ಬದಲಾಗಲು ಬಯಸಿದ್ದೇನೆ

ಕಾವ್ಯ ಸಂಗಾತಿ

ಬದಲಾಗಲು ಬಯಸಿದ್ದೇನೆ

ಒಲವು

Close-up of alarm clock on white

ಬದಲಾಗಲು ಬಯಸಿದ್ದೇನೆ
ಮುಂದೆ ಮೊದಲಿನಂತೆ ಇರುವುದಿಲ್ಲ

ತೋಟದಲ್ಲಿ ಅರಳಿನಿಂತ
ಹೂವುಗಳ ಕಂಡೂ ಕೀಳುವುದಿಲ್ಲ
ಅವುಗಳ ಸೌಂದರ್ಯ ಕಂಡು
ಮೈ ಮರೆತು ತನ್ಮಯಳಾಗುತ್ತೇನೆ

ಹೆಚ್ಚಿದ ಬ್ಯಾಂಕ್ ಬ್ಯಾಲೆನ್ಸ್
ನೋಡಿಯೂ ಹಣ ಬಿಡಿಸುವುದಿಲ್ಲ
ಅನ್ನ ನೀರಿಲ್ಲದೆ ಪರದಾಡುತ್ತಿರುವವರಿಗೊಂದು
ಪಾಲು ಕೂಡಿಡಲು ಯೋಜನೆ ರೂಪಿಸುತ್ತೇನೆ

ಬಟ್ಟೆ, ಚಪ್ಪಲಿ ಅಂಗಡಿ ಮುಂದೆ
ನಡೆವಾಗಲೂ ಕತ್ತೆತ್ತಿ ನೋಡುವುದಿಲ್ಲ
ಸ್ನೇಹಿತರೊಡನೆ ಕುಳಿತು ಹರಟೆ ಹೊಡೆದು
ಸಮಯ ವ್ಯರ್ಥ ಮಾಡುವುದಿಲ್ಲ

ವೃಥಾ ವ್ಯಯಿಸುವ ಹಣ, ಸಮಯವನ್ನು
ಕಣ್ರೆಪ್ಪೆಯಂತೆ ಕಾಪಿಡಲು ಮುಂದಾಗುತ್ತೇನೆ

ಟೇಬಲ್ ಮೇಲೆ ಅಲಂಕರಿಸಿ ಜೋಡಿಸಿಟ್ಟ
ಸ್ನ್ಯಾಕ್ಸ್, ಹಣ್ಣು-ಹಂಪಲುಗಳ
ಕಂಡೂ ಕಾಣದಂತೆ ಇರುತ್ತೇನೆ

ಹಸಿವಿಲ್ಲದ್ದಾಗಲು ತಿಂದು
ಹೊಟ್ಟೆ ಹಾಳುಮಾಡುವ
ನಾಲಿಗೆ ಚಪಲಕ್ಕೆ ಬುದ್ಧಿ ಹೇಳುತ್ತೇನೆ

ನಿಲ್ಲದ ಆಸೆಗಳ ನಿರಂತರತೆಗೆ
ಇತಿಶ್ರೀ ಹಾಡಲಾಗುವುದಿಲ್ಲ ಬದಲಾಗಿ
ಮುಗಿಯದ ದಾರಿಗೊಂದು ತಿರುವು ನೀಡಿ
ಬದಲಾಗಲು ಬಯಸಿದ್ದೇನೆ.


One thought on “ಬದಲಾಗಲು ಬಯಸಿದ್ದೇನೆ

Leave a Reply

Back To Top