ಅಂಕಣ ಸಂಗಾತಿ

ಸಕಾಲ

ಹಸಿರೆಂದರೆ-ಜೀವದುಸಿರು

ಹಸಿರು ಉಸಿರೆಂದು ಹೌಹಾರಿ ಹಸಿರೆಲೆಯ ಉಸಿರ ನಿಲ್ಲಿಸಿದರೆ ಬದುಕಿಗೆ ಅರ್ಥ ಉಂಟೆ? ಮುಕ್ಕೊಟಿಗೆ,             ಶತಮಾನಗಳಿಂದ ಪ್ರಕೃತಿಯು ನೀಡಿರುವ ಕುರಿತು ಅಮೋಘ ವ್ಯಾಖ್ಯಾನಗಳಿವೆ.ಭೂಮಿಯ ರಚನೆಯಿಂದ ಹಿಡಿದು ಮಾನವ ಜೀವಿ ಜನ್ಮತಾಳುವ ತನಕವೂ ತನ್ನದೇ ಆದ ಐತಿಹ್ಯಗಳನ್ನು ಉಳಿಸಿ, ಬೆಳೆಸಿಕೊಂಡು ಬಂದ ಸಾಕ್ಷ್ಯಗಳು ಪಳೆಯುಳಿಕೆಗಳ ಮೂಲಕ ಹಾಗೂ ಸ್ಮಾರಕ, ಶಿಲಾಶಾಸನಗಳು, ಗ್ರಂಥಗಳು ಸಾರಿ ಸಾರಿ ಹೇಳುತ್ತಿವೆ. ವಿಚಿತ್ರವಾದರೂ ಸತ್ಯವಾದುದು.ಹಸಿರು ಕಂಗಳಿಗಷ್ಟೇ ಅಲ್ಲ ಮನಕ್ಕೂ ನೆಮ್ಮದಿ,ಉಲ್ಲಾಸ ನೀಡುವ ದಿವ್ಯ ಔಷಧ.

ರೈತನ ಒಡಲು ತುಂಬುವ ಕಣಜ

ಇಳೆಯಂಗಳದ ಋಣ ಕಣಜ

ಉತ್ತಿಬಿತ್ತಿದವರಿಗಷ್ಟೆ ಒಲಿಯುವುದು

ಸಮೃದ್ಧ ಬದುಕಿನ ವನಜವಿದು

ಹಸಿರೊಂದೆ ಜಗಕೆಲ್ಲ ಮನುಜ

ಶ್ರಾವಣ ಮಾಸ ಬಂತೆಂದರೆ ಬರಡಾಗಿ,ಬಳಲಿಬೆಂಡಾಗಿ ಸೋತ ಪ್ರಕೃತಿಯ ತನುವಿಗೆ ಮೇಘನ ಸ್ಪರ್ಶಕೆ ಇಡೀ ಭೂದೇವಿ ಮೈದಳೆದು ಹರುಷೋಲ್ಲಾಸದೊಂದಿಗೆ ಹಸಿರೆಲೆಯ ಚಿಗುರಿನಲಿ ಇಡೀ ಭೂಮಂಡಲವನ್ನೆ ಜೀವಕಳೆ ತುಂಬಿ ನಕ್ಕು ನಲಿವಾಕ್ಷಣ ಎಂಥ ನಾಸ್ತಿಕರಿಗೂ ಹಸಿರೆ ದೈವವೆಂಬ ಕಲ್ಪನೆ ಮೂಡದಿರದು

