ಪುಸ್ತಕ ಸಂಗಾತಿ
ಮನದಮಾತು – ಹಲವುಬಗೆ
ಕೃತಿ : ಮನದ ಮಾತು – ಹಲವು ಬಗೆ
ಲೇಖಕಿ : ಶ್ರೀಮತಿ ಸುಮಾ ಕಿರಣ್
ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳಿದ್ದು ಅವುಗಳಲ್ಲಿ ಕಥೆ, ಕವನ, ಲೇಖನ, ಪ್ರಬಂಧ, ನಾಟಕ, ವಿಮರ್ಶೆ ಮುಂತಾದವುಗಳು ಹೆಚ್ಚು ಪ್ರಚಲಿತದಲ್ಲಿವೆ. ಬರೆಹಗಾರರು ತಮ್ಮ ನೆಚ್ಚಿನ ಪ್ರಕಾರವನ್ನು ಆಯ್ಕೆ ಮಾಡಿ ಅದರ ಪರಿಧಿಯೊಳಗೆ ವಿಷಯವನ್ನು ಪ್ರಸ್ತಾಪಿಸುವುದು ಅನಿವಾರ್ಯ.. ಹಾಗೆಯೇ ಆ ಪ್ರಕಾರದ ಮಾನದಂಡಗಳೇನು ಎಂಬುದನ್ನು ಅರಿತಿರುವುದು ಮುಖ್ಯವಾಗುತ್ತದೆ.
ಇಂಥಾ ಒಂದು ಪ್ರಯತ್ನದಲ್ಲಿ ಶ್ರೀಮತಿ ಸುಮಾ ಕಿರಣ್ ರವರು ತಮ್ಮ ಮನದ ಮಾತುಗಳನ್ನು ಲೇಖನಗಳ ಮೂಲಕ ಪ್ರಸ್ತುತಪಡಿಸಿರುವುದು ಈಗಾಗಲೇ ಜನಮಿಡಿತ ಪತ್ರಿಕೆ ಮೂಲಕ ಓದುಗರನ್ನು ತಲುಪಿರುತ್ತದೆ. ನೂರಾರು ಲೇಖನಗಳಿಂದ ಆಯ್ದ ಸುಮಾರು 33 ಲೇಖನಗಳನ್ನು ಒಂದೆಡೆ ಸೇರಿಸಿ ಕೃತಿಯಾಗಿ ಹೊರತರುವ ಮೂಲಕ ಇನ್ನಷ್ಟು ಜನರಿಗೆ ತಲುಪಿಸುವ ಕಾರ್ಯದಲ್ಲಿ ಈಗ ತೊಡಗಿರುವುದು ಶ್ಲಾಘನೀಯ.
ಈ ಕೃತಿಯಲ್ಲಿರುವ ಎಲ್ಲಾ ಲೇಖನಗಳು ಕೂಡಾ ಒಂದು ದೃಷ್ಟಿಯಿಂದ ಗಂಭೀರ ವಿಚಾರಗಳೇ ಆಗಿದ್ದು ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಆಪ್ತರೊಡನೆ ಸಮಾಲೋಚಿಸಿ, ಸಾಲದೆಂಬಂತೆ ಅಂಕಿ ಅಂಶ ಮುಂತಾದ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಓದುಗರಿಗೆ ಮನದಟ್ಟಾಗುವ ರೀತಿ ಮುಂದಿರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಜೊತೆಗೆ ಬಹಳ ದೀರ್ಘವೂ ಅಲ್ಲದ ತೀರಾ ಸಣ್ಣವೂ ಅಲ್ಲದ ಲೇಖನಗಳು ಓದುಗನ ತಾಳ್ಮೆಯನ್ನು ಪರೀಕ್ಷಿಸದೆ ಲೀಲಾಜಾಲವಾಗಿ ವಿಹರಿಸುವಂತೆ ಮಾಡುತ್ತದೆ. ಏಕೆಂದರೆ ಮೊದಲನೆಯದಾಗಿ ಇವುಗಳ ಪದಮಿತಿ. ಹಾಗೂ ಗಾತ್ರ.
