ಬಿಗಿಯಾಗಿದೆ ಮುಂಜಾವು

ಕಾವ್ಯ ಸಂಗಾತಿ

ಬಿಗಿಯಾಗಿದೆ ಮುಂಜಾವು

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ನಿದ್ದೆಯಿಂದೆದ್ದ ಮೈಮನಗಳಿಗೆ
ತಂಗಾಳಿಯ ತಂಪು ನೀಡಿ
ಹಕ್ಕಿಗಳ ಇಂಚರದೊಡನೆ
ಮಾತಿಗಿಳಿದು ಓಲಾಡುತ ತೂಗಾಡುತ
ಮುದ ನೀಡುವ ಮುಂಜಾವು
ಇಂದೇಕೋ ಬಿಗಿಯಾಗಿದೆ

ಗಾಳಿಯೊಡನೆ ಗುದ್ದಾಡಿ
ಮಂಜಿನೊಡನೆ ಮಾತು ಬಿಟ್ಟು
ಸೂರ್ಯನೊಡನೆ ಸಿಟ್ಟು ಮಾಡಿ
ಅದೆಷ್ಟು ಚಿವ್ ಗುಟ್ಟಿದರು ಮಾತಾಡದೆ
ಮೌನವಾಗಿ ಬಿಗಿಯಾಗಿದೆ ಮುಂಜಾವು

ರಾತ್ರಿ ಪೂರ್ಣಚಂದ್ರನ
ಬೆಳದಿಂಗಳ ಕೊರತೆಯೋ
ನಾಯಿಗಳ ಬೊಗಳಾಟ
ಮಳೆ ಹುಳುಗಳ ಹಾರಾಟ ವಿಲ್ಲದೆ
ಒಂಟಿಯಾದೆ ಎಂಬ ಭಾವವೋ
ಸಹಿಸದ ಏಕಾಂತದ ತಳಮಳವೋ ಬಿಗಿಯಾಗಿದೆ ಮುಂಜಾವು

ನಶೆ ಏರಿಸಿರುವ ಮದೊನ್ಮತ್ತರಿಗೆ
ದರೋಡೆ ಮಾಡುವ ಕಳ್ಳ ಕಾಕರಿಗೆ
ಲಜ್ಜೆ ಬಿಟ್ಟ ಕಾಮಾಂಧರಿಗೆ
ಸಹಾಯಕಾರಿಯಾದೆ ಎಂಬ ಮಾನಸಿಕವೋ ಬಿಗಿಯಾಗಿದೆ ಮುಂಜಾವು

ನಿದ್ದೆ ಎಳೆದು ಅಪಘಾತ ಮಾಡಿ
ಎಷ್ಟೋ ಜೀವ ಬಲಿ ಪಡೆದ ನೋವೋ
ದಾರಿ ಕಾಣದೆ ಎಡವಿ ಬಿದ್ದು
ಹಾಸಿಗೆ ಹಿಡಿಸಿದ ಬೇಜಾರೋ
ಎಷ್ಟೋ ಕೆಲಸಕ್ಕೆ ಕತ್ತಲೆಯ
ತಡೆ ಹಾಕಿದ ನಿರಾಶೆಗೋ
ಬಿಗಿಯಾಗಿದೆ ಮುಂಜಾವು

ಜೀವಕೆ ಜೀವದಂತಿರುವ
ಒಲವಿನ ಜೋಡಿಗಳಿಗೆ
ಇಡೀ ರಾತ್ರಿಯಲ್ಲ
ವಿರಹದ ಕಿಚ್ಚು ಹಚ್ಚಿದ ಸಿಟ್ಟಿಗೆ
ಶಾಪಕೆ ಗುರಿಯಾದೆನಲ್ಲ ಎಂಬ ಕಳವಳಕೆ

ಎಲೆಗಳ ಅಲುಗಾಟ ವಿಲ್ಲ
ಹಿತವಾದ ತಂಪು ಗಾಳಿಯಿಲ್ಲ
ಮಂಜಿನ ಹನಿಗಳು ಮೊದಲೆ ಇಲ್ಲ
ಕಳವಳಿಸಿ ಏನೂ ತೋಚದೆ
ಅತ್ತಿಂದಿತ್ತ ಓಡಾಡುವ ಹಕ್ಕಿಗಳ ತಿರುಗೀ ನೋಡದೆ
ಬಿಗಿದು ನೊಂದು ದಹಿಸಿದ
ಹುಗಿಯ ಝಳ ಮಾತ್ರ
ತಾಗುತಿದೆ
ಬಿಗಿಯಾಗಿದೆ ಮುಂಜಾವು.


Leave a Reply

Back To Top