ಇಡೀ ಪ್ರಕೃತಿಯು ಶ್ರಾವಣ ಮಾಸದಲ್ಲಿ ಹಚ್ಚ ಹಸಿರಿನ ಬಣ್ಣದಲ್ಲಿ ಮುಳುಗಿರುತ್ತದೆ. ಹುಡುಗಿಯರು ಮತ್ತು ಮಹಿಳೆಯರು ಸಹ ಹಸಿರು ಬಣ್ಣದ ಅಲಂಕಾರದಲ್ಲಿ ಪ್ರಕೃತಿಯ ಕಡೆಗೆ ತಮ್ಮ ಪ್ರೀತಿ ಮತ್ತು ಸಮರ್ಪಣೆಯ ಭಾವನೆಯನ್ನು ತೋರಿಸುತ್ತಾರೆ. ಹಸಿರು ಬಟ್ಟೆ, ಹಸಿರು ಬಳೆಗಳು, ಹಸಿರು ಗೋರಂಟಿ ಮತ್ತು ಎಲ್ಲವೂ ಹೆಚ್ಚಾಗಿ ಹಸಿರು ಬಣ್ಣವನ್ನೇ ಧರಿಸಲು ಇಷ್ಟ ಪಡುತ್ತಾರೆ. ಹಸಿರು ಬಣ್ಣವನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

​ಹಸಿರು ಬಣ್ಣದ ಬಟ್ಟೆಗಳನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗಿದೆ. ಪ್ರಕೃತಿ ನಮಗೆ ಅದರ ಸಂಪತ್ತನ್ನು ತುಂಬಾ ನೀಡಿದೆ. ಶ್ರಾವಣ ಮಾಸದಲ್ಲಿ ಹಸಿರು ಬಟ್ಟೆಗಳನ್ನು ಧರಿಸಿ, ಮಹಿಳೆಯರು ಒಂದು ರೀತಿಯಲ್ಲಿ ಪ್ರಕೃತಿ ಮತ್ತು ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಹಸಿರು ಬಣ್ಣವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಶ್ರಾವಣ ಮಾಸದಲ್ಲಿ ಹಸಿರು ಬಟ್ಟೆಗಳನ್ನು ಧರಿಸುವುದು ಪತಿಯ ಆಯಸ್ಸನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆಯಿದೆ.ನಂಬಿಕೆಗಳು ಮೂಡನಂಬಿಕೆಗಳಾಗಿ ಪರಿವರ್ತನೆಯಾಗಬಾರದು ಅಷ್ಟೇ. ಹಸಿರು ಆಮ್ಲಜನಕ ಉತ್ಪಾದನೆಗೆ ಮಾತ್ರ ಮೀಸಲಲ್ಲ.ಅದು ಆತಂಕದ ನಡುವೆ ನಿಟ್ಟುಸಿರು ಬಿಡುವ ತಂಗಾಳಿ. ಹಸಿರೆಂದರೆ ಜೀವದುಸಿರೆಂಬ ಸತ್ಯ ಮರೆಯುವಂತಿಲ್ಲ.

ಹೆಣ್ಣು ಮಕ್ಕಳು,ಗಂಡು ಮಕ್ಕಳು ತಮ್ಮ ಕೈಗಳಿಗೆ  ಮೆಹಂದಿಯನ್ನು ಹಚ್ಚುತ್ತಾರೆ. ಇದು ಪ್ರಕೃತಿಯ ಮೇಲಿನ ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ.ತಿನ್ನುವ ಪ್ರತಿ ಆಹಾರವು ಹಸಿರೆಲೆಯ ಬಳುವಳಿಯೆಂಬುದನು ಮರೆಯಬಾರದು..ಕೈಗಳಿಗೆ ಮೆಹಂದಿ ಹಚ್ಚುವುದರಿಂದ ಮನಸ್ಸು ಹಸಿರಾಗುತ್ತದೆ, ಪುಳಕಿತಗೊಳ್ಳುತ್ತದೆ ಮತ್ತು ದೇಹವು ತಂಪನ್ನು ಪಡೆಯುತ್ತದೆ,ಸದಾ ಲವಲವಿಕೆಯಿಂದ ಇರಬೇಕೆಂದರೆ ನಾವು ಮರಗಿಡಬಳ್ಳಿಗಳಂತೆ ಚಿಗುರುತ್ತ ಹಚ್ಚಹಸಿರಾಗಿ ಸಮೃದ್ಧವಾಗಿ ನಿಸ್ವಾರ್ಥದಿಂದ ಬೆಳೆಯಬೇಕು. ಸೌರ ಮಂಡಲದಲ್ಲಿ ಮೊದಲ ಗ್ರಹ,ಅದು ಹಸಿರು ಬಣ್ಣವನ್ನು ಹೊಂದಿರುವ ಬುಧ ಗ್ರಹ.ಹಸಿರು ಈ ಗ್ರಹದ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬುಧನು ಮಂಗಳಕರ ಸ್ಥಾನದಲ್ಲಿದ್ದಾಗ ನಾವು ಯಶಸ್ಸನ್ನು ಪಡೆಯುತ್ತೇವೆ. ಬುಧ ಗ್ರಹವು ಮಂಗಳಕರ ಪ್ರಭಾವವನ್ನು ಬೀರುತ್ತದೆ. ಇಲ್ಲವಾದರೆ ಅಮಂಗಳ ಗ್ಯಾರಂಟಿ.ಜ್ಯೋತಿಷ್ಯರ ಅಂಬೋಣ…

