ಕಾವ್ಯಸಂಗಾತಿ
ಪರವಾನಿಗೆ ಬೇಕಿಲ್ಲ
ದೇವರಾಜ್ ಹುಣಸಿಕಟ್ಟಿ
ನಿನ್ನಂತೆಯೇ ಅದೆಷ್ಟು
ಬಾದಶಾಗಳು ಹುಟ್ಟಿಸತ್ತಿದ್ದಾರೆ
ಗಾಯಗಳು ಮಾಯಲು
ಪರವಾನಿಗೆ ಬೇಕಿಲ್ಲ
ಹರಿವ ನದಿ ಕಡಲು ಕೂಡಲು
ಶಿರ ಬಾಗಿಸಿ ಕೈ ಚಾಚಿ
ಜಗದೊಡೆಯನ ಜೊತೆ
ಪಿಸುಮಾತನಾಡಲು
ಪರವಾನಿಗೆ ಬೇಕಿಲ್ಲ……!!
ನಿನ್ನಂತೆಯೇ ಅದೆಷ್ಟು ರಕ್ಕಸರು
ಜನರ ರಕ್ತವನೆ ಬಸಿದವರು
ಮಣ್ಣಲ್ಲಿ ಮಣ್ಣಾಗಿದ್ದಾರೆ
ಹಕ್ಕಿ ರೆಕ್ಕೆಬಿಚ್ಚಿ ಮುಗಿಲೆತ್ತರಕೆ ಹಾರಲು
ಎದೆಯ ನೋವ ಬಿಕ್ಕಲು
ನನ್ನವರು ಉಂಡುಟ್ಟು
ಬೆವರ ಹರಿಸಿ ದುಡಿಯಲು
ಒಂದು ದಿನ ನಿನ್ನಂತಯೇ ಮಡಿಯಲು…!
ಪರವಾನಿಗೆ ಬೇಕಿಲ್ಲ….!!
ನಿನ್ನಂತೆಯೇ
ಅದೆಷ್ಟು ಬಣ್ಣಹಚ್ಚಿ
ನಟಿಸಿರಬೇಕು ಹಗಲು
ವೇಷದಾರಿಗಳು……
ನೆಲದಿಂದ ಬೀಜ
ಮೊಳೆಕೆಯೊಡೆದು ಚಿಗುರಾಗಲು
ತಟ್ಟೆ ತುಂಬಿ ಹಸುವ ನೀಗಲು…
ಪೇರೆದಾರರ ಪರವಾನಿಗೆ ಬೇಕಿಲ್ಲ..!!
ಸುರಿವ ಮಳೆಗೆ…..!
ಸುಳಿವ ಗಾಳಿಗೆ…..!
ಬಿರಿವ ಹೂವಿಗೆ….!
ಸೂಸುವ ಬೆಳಕಿಗೆ…!
ಯಾರಪ್ಪನ ಪರವಾನಿಗೆ ಬೇಕಿಲ್ಲ…!!
ಎದೆಯ ಕರುಣ ರಸಕೆ
ಪರವಾನಿಗೆಯ ಜರೂರತ್ತು ಇಲ್ಲಾ…!!