ಅರಿವು

ಕಾವ್ಯ ಸಂಗಾತಿ

ಅರಿವು

ಎಂ.ಆರ್. ಅನಸೂಯ

Closeup of the edge of open book pages

ಹಾದಿಯನ್ನು ಸವೆಸುವುದೇ ಪಯಣವಲ್ಲ
ಗಮನಿಸುತ್ತ ಹಾದಿ ಬದಿಯ ನೋಟವನ್ನು
ಗುರಿ ಸೇರುವುದೆ ಪಯಣ

ಶಿಕ್ಷಣವೆಂದರೆ ಪದವಿಗಳ ಮೊತ್ತವಲ್ಲ
ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗುವ
ವೈಚಾರಿಕ ಅರಿವು ಪಡೆವುದೇ ಶಿಕ್ಷಣ

ಪೂಜೆಯೆಂದರೆ ಧೂಪ ದೀಪದಾರತಿಯಲ್ಲ
ಕಾಯಕವೇ ಕೈಲಾಸವೆಂದರಿತ ಭಾವದ
ಅರ್ಪಣಾ ದುಡಿಮೆಯೇ ಪೂಜೆ

ಪ್ರೀತಿಯೆಂದರೆ ನಿರೀಕ್ಷೆಗಳ ಅಗತ್ಯವಲ್ಲ
ತನುವಿನೊಳಗಿರುವ ಆತ್ಮದಂತೆ ಸಮರಸದ
ಬೆಚ್ಚನೆಯ ಭರವಸೆಯೇ ಪ್ರೀತಿ

ಸ್ನೇಹವೆಂದರೆ ಮಾತಿನ ಸಿಹಿ ಲೇಪನವಲ್ಲ
ಕಟುಸತ್ಯದ ನಿಷ್ಠುರತೆಯ ಕಹಿ ಮದ್ದಿನ
ಹಿತೈಷಿ ಭಾವದ ಕಳವಳವೇ ಸ್ನೇಹ

ಸಂತನೆಂದರೆ ಧ್ಯಾನದಿ ಕಣ್ಮುಚ್ಚಿ ಕುಳಿತವನಲ್ಲ
ನಿರಪೇಕ್ಷ ಸೇವೆಯಲಿ ಸದ್ದಿಲ್ಲದೆ ತೊಡಗಿ
ವನಸುಮದಂತೆ ಬದುಕಿದವನೇ ಸಂತ


One thought on “ಅರಿವು

  1. ಮಾನ್ಯ ಸಂಪಾದಕರೇ, ತಮ್ಮಲ್ಲಿ ಕವನಗಳನ್ನು ಮಾತ್ರ ಪ್ರಕಟಿಸುತ್ತೀರಾ ಅಥವಾ ಕಥೆಗಳನ್ನೂ ಪ್ರಕಟಿಸುತ್ತಿರಾ ಏಂಬುದು ನನಗೆ ದಯಮಾಡಿ ತಿಳಿಸುತ್ತೀರಾ. ಧನ್ಯವಾದಗಳೊಂದಿಗೆ; ಬಿ.ಟಿ.ನಾಯಕ್.

Leave a Reply

Back To Top