ಕಾವ್ಯ ಸಂಗಾತಿ
ಚಪ್ರಾಸಿಯೊಬ್ಬನ ರಶೀದಿ ಚೀಟಿ…!!
ದೇವರಾಜ್ ಹುಣಸಿಕಟ್ಟಿ
ವಸಂತವಾಗುವ ಮುನ್ನ
ಏನಿತ್ತು ಅಲ್ಲಿ…
ಒಂದಿಷ್ಟು ಪಾಪಾಸು ಕಳ್ಳಿ
ಬಾಯರಿದ ನೆಲ…
ಸುಡು ಬಿಸಿಲು…
ಮೈತುಂಬಿದ ಬೆವರ ವಾಸನೆ….
ಮತ್ತೆ ಇಷ್ಟೇ ಅಂದ್ರ್ ಇಷ್ಟೇ….
ಹರೆಯ ತುಂಬಿ ತುಳುಕಿ…
ಕಾದು ಕಬ್ಬಿಣವಾಗಿರುವ
ಎಣ್ಣೆತುಂಬಿದ ಗಾಣ…..!!
ಹೇಳದೆ ಕೇಳದೇ ಹೀಗೆ
ಇದ್ದಕ್ಕಿದ್ದಂತೆ ಮಳೆ ಸುರಿದು
ಬಿಡುವುದೇ…..
ಈಗ ತಟ್ಟನೆ
ಸುತ್ತಲೂ ಘಮಗುಡುತ್ತಿರುವ
ಮಣ್ಣ ವಾಸನೆ…
ಒಂದಿಷ್ಟು ಥೇಟ್ ಸಿಗರೇಟಿನಷ್ಟೇ
ಸಣ್ಣ ಹೊಗೆ….
ಒಂದಡಿ ಮೇಲೇದ್ದು ಕರಗಿದಾಗಲೇ
ನೆಲದ ಮೇಲೆಲ್ಲಾ
ಮಳೆಹುಳುವಿನ ಸಣ್ಣನೆಯ ನರ್ತನ….
ಚಪ್ರಾಸಿಯೊಬ್ಬ ಮೈ ನೆರೆಯುವುದೆಂದರೆ ಹೀಗೆ…
ಬಾಣೆಲೆಯಲ್ಲಿ ಕಾದ ಎಣ್ಣೆಗೆ
ಬೇಸಿಗೆಯ ಬಿರು ಬಿಸುಲಿಗೆ
ಒಣಗಿ ಮುರುಟಿದ ಹಪ್ಪಳ ಸಂಡಿಗೆ
ಹಾಕಿದರೆ ಸಿಡಿಯುತ್ತಲ್ಲ ಥೇಟ್ ಹಾಗೆ….
ಈಗ ಮತ್ತೇನಿಲ್ಲ ಅಲ್ಲಲ್ಲಿ
ನಳನಳಿಸುವ ಹೂವು…
ಯಾರದೋ ಹೆಸರಿಗೆ
ಇನ್ನ್ಯಾರದೋ ರಸೀದಿ ಚೀಟಿ
ಹರಿದಂತೆ…….!!