ಕವಿತೆ ನನಗಿಷ್ಟ
ಚಂದ್ರಪ್ರಭ
ನನಗೆ ಹೀಗನಿಸುತ್ತದೆ….
ಕವಿತೆ ಬಗೆಗಿನ ಎಲ್ಲ ಆರಾಧನಾ ಭಾವಗಳಾಚೆ ಕವಿತೆ ಪುಸ್ತಕಗಳು ಅವಗಣನೆಗೆ ಒಳಗಾಗುವ ಸತ್ಯ ಬಹುಶಃ ಒಂದು ಕಾಲದ್ದಾಗಿಲ್ಲದಿರಬಹುದು. ಕವಿತೆ ಮೂಲತಃ ಒಂದು ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಅದರ ಹರಿವಿನಗುಂಟ ಸಾಗುವಾಗ ಕೇಳಿಸುವ ಮೊರೆತವೂ ವಿಭಿನ್ನ. ಕವಿತೆ ನನಗೇಕೆ ಇಷ್ಟ ಎಂದೆನ್ನಿಸಿದ ಕ್ಷಣ ನನಗೆ ಹೀಗೆಲ್ಲ ತೋರಿತು…
ಬಿಡುಗಡೆ ಗಾಗಿನ ಮನುಷ್ಯನ ಪ್ರಯತ್ನ ನಿರಂತರದ್ದು.
ಒಂದಿಲ್ಲೊಂದು ಸಂಗತಿಯಿಂದ ಬಿಡುಗಡೆ ಹೊಂದುತ್ತ
ಆಯುಷ್ಯವೇ ಕಳೆದು ಹೋಗುವುದು. ಯಾವುದರಿಂದ ಬಿಡುಗಡೆ, ಯಾರಿಂದ ಬಿಡುಗಡೆ, ಉಳಿದದ್ದು ಏನು, ಕಳಚಿಕೊಂಡದ್ದು ಏನನ್ನು ಎಂಬುದೆಲ್ಲ ಅಳವಿಗೆ ಸಿಗದೇ ಶೂನ್ಯತೆಯೊಂದು ಎದೆಯನ್ನು ಇರಿಯುವಾಗ.. ಎದೆಯಲ್ಲಿ ಉರಿಯುವಾಗ ಹನಿ ಹನಿ ಸಿಂಚನಗೈದು ಒಳಗಿನ ಆರ್ದ್ರತೆಯನ್ನು ಕಾಪಿಡುವ ಜೀವದಾಯಿನಿ ಕವಿತೆ.
ಬದುಕಿನ ಬಗೆಗೆ ಭರವಸೆ ಉಳಿಯಲು ಇಷ್ಟು ಸಾಕಲ್ಲವೆ.. ಎಂಬ ಭಾವ ಮೂಡಿಸುವ ಸಂಗಾತಿ ಕವಿತೆ.
ಹಿಂದೆಲ್ಲಾ ಎಷ್ಟು ನಿಧಾನವಾಗಿ ಬೆಳಗು ಆಗ್ತಿತ್ತು. ರಾತ್ರಿ ಕಳೆದು ಬೆಳಕಾಗುವಾಗ ಯುಗವೊಂದು ಸರಿದು ಹೋದ ಭಾವ ಮೂಡುವಷ್ಟು ನಿಧಾನ. ಬೆಳಕು ಹರಿದು ಮತ್ತೆ ಸಂಜೆಗತ್ತಲು ಕವಿಯುವಾಗಲೂ ಅಷ್ಟೇ, ಅಂದುಕೊಂಡ ಕೆಲಸಗಳೆಲ್ಲ ನೆರವೇರಿರುತ್ತಿದ್ದವು. ಈಗ ಹಾಗಿಲ್ಲ. ಓಡುತ್ತಿರುವುದು ಕಾಲುಗಳೊ ಕಾಲವೊ ಗೊತ್ತೇ ಆಗದ ವಿಚಿತ್ರ ಸನ್ನಿವೇಶ. ಸದಾ ಕಾಲವೂ ಮನಸ್ಸನ್ನು ಸತಾಯಿಸುವ ಎಂಥದೊ ಒಂದು ಪೀಡೆ, ಉದ್ವಿಗ್ನತೆ, ಅಶಾಂತಿ. ಯಾರಿಗೆ ಹೇಳಲಿ, ಏನು ಮಾಡಲಿ, ಹೊರಟುದೆಲ್ಲಿಗೆ, ದಾರಿ ಯಾವುದು ಎಂಬೆಲ್ಲ ಅಗಣಿತ ತುಂಡು ತುಂಡು ವಾಕ್ಯಗಳು.
