ಕಾವ್ಯ ಜುಗಲ್ ಬಂದಿ
ಖಾಲಿತನದ ಗಳಿಗೆಯ ಕವಿತೆಗಳು
ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ
ಖಾಲಿತನದ ಗಳಿಗೆಯ ಕವಿತೆಗಳು
ಗಳಿಗೆ-೩
ಇರಿಯುವುದು
ಮೌನವೋ.. ಮಾತೋ..
ಅರ್ಥವಾಗದು ಮಾಧವ..
ಹದವರಿತ ಮಿದು ಮಾತು
ಮನವಿರಿಯದ ಮೃದು ಮೌನ
ಎದೆಗೆ ತಂಪನೀಯ್ವವಲ್ಲದೇ
ಬದುಕ ಬಣವೆಗೆ ಬೆಂಕಿಯುಗುಳುವ
ಗಾಢ ಮಾತು ಗೂಢ ಮೌನ
ಮನದ ಧಗೆಯನು ನೀಗ್ವವೇ?
ವೀಣಾ ಪಿ.
ಹಗೆಯಿರದ ಮೆದು ಮಾತನಾಡದು ಜಗ
ಅರ್ಥವಾಗದಾಗ ಮಾತು ಮೌನವೇ ಲೇಸು
ಅದರಲ್ಲೇನು ಸೋಜಿಗ
ಬೆಂಕಿಯಾದರು ರೊಟ್ಟಿ ತಟ್ಟೀತು
ಬೆಂಕಿಯಂತ ಮಾತು
ಮನೆಮನಗಳ ಸುಟ್ಟಿತು
ಬೇಡ ನಮ್ಮ ನಡುವೆ
ಎದೆ ಬಗೆಯುವ ಹಗೆಯ
ಶಬ್ದಗಳ ಜಾತ್ರೆ
ಬೆಳದಿಂಗಳಂತ ಮೌನದಲಿ
ಸಾಗಲಿ ಪ್ರೇಮಯಾತ್ರೆ
ಮಾಧವ
———————————————ಮುಂದುವರೆಯುವುದು ಪ್ರೇಮ ಯಾತ್ರೆ…….
ವೀಣಾ ಪಿ
ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.