದ ಮುಳ್ಳುಗಳು
ಹಠ ಮಾಡುತ್ತಿವೆ!