ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ನಿನ್ನಂತೆ ನಾನಾಗ ಬಯಸಲಿಲ್ಲ ನಾನು ನನ್ನಂತೆಯೇ
ನನ್ನತನವ ನಾ ತೊರೆಯಲಿಲ್ಲ ನಾನು ನನ್ನಂತೆಯೇ
ಹಾಡದೆ ಕೋಕಿಲ ಸುಮ್ಮನಿರೆ ವಸಂತಕ್ಕೆ ವಿಶಾದವೆ
ಅಂತರಂಗ ದನಿ ಸಮ್ಮನಿರಲಿಲ್ಲ ನಾನು ನನ್ನಂತೆಯೇ
ಬಾನಾಡಿ ಹಾರದೆ ಭುವಿ ಸೇರಿದರೆ ರೆಕ್ಕೆಪುಕ್ಕ ವ್ಯರ್ಥವೆ
ಕನಸ ಉಯ್ಯಾಲೆ ಜೀಕದಿರಲಿಲ್ಲ ನಾನು ನನ್ನಂತೆಯೇ
ಲೋಕ ಮೌನವಾದರೆ ಮಸಣವಾಗದೇ ಇರುವುದೇ
ಆಂತರ್ಯದ ಕಲರವ ನಿಲ್ಲಲಿಲ್ಲ ನಾನು ನನ್ನಂತೆಯೇ
ಹೆಜ್ಜೆ ಹೆಜ್ಜೆ ಜೊತೆಗೂಡಿದರೂ ಪ್ರತಿ ಪಾದ ಬೇರೆಯೇ
ಜಲದಿ ಉಪ್ಪುರುಚಿ ಬದಲಿಸಲಿಲ್ಲ ನಾನು ನನ್ನಂತೆಯೇ
ಅವರವರ ಮರೆತರೆ ಸುಖದ ಶರ ಎದೆಯ ನಾಟುವುದೆ
ಬಹುಪರಾಕು ನನ್ನ ತಡೆಯಲಿಲ್ಲ ನಾನು ನನ್ನಂತೆಯೇ
ಬೇಕಾದ ಚಿನ್ನದ ಸೂಜಿ ತನುವಾಭರಣ ಆಗಬಲ್ಲದೆ
ಅನು ಹೊನ್ನ ಪಂಜರದಿ ಬಂಧಿಯಲ್ಲ ನಾನು ನನ್ನಂತೆಯೇ
ಫೈನ್ ಮೇಡಂ ನಾನೂ ನನ್ನಂತೆಯೇ ನಿರಂಕುಶಮತಿ
Thank you so much..!