ಹಸಿರು ಬಣ್ಣ ನೋಡುವುದರಿಂದ ಇಷ್ಟೆಲ್ಲಾ ಲಾಭ ಇದೆಯೇ?ಎಂಬ ಪ್ರಶ್ನೆ ಮೂಡದಿರದು.ಇಂದಿನ ಮಕ್ಕಳಿಗೆ ಪ್ರಕೃತಿ ಪ್ರೇಮ ಬೆಳೆಸುವ ಕುಟುಂಬಗಳು ಬೆರಳೆನಿಕೆಯಷ್ಟು.ಕಾಂಕ್ರೀಟ್ ಕಾಡಲ್ಲಿ,ನೈಜ ಪರಿಸರ ಸೃಷ್ಟಿಸಲು ಸಾಧ್ಯವಾ? ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡುತ್ತೀರಿ? ಎಂದು ಒಮ್ಮೆ ನಮ್ಮೊಳಗೆ ಇಣುಕಿದರೆ,ಒಬ್ಬರಿಗೆ ಒಂದೊಂದು ಹವ್ಯಾಸ ಇರಬಹುದು. ನಿಮ್ಮ ತಂದೆ ತಾಯಿಯ ಮುಖ? ದೇವರ ಫೋಟೊ ಅಥವಾ ನಿಮ್ಮ ಮನೆಯ ಗೋಡೆ ಗಡಿಯಾರ, ಹಳೆ ನೆನಪುಗಳು,ಅದೆ ಬೆಡ್, ಅದೆ ದಿಂಬು,ಅದೆ ಗ್ಲಾಸು,ಅದೆ ಬೀರು, ಹೀಗೆ ಒಬ್ಬೊಬ್ಬರು ಒಂದೊಂದನ್ನು ಪ್ರತಿದಿನ ನೋಡುತ್ತಾರೆ. ಬೆಳಗ್ಗೆ ಎದ್ದು ಕಾಫಿ ಕುಡಿಯುವ ಸಮಯ ಹೊರಗೆ ಬಂದು ಅಥವಾ ವಾಕ್ ಹೋಗುವ ರೂಢಿ ಇದ್ದವರಿಗೆ ಮಾತ್ರ ಹಸಿರ ಬೆಸುಗೆಯ ಪರಿಣಾಮ ಅರ್ಥವಾದಿತು.ಕಂಗಳಿಗೆ ಎಲ್ಲೆಡೆ ಹಸಿರು ಬಣ್ಣ ಕಾಣುತ್ತವೆ. ಇದರಿಂದ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ. ಹಸಿರು ಎಲ್ಲ ಜೀವಿಗಳಿಗೂ ಅತ್ಯವಶ್ಯವಾದ ಅಮೂಲ್ಯ ಕೊಡುಗೆ.