ಸಂತೆಯ ಸದ್ದಡಗಿ ಮೌನದೊಳು ಜಾರಿದ ಹೊತ್ತು ಸದ್ದೇ ಇಲ್ಲದೆ ಅರಳುವ ಪರಿಮಳ ಹೊತ್ತ ಮೊಗ್ಗು ಕವಿತೆ..
ಅಕ್ಷರಗಳು ಪದಗಳಾಗಿ ಪದಗಳು ಸಾಲುಗಳಾಗುವ ತಾಂತ್ರಿಕತೆಯೆಲ್ಲ ಮುಗಿವಾಗ ಆಂತರ್ಯದ ಬೇಗುದಿ ಆವಿಯಾಗಿಯೊ ತೇವವಾಗಿಯೊ ಕರಗಿ ಹೋಗುವುದಿದೆಯಲ್ಲ ಅದು ಕವಿತೆಯ ಮೃದುವಾದ ಅಪ್ಪುಗೆ. ಹೀಗೆ ಹುಟ್ಟಿದ ಕವಿತೆ ಯಾರನ್ನೂ ಸೆಳೆಯಲಿಕ್ಕಿಲ್ಲ , ಅದನ್ನಾಲಿಸುವ ಕಿವಿಗಳು ಸಿಗಲಿಕ್ಕಿಲ್ಲ. ಆದರೆ ತನ್ನೊಡನೆ ಏಕಾಂತವನ್ನು ಹಂಚಿಕೊಂಡ ಜೀವದ ಮೊರೆಯನ್ನು ನಿಶ್ಶಬ್ದವಾಗಿ ಆಲಿಸುತ್ತದೆ ಈ ಕವಿತೆ. ಬದುಕಿಗೆ ಬಣ್ಣ ತುಂಬದಿದ್ದರೂ ಬಣ್ಣ ಬಣ್ಣದ ಲೋಕದಲ್ಲಿ ಬದುಕು ಸಹ್ಯವಾಗುವಂತೆ ಮಾಡುತ್ತದೆ ಇದೇ ಕವಿತೆ. ಚೌಕಟ್ಟುಗಳನ್ನು ದಾಟುವುದನ್ನು, ಎಲ್ಲೆಗಳನ್ನು ಮೀರುವುದನ್ನು ಕಲಿಸುತ್ತದೆ ಈ ಕವಿತೆ. ನಾನು ಕರಗಿದಂತೆಲ್ಲ ಹುಟ್ಟುವ ವಿನಯದಿಂದ ಎಲ್ಲರೂ ನನ್ನವರು, ಎಲ್ಲವೂ ನನ್ನದು ಎಂಬ ಸರಳ ಸತ್ಯವನ್ನು ನುಡಿಯದೇ ನುಡಿದು ಬಿಡುತ್ತದೆ ಈ ಕವಿತೆ. ಮನುಷ್ಯರನ್ನು ಪರಿಚಯಿಸಿ ಮನುಷ್ಯನಾಗುವ ದಾರಿ ತೆರೆಯುತ್ತದೆ ಈ ಕವಿತೆ. ಯಾರಿಗೂ ಬೇಡವಾಗಿ ಪುಸ್ತಕದಲ್ಲೇ ಉಳಿದು ಬಿಡುವಾಗಲೂ ಕರೆದಾಕ್ಷಣ ಬಂದು ಬಿಡುವ, ಒದ್ದೆ ರೆಪ್ಪೆಗಳ ತೇವ ಸವರುವ ಸಖ/ಸಖಿ ಈ ಕವಿತೆ. ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಲೇ ಸಾಗುವ ಸಹಪಥಿಕ ಕವಿತೆ. ಏನೊಂದನ್ನೂ ಮರು ನುಡಿಯದೆ ಬೆಳಗಿನ ಅರಿವಿನೆದುರು ಒಯ್ದು ನಿಲ್ಲಿಸಿ ಬಿಡುವ ಕವಿತೆ. ಮೌನ ಒಂದು ರಾಗವಾಗಿ, ಮೌನವೊಂದು ಗೀತೆಯಾಗಿ, ಮೌನ ಆಲಾಪವಾಗಿ ಮೌನವಾಗಿ ಬಿಡುವ ಆತ್ಮದ ಬೆಳಕು ಕವಿತೆ.
ಆದ್ದರಿಂದ ಕವಿತೆ ನನಗಿಷ್ಟ….
*********
ಚೆನ್ನಾಗಿದೆ ಕವಿತೆಯ ಕುರಿತು ನಿಮ್ಮ ಲೇಖನ ಮೆಡಮ್