ಕಾವ್ಯ ಸಂಗಾತಿ
ದೇವರ ಕೋರ್ಟ್‌ನಲ್ಲಿ ಒಂದು ದಾವೆ..
ದೀಪಾ ಗೊನಾಳ್
ಮಾತು ಸಂಶೋಧನೆ
ಮಾಡಿದವರ ವಿರುದ್ಧ ನನ್ನದೊಂದು
ದೂರಿದೆ ಶಿವಾ,
ಹಕ್ಕಿಪಿಕ್ಕಿ ಪದಗಳ ಹಂಗಿಲ್ಲದೆ
ತಮ್ಮದೆ ಗುಂಗಿನಲ್ಲಿ
ಮಂಗಾಟ ಆಡುವಾಗ
ಹಕ್ಕಿಯೇ ಆಗಿದ್ದರೆ ಚೆನ್ನಿತ್ತು ಅನ್ನಿಸಿತೋ ಶಿವನೆ,
ದುಂಬಿಯ ಆಟಕ್ಕೆ
ಹೂವು ಬಿರಿಬಿರಿದು ನಗುವಾಗ
ಸೂರ್ಯನ ಕಿರಣಗಳು
ನಾಚಿ ಮೋಡ ಮರೆ ಮಾಚಿದಾಗ
ನಾನು ಮಣ್ಣಾಗಿ ಕಣ್ಣ ಹೊತ್ತು
ಜಗಕೆ ಬರಬೇಕಿತ್ತು
ಈ ಕಿವಿ ಆ ಬಾಯಿ ಯಾರಿಗೆ ಬೇಕಿತ್ತು
ಅಲ್ಲವೇ ಶಿವನೆ!!
ಸರಸಕ್ಕೆ ಸೇರಿದ ಸರ್ಪಗಳು
ಸ್ಪರ್ಶಕ್ಕೆ ತಳಕು ಬಿದ್ದು ಬಳುಕುವಾಗ
ಸದ್ದೆ ಇಲ್ಲ ನೋಡು ಶಿವಾ
ಯಾರೊ ಯಾರಿಗೋ ಎದೆಕತ್ತರಿಸಲು
ಎಸೆಯುವ ನಾಲಕ್ಕು ಶಬ್ಧಗಳನ್ನು
ಹಿಡಿದು ತಂದು ಸಂಬಂಧದ ಸೆರಗಿನ
ತುಂಬ ತೇಪೆ ಹೊಲಿದು
ಹೂವಿನಕಸೂತಿ ಹಾಕಿಟ್ಟಿರುವಾಗಲೇ
ಮತ್ಯಾರೊ ಪದಗಳ ಬಾಣ ಬಿಟ್ಟು
ಹೂವ ಛಿದ್ರಿಸಿದರೆ ಹೇಗೆ!!?
ಶಬ್ಧಗಳ ಕರ್ಕಶ ತಾಳಲಾರೇನೊ,
ಈಟಿ ಭರ್ಚಿ ಬಂದೂಕುಗಳು
ಅಂತ ದೊಡ್ಡ ರಂಧ್ರ ಕೊರೆದ ಮಾಹಿತಿ ದೊರೆಯಲಿಲ್ಲ
ಈ ಮಾತಿನ ಗಾಯ ಆರಿದಬಗ್ಗೆ
ವರದಿಯೂ ಸಿಕ್ಕಿಲ್ಲ
ವಾಕ್ಯಗಳಲೇ ಬಂಧಿಸಿ
ಪ್ಯಾರಾಗಟ್ಟಲೇ ಬೈದು
ಪುಟಗಟ್ಟಲೇ ಜೀವಾವಧಿ
ಘೋಷಿಸಿ
ವಾಕ್ ಸಮರಗೈದು
ಮಾತಲ್ಲೆ ಗಲ್ಲಿಗೇರಿಸುತ್ತಾರೆ
ನಿತ್ಯ ನಿನ್ನನ್ನಿಲ್ಲಿ
ತುಟಿಇದ್ದು ದನಿಹೊರಡಿಸದ
ನಿನ್ನ ಕಂಡರೆ ನನಗೊ ಅಕ್ಕರೆ
ಮಾತು ಕಲಿತವರ
ಮನಕ್ಕೆ ಮಮತೆಯ ಬೀಜ
ಬಿತ್ತುವ ಜರೂರತ್ತಿದೆ
ನನ್ನ ದೂರಾಲಿಸಿ
ದೂರೆಲ್ಲೊ ಕುಳಿತು
ಮುಗುಳ್ನಗಬೇಡ
ದೂರಾದವರ ಒಂದುಮಾಡುವ
ದೂಷಿಸುವವರ ಸರಿಮಾಡುವ
ಪ್ರೇಮದ ಭಾಷೆ ಕಳಿಸಿಕೊಡು
ಇಹಕೆ ಇಗಿಂದೀಗಲೆ
ಮಾತು ಸಂಶೋಧನೆ
ಮಾಡಿದವರ ವಿರುದ್ಧ ನನ್ನದೊಂದು
ದೂರಿದೆ ಶಿವಾ!!
===============================
ಅರ್ಥಪೂರ್ಣ