ಹಸಿರೆಂದರೆ ಎನರ್ಜಿ: ಹಸಿರು ಬಣ್ಣದಲ್ಲಿ ಎನರ್ಜಿ ಇದೆ. ಇದು ಜೀವದ ದ್ಯೋತಕ. ಬೆಳವಣಿಗೆ, ಸುರಕ್ಷತೆ, ಹಣ ಎಲ್ಲವನ್ನೂ ಹಸಿರು ಇಂಡಿಕೇಟ್ ಮಾಡುತ್ತದೆ.ಕಣ್ಣಿಗೆ ಒಳ್ಳೆಯದು.ಹಸಿರು ಬಣ್ಣವನ್ನು ನೋಡುವುದರಿಂದ ಕಣ್ಣಿಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಒಂದೆರಡು ಗಿಡ ಇಟ್ಟುಕೊಳ್ಳುವುದರಿಂದ ಕಣ್ಣಿಗೂ ಒಳ್ಳೆಯದು ಹಾಗೂ ಮನೆಯಲ್ಲಿ ಆಮ್ಲಜನಕ ಇರುತ್ತದೆ.

ಹೀಲಿಂಗ್ ಪವರ್ ಹಸಿರಿಗಿದೆ.ಅನಾರೋಗ್ಯ ಇದ್ದಾಗ, ಮಾನಸಿಕವಾಗಿ ಹಿಂಸೆ ಅನುಭವಿಸುವಾಗ ಸಾಮಾನ್ಯವಾಗಿ ಹಸಿರು ಬಣ್ಣದ ಗೋಡೆಯನ್ನು ಕಂಗಳಿಗೆ ಕಾಣುವಂತೆ ಇಡಲಾಗುತ್ತೆ. ಅಂಥವರ ಮನಸ್ಸು ಪ್ರಪುಲ್ಲಗೊಳಿಸಲು ಕಿಟಕಿಯ ಹತ್ತಿರ ಮಹಡಿ ಮೇಲೆ ಗಿಡಗಳನ್ನು ಬೆಳೆಸುವುದರ ಮೂಲಕ ಅವುಗಳನ್ನು ನೋಡುತ್ತ ಬೇಗ ಹುಷಾರಾಗಲು ಪ್ರೇರೆಪಿಸುತ್ತಾರೆ.

ಮೂರುಹೊತ್ತು ನಮಗೆ ಆಶ್ರಯ ತಾಣವೆಂದು, ಸಂಗಾತಿ,ಸ್ನೇಹಿತರನ್ನು ಬಿಟ್ಟು ಇರಬಹುದು ಆದರೆ ಇದನ್ನು ಬಿಟ್ಟು ಅರೆಕ್ಷಣವು ಇರಲಾಗದು.ಅಷ್ಟೊಂದು ಆತ್ಮೀಯ ಸಂಬಂಧ ಹೊಂದಿರುವ ಇದು ಜೀವವಿಲ್ಲದಿದ್ದರೂ ದುಡ್ಡನುಣಿಸಿ ಅದರೊಟ್ಟಿಗೆ ಬದುಕ ಕಳೆವ ನಮಗೆ ಒಂದಿಷ್ಟು ಖಿನ್ನತೆಗೆ ಒಳಗಾಗುವುದರ ಬದಲು ಮೊಬೈಲ್ ಸ್ಕ್ರೀನ್ ಹಸಿರಾಗಿದ್ದರೆ ಅಥವಾ ಮೊಬೈಲ್ ಸ್ಕ್ರೀನ್ ಸೇವರ್, ವಾಲ್‌ಪೇಪರ್ ಹಸಿರು ಬಣ್ಣದ್ದಾಗಿದ್ದಷ್ಟು. ಮೂಡ್ ಯಾವಾಗಲೂ ಫ್ರೆಶ್ ಆಗಿರುತ್ತದೆಂದು ಅನುಭವಿಗಳ ಅಭಿಮತ.ಹಸಿರು ನೈಸರ್ಗಿಕವಾದ ಬಣ್ಣವಾಗಿದ್ದು ಆರೋಗ್ಯಕ್ಕೂ ಹಸಿರು ಒಳ್ಳೆಯದು.

