ಕಾವ್ಯ ಸಂಗಾತಿ
ಸತ್ತ ಪುಟ್ಟ ಪುಟಗಳ ನಡುವೆಯಿಂದ
ದೇವರಾಜ್ ಹುಣಸಿಕಟ್ಟಿ
ಹಾಳೆಗಳು ಗೆದ್ದಲಿಡಿಯುತ್ತಿವೆ
ತೂತು ಬಿದ್ದು..!!
ಸಂಘದ ಒತ್ತಡಕ್ಕೆ
ಜೋತು ಬಿದ್ದು….!!
ಸತ್ತವರು ಯಾರೆಂದು
ಕಣ್ಣಗಲಿಸಿ ನೋಡಿದರೆ
ಗಾಂಧಿ ಎದೆಗೆ ಗುಂಡಿಕ್ಕಿದ
ಹಾಳೆ ಹರಿದು ಹೋಗಿದೆ…..
ಅಣ್ಣ ಬಸವಣ್ಣನ ಅನುಭವ
ಮಂಟಪದ ಪುಟವಂತು
ಅಲ್ಲಮನ ಕಳೆದು ಕೊಂಡು
ತೇಗುಸಿರು ಬಿಡುತ್ತ
ತುರ್ತುನಿಗಾ ಘಟಕದ ಬಾಗಿಲಲ್ಲಿದೆ….!!
ಇತಿಹಾಸದ ಗೋರಿಯಲ್ಲಿ
ಹುಗಿದ ಪೆರಿಯಾರ
ನಾರಾಯಣರ ಲೆಕ್ಕಸಿಗದೆ
ಪುಟ್ಟ ಪುಟ ಬಿಕ್ಕಳಿಸಿದೆ…
ಅಲ್ಲೇ ಬಾರಯ್ಯ ಬಾರೋ ಎಂದು
ಮನೆಗೆ ಕರೆದ ಅರವಿಂದರ
ಬುದ್ಧನನ್ನು ಕೊಂದದ್ದು ಕಂಡು
ಕಂಗಳ ಬಿಳಿಯ ಹಾಳೆ
ಪಿಳಿ ಪಿಳಿ ಕಣ್ಣು ಬಿಡುತ್ತಿದೆ…
ಇಲ್ಲೇ ಶಾಲೆಯಂಗಳದಲ್ಲಿ
ಹಂತಕರೇ
ದೇಶ ಪ್ರೇಮದ ಹೆಸರ ಹೆಗ್ಗಳಿಕೆ
ಪಡೆದ ಪತ್ರಿಕೆಯ ಮುಖ ಪುಟ
ಅಂಗಾತ ಬಿದ್ದಿದೆ…!!
ಯಾವ ತೀರ್ಥ ಕುಡಿದರೇನು
ಮಾಡಿದ ಪಾಪ
ತೊಳೆದು ಹೋಗುವುದೇ….?
ಸಾಯುವುದೆಂದರೇನು
ಆತ್ಮ ಸಾಕ್ಷಿಯ ಕೊಂದುಕೊಂಡು
ಸಗಟು ಮಾರಾಟಕ್ಕಿರುವುದೇ…?
ಹೊಚ್ಚ ಹೊಸ ಹಾಳೆ ಬರೀ ಹುಂ
ಎಂದಿತು ಅಷ್ಟೇ…!!
ತಮ್ಮ ವೈಚಾರಿಕತೆಯ ಉತ್ತುಂಗದ ಬರಹಕ್ಕೆ ಧನ್ಯವಾದಗಳು.