ಕಾವ್ಯ ಸಂಗಾತಿ
ಇಲ್ಲಿ ಎಲ್ಲವೂ ಮಾಮೂಲು
ನೀನು ಹೋದ ನಂತರವೂ
ಮಾಮೂಲು ಇಲ್ಲಿ ಎಲ್ಲವೂ
ಬಹಳ ದಿನಗಳ ನಂತರ
ಮರೆತಂತಿದ್ದ ಆಫೀಸ್
ಮೆಟ್ಟಿಲೇರುವ ಆತುರದಲ್ಲಿದ್ದಾನೆ
ನಿನ್ನ ಪ್ರಿಯಕರ
ಗೆಳೆಯರನ್ನು ಕಾಣುವ
ತವಕ ಒಂದೆಡೆ
ಮತ್ತದೇ ಕೆಲಸದ
ಗೋಜುಗೊಂದಲಗಳು ಮತ್ತೊಂದೆಡೆ
ನಿನ್ನ ನೆನಪುಗಳಿಲ್ಲಿ
ಸಾಯುತ್ತವೆ ಮತ್ತೆ ಮತ್ತೆ
ಬಿಡುವಿರದ ಕೆಲಸದ
ಮಧ್ಯ ಮಧ್ಯೆ
ವಾಪಸಾಗಲು
ಹಿಂಜರಿಯುತ್ತಾನೆ ಮನೆಗೆ
ನಿನ್ನ ನೆನಪುಗಳು
ಮತ್ತೆ ಹುಟ್ಟುವ ಭಯಕೆ
ಮುಗಿದ ಕೆಲಸಗಳನ್ನೂ
ಮತ್ತಷ್ಟು ಹಿಡಿದು ಜಗ್ಗಿ
ಮುಂದುವರಿಸುತ್ತಾನೆ
ಚಂದ್ರ ನೆನಪಿಸುವವರೆಗೂ
ಎಷ್ಟು ಕಾಲ ಉಳಿಯಲು ಸಾಧ್ಯ
ನಿನ್ನ ನೆನಪಿರದ ಆಫೀಸಿನಲ್ಲಿ
ಕಿಟಾರನೆ ಕಿರುಚಿ ಅಮ್ಮನೆಲ್ಲಿ ಎಂದು
ಕೇಳುವ ಮಗುವ ನೆನಪಿನಲ್ಲಿ
ಒಂದಷ್ಟು ಕಾಲ
ನಿನ್ನ ನೆನಪುಗಳು ಸಾಯುತ್ತವೆ,
ಮತ್ತೆ ಮತ್ತೆ ಹುಟ್ಟುತ್ತವೆ ಕೂಡಾ
ಕಾಲ ಸರಿದಂತೆ ಹುಟ್ಟು-ಸಾವು
ಇಲ್ಲಿ ಮಾಮೂಲಾಗುತ್ತವೆ.
ಒಲವು