ಕಾವ್ಯಸಂಗಾತಿ
ಗಜಲ್
ಬಾಗೇಪಲ್ಲಿ
ಕಂಡ ಹೊಸತರಲಿ ಮುಖದ ಮೊಡವೆ ಇಷ್ಟವಾಗಿತ್ತು ಮಡದಿ
ಪ್ರೇಮ ಸಲ್ಲಾಪಕೆ ನಿನ್ನ ಪುಟ್ಟ ಮೂಗುತಿ ಕಷ್ಟವಾಗಿತ್ತು ಮಡದಿ
ಕಾಲೇಜಿಗೆ ತೊಟ್ಟ ಧರಿಸುಗಳು ಎಲ್ಲಾ ಕಪಾಟಲ್ಲಿ ಮಲಗಿತ್ತು ಮಡದಿ
ಅಭ್ಯಾಸ ಕೊರತೆಗೆ ಉಟ್ಟ ಸೀರೆ ಹೊಕ್ಕೊಳ ಜಾರಿದಂಗಿತ್ತು ಮಡದಿ
ನಿಶ್ಚಿತಾರ್ಥಕೂ ಮದುವೆಗೂ ಬಹಳ ಅಂತರವಿತ್ತಲ್ಲಾ ಮಡದಿ
ಕತ್ತಲ ಥೇಟರದಾಗ ಸನಿಹ ಕೂತದು ಮುದವಾಗಿತ್ತು ಮಡದಿ
ದಸರಾದ ಜನಜಂಗುಳಿ ಹೆಚ್ಚಾದರೆ ಚೆನ್ನವೆನಿಸಿತ್ತು ಮಡದಿ
ಇಕ್ಕಟ್ಟಿನಲಿ ಇಬ್ಬರೂ ಅಪ್ಪಿನಿಂತದು ಮಜವಾಗಿತ್ತು ಮಡದಿ
ನವನವೀನ ಜಂಟಿ ಜೀವನ ಬಲು ಚಂದವೆನಿಸಿತ್ತು ಮಡದಿ
ಒಬ್ಬರನೊಬ್ಬರು ಅರ್ಥೈಸಲು ಬೇಕಾದ ಅರಿವು ಗಾಡವಾಗಿತ್ತು ಮಡದಿ
ಹೆಚ್ಚು ಸಂಬಳದ ಉದ್ಯೋಗ ನನ್ನ ಅರಸಿ ಬಂದಿತ್ತು ಮಡದಿ
ಒಲವಿನ ಜೊತೆ ಬಯಸಿದಿವಿ ಹಣ ಬೇಡವಾಗಿತ್ತು ಮಡದಿ
ಚೊಚ್ಚಲ ಹೆರಿಗೆಗೆ ನೀ ತೌರಿಗೆ ಹೋದದ್ದು ಸರಿ ಮಡದಿ
ಒಬ್ಬಂಟಿ ಎನಿಸಿ ನನಗೆ ಬದುಕು ಬಹಳ ಜಡವಾಗಿತ್ತು ಮಡದಿ.
ನಲವತ್ತು ವರುಷ ಜೀವವನವ ಹಿಂದಿರುಗಿ ನೋಡೆ ಮಡದಿ
ಅಂದಿನ ರಾತ್ರಿಯೇ ಕಂಡು ‘ ಕೃಷ್ಣಾ’ಮರೆತ ಸ್ವಪ್ನವಾಗಿತ್ತು ಮಡದಿ.