ಎರಡನೆಯದಾಗಿ ಬರೆಹದ ಶೈಲಿ. ತೀರ ಗಂಭೀರವೂ ಅಲ್ಲದ, ತೀರ ಸರಳವೂ ಅಲ್ಲದ ತಿಳಿ ಹಾಸ್ಯದ ಜೊತೆಗೆ ಸಂದರ್ಭಗಳನ್ನು ಉದಾಹರಣೆಯೊಂದಿಗೆ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು
ಆರಂಭದಲ್ಲೇ ಒಗೆಯುವ ಯಂತ್ರದ ರೋಚಕ ಬರೆಹದಲ್ಲಿ ತಿಳಿ ಹಾಸ್ಯದಿಂದ ಕೂಡಿದ ಪ್ರಸಂಗವೊಂದು ನಮ್ಮನ್ನು ನಗೆಗಡಲಲ್ಲಿ ತೇಲಿಸುವುದಲ್ಲದೆ ಗಂಡು ಮತ್ತು ಹೆಣ್ಣಿನ ಸರ್ವೇಸಾಮಾನ್ಯವಾದ ಮನೋಭಾವ ಹೇಗಿದೆ, ಯಾವ ರೀತಿ ವ್ಯವಹರಿಸಿದರೆ ಬೇಗ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಬಹಳ ಅರ್ಥಪೂರ್ಣವಾಗಿ ಬಣ್ಣಿಸಿದ್ದಾರೆ. ಹಾಗೆಯೇ ಮುಂದಿನ ಪುಟಗಳಲ್ಲಿ ಮೀಸಲಾತಿ, ಲಂಚದ ಮೂಲ ಎಲ್ಲಿ, ಮಾದಕ ವ್ಯಸನಗಳಿಂದ ಆಗುವ ಅನಾಹುತ ಹೀಗೆ ಸಾಮಾಜಿಕ ಕಳಕಳಿಯುಳ್ಳ ಲೇಖನಗಳು ನಮ್ಮನ್ನು ಯೋಚನೆಗೆ ಈಡು ಮಾಡುತ್ತವೆ.
ಹಾಗೆಂದು ವ್ಯಕ್ತಿಚಿತ್ರಣ ಇಲ್ಲಿ ಇಲ್ಲ ಎನ್ನುವ ಹಾಗಿಲ್ಲ.. ವಿಷ್ಣುವರ್ಧನ್, ಲಾಲ್ ಬಹಾದ್ದೂರ್ ಶಾಸ್ತ್ರೀಜಿ, ಎಸ್ ಪಿ ಬಾಲಸುಬ್ರಹ್ಮಣ್ಯಂ ಮೊದಲಾದವರ ಜೀವನದ ಅಮೂಲ್ಯ ತುಣುಕುಗಳನ್ನು ನಮಗೆ ಉಣಬಡಿಸಿದ್ದಾರೆ.. ಹೇಗೆ ನಾವು ಸೇವಿಸುವ ಆಹಾರವು ನಮ್ಮ ಗುಣವನ್ನು ನಿರ್ಧರಿಸುತ್ತದೆ ಎಂದು ಒಂದು ಸಣ್ಣ ಸನ್ನಿವೇಶದ ಮೂಲಕ ಹೇಳಿದ್ದಾರೆ. ಇನ್ನು ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡುವುದರಿಂದ ಅಪಘಾತ ಕಡಿಮೆ ಆಗಲು ಸಾಧ್ಯವೇ? ಎಂದು ನಮ್ಮನ್ನು ಚಿಂತನೆಗೆ ಒಳಪಡಿಸಿದ್ದಾರೆ.
ಹೀಗೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದ ಲೇಖನಗಳ ಸುಂದರ ಗುಚ್ಛ ಇದಾಗಿದ್ದು, ಈ ಕೃತಿಯನ್ನು ತನ್ನ ಸೋದರತ್ತೆಯವರಿಗೆ ಅರ್ಪಿಸಿ ಕೃತಾರ್ಥರಾಗಿದ್ದಾರೆ ಶ್ರೀಮತಿ ಸುಮಾ ಕಿರಣ್ ರವರು. ಹಾಗೆಯೇ ಶ್ರೀ ಚಂದ್ರಕಾಂತ ಜಿಡ್ಡಿ ರವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ಜನಮಿಡಿತ ಪತ್ರಿಕೆಯ ಸಂಪಾದಕರಾದ ಶ್ರೀ ಜಿ ಎಂ ಆರ್ ಆರಾಧ್ಯರವರ ಬೆನ್ನುಡಿ ಈ ಕೃತಿಗೆ ಹೆಚ್ಚಿನ ತೂಕ ಒದಗಿಸಿದೆ.. ಹೆಚ್ ಎಸ್ ಆರ್ ಎ ಪ್ರಕಾಶನದ ಮೂಲಕ ಸುಂದರವಾಗಿ ಅಚ್ಚುಗೊಂಡ ಈ ಮನದ ಮಾತು – ಹಲವು ಬಗೆ ಕೃತಿಯು ನಾಡಿನಾದ್ಯಂತ ಓದುಗರನ್ನು ತಲುಪಿ ಸಮಾಜಕ್ಕೆ ಅರಿವು ಉಂಟುಮಾಡಲಿ ಎಂದು ಆಶಿಸುತ್ತೇನೆ ಹಾಗೆಯೇ ಲೇಖಕಿಗೂ ಕೀರ್ತಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
ಹರಿನರಸಿಂಹ ಉಪಾಧ್ಯಾಯ
ಧನ್ಯವಾದಗಳು ಸಂಪಾದಕರಿಗೆ