ಹಸಿರುಡುಗೆಯಲಿ ಮಿಂದೆದ್ದ ಮನಸಿದು,ನಿಚ್ಚಳತೆಯ ಬಿಂಕದಲಿ ಜೀವನವ ಕಟ್ಟಿದಾಕೆಯ ಮನವ ಕದ್ದ ಕರುಳೊಂದು ಮಿಡಿದಿದ್ದು ಒಂದೆ ಒಂದು ಹೊನ್ನಾರತಿಯ ಮೆಚ್ಚಿಸಲು ಕಣ್ಣಾರತಿಯು ಬೇಕು…. ಅದೆ ಜಗದ ಕಣ್ಣು ಹಸಿರೆಲೆಯ ಹಣ್ಣು..ಹಸಿರು ಜೀವಕಳೆಯ ಪ್ರತಿಬಿಂಬ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

13 thoughts on “

  1. ಹಸಿರಿನ ಮಹತ್ವ, ಹಸಿರು ವನಸಿರಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಪರಿ ಚೆನ್ನಾಗಿದೆ .

  2. ಹಸಿರೇ ಉಸಿರಾಗೀ ಅಕ್ಷರವೆಲ್ಲಾ ಮುತ್ತಿನ ಹಾರವಾಗೀ ಮನಕ್ಕೆ ಮುದ ನೀಡುವ ಲೇಖನ ರೀ ಮೇಡಂ

  3. ಸು.ಮ. ಕವಿ.. ಸುರೇಶ ಮಲ್ಲಾಡದ. ರಟ್ಟೀಹಳ್ಳಿ. ಹಾವೇರಿ says:

    ಹಸಿರಿನ ಸೌಂದರ್ಯವನ್ನ ತುಂಬಾ ಸೊಗಸಾಗಿ ವರ್ಣಿಸಿದ್ದೀರಿ ಮೇಡಂ..
    ಶುಭವಾಗಲಿ..

    1. ನಮಗೆ ಹಸಿರನ್ನು ಹೇಗೆ ಉಪಯೋಗಿಸಬೇಕೆಂಬುದು ತಿಳಿಸಿರುವಿರಿ. ಹಸಿರನ್ನು ಜನರು ಬೆಳೆಸಿ ಸರಿಯಾಗಿ ಉಪಯೋಗಿಸಿಕೊಂಡರೆ ಎಲ್ಲರಿಗೂ ಉತ್ತಮ

  4. ಹಸುರು ಜೀವನದುದ್ದಕ್ಕೂ ಹೀಗೆ ಇರಲಿ….ನೈಸ್

  5. ಹಸಿರು ಲೇಖನ ಹಸಿ ಹಸಿರಾಗಿದೆ. ಅಭಿನಂದನೆಗಳು.
    ಭಾಗೀರಥಿ ಹೆಗಡೆ

  6. “ಹಸಿರೇ ನಮ್ಮ ಉಸಿರು”
    ತುಂಬಾ ಸುಂದರವಾಗಿ ಹಸಿರಿನ ಮಹತ್ವವನ್ನು ತಿಳಿಸಿದಿರಿ. ನಿಮ್ಮ ಕವನ ಸಂಕಲನ ಎಂದೆಂದಿಗೂ ಹಸಿರಾಗಿರಲಿ.

  7. “ಹಸಿರೇ ನಮ್ಮ ಉಸಿರು”
    ತುಂಬಾ ಸುಂದರವಾಗಿ ಹಸಿರಿನ ಮಹತ್ವವನ್ನು ತಿಳಿಸಿದಿರಿ. ನಿಮ್ಮ ಕವನ ಸಂಕಲನ ಎಂದೆಂದಿಗೂ ಹಸಿರಾಗಿರಲಿ.

  8. ಹಸಿರೇ ಉಸಿರು ಎಂಬ ಬರವಣಿಗೆಯ ಸಾರ ತುಂಬಾ ಸುಂದರವಾಗಿ ಮೂಡಿ ಬಂದಿದೆ.ಸೂಪರ್

Leave a Reply

Back To Top