ಕಾವ್ಯ ಸಂಗಾತಿ
ಬರೆಸಿಕೊಂಡ ಸಾಲುಗಳು
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ನನ್ನ ಮೇಲೆ ಕರುಣೆ ತೋರಬೇಕಿಲ್ಲ
ಶವದ ಮುಂದೆ ಸೋಬಾನೆ ಹಾಡಬೇಡ
ನಾನೀಗ ಅಲೆಮಾರಿ
ಇಷ್ಟುದಿನ ನನ್ನವನಿಗಾಗಿ ಹುಡುಕುತ್ತಿದ್ದೆ..
ಈಗ ಅವನು ಅಲೆಮಾರಿ
ನಾ ಬದುಕ ಬೇಕೆಂಬ ಬಯಕೆ ನಿನಗಿದ್ದರೆ ..
ಈಗ ಉಣಿಸಿದ ವಿಷದ
ಅಮಲು ಏರಲು ಬೀಡು
ಸಮಾಧಿಯ ಗೋಡೆಗಳು ಬೆವರುತಿವೆ…
ನಿತ್ಯವೂ ನನ್ನ ನಿಟ್ಟುಸಿರು
ಹಾಯಿದೋಣಿಯ ಲಂಗುರಿಗೆ
ನಿಶಾನೆ ಕೇಳುತಿದೆ
ನನ್ನ ಸಮಾಧಿಯ ಮುಂದೆ
ರೋಧಿಸ ಬೇಡಾ
ಆತ್ಮವಿನ್ನು ಬದುಕಿದೆ
ಮನವ ಸಂತೈಸಿ ಸಾಕಾಗಿದೆ
ತನುವ ಹೂತ ಪರಿಗೆ
ರಾತ್ರಿಗಳು ರೋಧಿಸುತಿವೆ
ಅಲ್ಲಮಾ.. ನೀ ಬೆರೆತ ಗಾಳಿ
ಉಸಿರ ಕೊಲ್ಲುತಿದೆ
ವ್ಯೋಮದ ತುಂಬೆಲ್ಲಾ ಶವಗಳ
ಮೆರವಣಿಗೆ
ಅಕ್ಕಾ.. ನೀ ಹೊರಟೆ ಬಿಟ್ಟೆಯಲ್ಲಾ
ಬಟ್ಟೆ ಧರಿಸಿದ ತಂಗಿಯರ
ಬದುಕು ಮೂರಾಬಟ್ಟೆಯಾಗಿದೆ
ಅಣ್ಣಾ …ನಿನ್ನ ಮೂರ್ತಿಯ
ಕೈ ಕೆಡವಿದ್ದಾರೆ
ಅವರ ಹೃದಯದಲ್ಲಿ ನೀ ಇನ್ನೂ
ಬದುಕಿದ್ದಿಯಾ
ಗಾಂಧೀ ..ನಿನ್ನ ಗ್ರಾಮಗಳ ತುಂಬೆಲ್ಲಾ ಡ್ರಮ ಗಟ್ಟಲೆ
ಸಾರಾಯಿ ..
ಗ್ರಾಮ ರಾಮದ ಕನಸು
ದೂರವಿಲ್ಲ..