ಕಾವ್ಯ ಸಂಗಾತಿ
ವಿಕಲ್ಪ
ವಿಜಯಪ್ರಕಾಶ್. ಕೆ.
ಕರುಣೆ ತೋರಿದೆ ನೀನು ಕರವೆತ್ತಿ ಬೇಡಿದಗೆ
ಸೆರಗನೆಳೆಯುತಿರಲು ಅಕ್ಷಯ ವಸನವನಿತ್ತು.
ಪುರದೊಳಗಿರಲಿಲ್ಲವೇ ನೀನು ಪುರಂದರ ವಿಠಲ
ಮರುಗಲಿಲ್ಲವೇಕೆ ಅಂದು ಮಾಧವಿಯ ವ್ಯಥೆಗೆ.
ಗಾಲವನಿಂದ ಗರಬಡಿದಿತ್ತು ಅವಳ ಬಾಳಿಗೆ
ವಿಶ್ವಾಮಿತ್ರನೇ ಶತ್ರುವಾದನು ಅವಳ ಪಾಲಿಗೆ.
ಕಾಯ್ವವರೇ ಕುಕ್ಕಿತಿಂದರು ಸರದಿಯಲ್ಲಿ ಬಂದು
ಬಿಕ್ಕಿ ಬಿಕ್ಕಿ ಅತ್ತಿದ್ದು ಕಾಣಿಸಲಿಲ್ಲವೇ ನಿನಗಂದು.
ತಿಂದವರು ಉಳಿದರು ಚರಿತ್ರೆಯ ಪುಟಗಳಲ್ಲಿ
ನೊಂದವರ ಕೂಗು ಅರಣ್ಯ ರೋದನವಾಯ್ತು.
ಮತ್ತೆ ಮತ್ತೆ ಮರುಕಳಿಸುತ್ತಿದೆ ಶಕ್ತಿವಂತರ ಗೀಳು
ಕೇಳಿಸುತ್ತಿದೆ ಬದುಕು ಕತ್ತಲಾದವರ ಗೋಳು.
ಮಸ್ತಕದಿ ಲದ್ದಿ ತುಂಬಿ ಬುದ್ಧಿಜೀವಿಗಳೆಂದು ಮೆರೆಯೆ
ಸಮಸ್ತರಿಗೆ ನ್ಯಾಯ ಒದಗಿಸುವರು ಯಾರು ಹರಿಯೇ.