ಅಂಕಣ ಸಂಗಾತಿ

ಸಕಾಲ

ಸಂಬಂಧಗಳ ಸೂತ್ರ ನಮ್ಮ ