ಮನೆಯಂಗಳಕ್ಕೆ ರಂಗನ್ನೆರೆಯೋಣ

ಕಾವ್ಯ ಸಂಗಾತಿ

ಮನೆಯಂಗಳಕ್ಕೆ ರಂಗನ್ನೆರೆಯೋಣ

ಹೆಚ್. ಮಂಜುಳಾ

ಅಂದು…..
ಹಸಿರು ಮರಗಳ ಸಾಲಿನಲ್ಲಿ
ತೋಪು ಚೆಲ್ಲಿದ ನೆರಳಿನಲ್ಲಿ
ದಾರಿಯುದ್ದಕ್ಕೂ ನೀರಿನರವಟ್ಟಿಗೆಗಳು
ಪೊದೆ ಹುಲ್ಲಿನ ಮಧ್ಯದ ಸೀಳುದಾರಿ
ಊರಿಂದೂರಿಗೆ ಕಾಲ್ನಡಿಗೆ
ಧಗೆಯಿಲ್ಲ ಆಯಾಸವಿಲ್ಲ
ಯಾಂತ್ರಿಕತೆಗೆ ವಿಮುಖರೆಲ್ಲರೂ ಆಗ,
ಎಲ್ಲರದ್ದೂ ಒಂದೇ ರಾಗ
ಮನುಕುಲದ ಏಳ್ಗೆಗೆ ನಿಸರ್ಗವೇ ಸಿಂಧು..!

ಇಂದಾದರೋ…..
ಚಿಗುರು ಎಲೆ ಕಳಚಿದ
ಬೋಳು ಮರಗಳ ಗೋಳು
ಮಳೆಯಿಲ್ಲದೇ ಬಿರಿದ ಭೂಮಿ
ಉರಿದೆದ್ದ ಧಗೆ..,
ಹಸಿರು ಕಾಣದೇ ಬಿಸಿಯನುಸುರುವ ಪ್ರಕೃತಿ
ಹುಡಿ ಹಾಯ್ದ ದಾರಿ;
ಮರಳುಗಾಡಿನ ಒಂಟೆಯ ನಡಿಗೆ!

ಮರವ ಕಡಿದು ಮನೆಯ ಕಟ್ಟಿದೆವು
ಹಸಿರ ಕಿತ್ತು ಬರಡ ಬಿತ್ತಿದೆವು
ಭೂಮಿ ಬಗಿದು ನೀರ ಸೇದಿದೆವು
ನೆರಳ ಅಗೆದು ಧಗೆಯ ಹುಟ್ಟಿಸಿದೆವು
ಆ…
ಫಲವನ್ನು ಇಂದು ಉಣ್ಣುತಿಹೆವು
ಬೊಗಸೆ ನೀರಿಗಾಗಿ ಹಣ ಚೆಲ್ಲುತಿಹೆವು
ಹಿಡಿ ನೆರಳಿಗಾಗಿ ನುಗ್ಗಾಡುತಿಹೆವು..!

ಬಂಧುಗಳೇ….
ನಾವೆಲ್ಲಾ ಬದುಕಬೇಕಾದರೆ
ನಮ್ಮನ್ನೇ ನಾವು ತೊಡಗಿಸಿಕೊಳ್ಳೋಣ
ಬಿರಿದ ಭೂಮಿಯಲಿ ನೀರ ಹರಿಸೋಣ
ಹಿಡಿ ನೆಲದಲಿ ಮುಡಿ ಬೆಳೆಯೋಣ
ಮನೆಯಂಗಳಕ್ಕೆ ರಂಗನ್ನೆರೆಯೋಣ
ತಂಪಾದ ಗಾಳಿ ಕಂಪು ಪರಿಮಳಕೆ
ಮೈಮನ ತೆರೆಯೋಣ
ಘೋಷಣೆಯ ಕಾರ್ಯಕ್ಕಿಳಿಸೋಣ
“ಕಾಡು ಬೆಳಸಿ ನಾಡು ಉಳಿಸೋಣ”
ಮಳೆಯ ತರಿಸಿ ಕಳೆಯ ತುಂಬೋಣ…!


Leave a Reply

Back To Top