ಕಾವ್ಯ ಸಂಗಾತಿ
ಗಜಲ್
ಬೆಂಶ್ರೀ ರವೀಂದ್ರ
ಕವಿ ಸುಂದರ ಮಲ್ಲಿಗೆಯ ನಿನಗೆ ಹೋಲಿಸಿ ಎಡವಿದ್ದಾನೆ
ಹೂವು ಬಾಡಿ ಕಮರುವುದರಿತೂ ಯಾಮಾರಿಸಿ ಎಡವಿದ್ದಾನೆ
ವಾಸನೆ ಹೀರಿ ವಿಟ ಮುಂಗೈಗೆ ಸುತ್ತಿದ ಹೂಗೊಂಡೆಯ ಬಿಸುಡುತ್ತಾನೆ
ಅಮಲು ಮತ್ತು ಏರಿ ತೂರಿಹೋದ
ವಾಸ್ತವ ಮರಸಿ ಎಡವಿದ್ದಾನೆ
ದುಂಬಿಗಳು ಕಾಲೂರಿ ಮುಳ್ಳುದಾಡೆಗಳ ಚುಚ್ಚಿ ಮಧು ಹೀರುತ್ತವೆ
ಜೇನಸಿಹಿಯ ತಾಬಾಣದಲಿ ತುಂಬದೆ ಜಾರಿಸಿ ಎಡವಿದ್ದಾನೆ
ಅಪ್ಪಿ ಅರಳಿಸಿದ ಮುಗುಳ ಪಕಳೆಗಳ ಭಾನುವೆ ಸುಟ್ಟಿದ್ದಾನೆ
ರಕ್ಷಿಸದ ಕವಿ ಪ್ರಣಯ ಕಥೆಯ ತೆರೆ ಹೊದಿಸಿ ಎಡವಿದ್ದಾನೆ
ಗಡಿಮೀರಿ ಏರಿದ ಬೆಲೆಗೆ ಗೆಳತಿಯರು ಸೆಟೆದಿದ್ದಾರೆ
ಭಾವಾರ್ಥಕೆ ಬೆಲೆನೀಡದೆ ಕವಿ ಚಲಾರ್ಥಕೆ ಕೈಏರಿಸಿ ಎಡವಿದ್ದಾನೆ
ಮಾತುಗಳಿಗೆ ಬಣ್ಣ ಬೆರಸಿ ಮಲ್ಲಿಗೆಯಲ್ಲಿ ನಿನ್ನ ತೂಗಿದ್ದಾನೆ
ಒಲಿಸಲು ತನಗೆ ತಾ ತಲೆದೊಗಿ ಗಗ್ಗರಿಸಿ ಎಡವಿದ್ದಾನೆ
ಹೋಲಿಕೆ ಇಲ್ಲದ ನೀನೇ ಎಲ್ಲಕಿಂತ ಮಿಗಿಲೆಂದವ ಮರೆತಿದ್ದಾನೆ
ತಡವಿಬಿಡು ರವಿತೇಜ ಹೇಳುವ ತಿಳಿಸಿ ಎಡವಿದ್ದಾನೆ.