ಕಾವ್ಯ ಸಂಗಾತಿ
ಪರಿಸರದ ಕಿವಿಮಾತು
ಜಯಲಕ್ಷ್ಮಿ ಎಂ ಬಿ
ಬಿಸಿಲಿರಲಿ ಮಳೆಯಿರಲಿ ಸಲಹುವೆನು ಮರೆಯದಿರು
ಹಸುರಸಿರಿ ಪರಿಸರದಿ ಪಸರಿಸುವೆನು
ವಸುಧೆಯನು ರಕ್ಷಿಸುವ ಹೊಣೆಯಹೊರು
ಉಸಿರಿನಲಿ ಅಡಗಿರುವೆ ಅರಿತು ಬಾಳು
ನೋವಿನಲು ಜೊತೆಗಿರುವೆ ಆಸರೆಯ ನೀಡುತಲಿ
ಧಾವಿಸುತ ಗಿಡಮರವ ಸಲಹುಮನುಜ
ನೋವಿರದ ಬದುಕನ್ನು ನೀಡುವೆನು ನಿನಗೆಂದು
ಜೀವನವ ಪ್ರೀತಿಸುತ ಸಾಗುನೀನು
ಕೊನೆಯಿರದ ಕಣ್ಣೀರ ಸುರಿಸುತಲಿ ನರಳದಿರು
ಮನೆಮಾರು ಮುಳುಗುತಲಿ ಹೋಗುತಿಹುದು
ಮನದೊಳಗೆ ಕೊರಗಿದರೆ ಫಲವೇನು ಸಿಗದೆಂದು
ಕನವರಿಸಿ ಸುಖವಿಲ್ಲ ತಿಳಿದುಬದುಕು
ಮಣ್ಣಿನಲಿ ಹುದುಗಿರುವ ಬೀಜವದು ಮೊಳೆತಿರಲು
ಕಣ್ಣಿನಲಿ ನೋಡುತಲಿ ಒಲವತೋರು
ಬಣ್ಣವನು ಧರಿಸಿರುವ ಹೂವೊಂದು ನಗುತಿರಲು
ಬಣ್ಣನೆಯ ಮಾತುಗಳ ಸುರಿಸಲೇಕೆ