ಕಾವ್ಯ ಸಂಗಾತಿ
ಬರುವೆ ನಾ ನಿನ್ನಲ್ಲಿಗೆ
ಡಾ. ನಾಗರತ್ನ ಅಶೋಕ ಭಾವಿಕಟ್ಟೆ
ನಿನ್ನೊಲವಿನ ರೀತಿ ಪ್ರತೀತಿ ಅರಿತು
ಪ್ರೀತಿ ಚಿಗುರನು ಕಮರಿಸದೆ
ನೀರೆರೆದು ಮರವಾಗಿ ಬೆಳೆಸಿ
ನನ್ನೊಳಗಿನ ಒಲವ ಅರುಹಲು
ಮನದ ಮೇನೆಯನೇರಿ ಒಮ್ಮೆಯಾದರೂ
ಬಂದೇ ಬರುವೆ ನಾ ನಿನ್ನಲ್ಲಿಗೆ
ತೂಗಿ ನೋಡಿ ಸೃಷ್ಟಿಸಿರುವ
ದೇವ ಈ ಜಗವನು
ಮನುಜನೆಂಬ ದಾಳವನು
ಯಾರು ಎಲ್ಲಿ ಎಂಬ ತುಲನೆಯನು
ಅದೆಲ್ಲವ ಮೀರಿ ಕಾಣಲು
ಬಂದೇ ಬರುವೆ ನಾ ನಿನ್ನಲ್ಲಿಗೆ
ಸುತ್ತ ತಿರುಗಿ ನೋಡಲು
ಭರವಸೆಯ ಬೆಳಕೆ ಕಾಣದಿರಲು
ನಂದಿರುವ ಜ್ಯೋತಿಯಲಿ
ಕಾಂತಿ ಬೆಳಗುವದಕ್ಕಾಗಿ
ಆಕಾಶದೀಪವ ಹಿಡಿದು
ಬಂದೇ ಬರುವೆ ನಾ ನಿನ್ನಲ್ಲಿಗೆ
ಬಾನ ಸುಮವು ಅರಳಿ
ಕಂಪ ಬೀರುವದೆಂಬ
ಭ್ರಮೆಯ ಕಳೆಯುತ ನಿನ್ನ
ಮಂದಾರ ಪುಷ್ಪರಾಶಿಯ ನಡುವೆ
ನಿಲಿಸಿ ಮೆರೆಸಲು ಒಮ್ಮೆ
ಬಂದೇ ಬರುವೆ ನಾ ನಿನ್ನಲ್ಲಿಗೆ
ಪ್ರಕೃತಿ ಚಲುವಿಕೆ ನಡುವೆ
ಇಹ ಪರದ ಅರಿವಿರದೆ
ನಿಂತು ಮೈಮರೆತು
ಕುಣಿ ಕುಣಿದಾಡುತಿಹ ನಿನ್ನ
ನಿಜ ಮನದ ಚೆಲುವಿನ ಅರಿವು ಮೂಡಿಸಲು
ಬಂದೇ ಬರುವೆ ನಾ ನಿನ್ನಲ್ಲಿಗೆ.
ಚನ್ನಾಗಿದೆ.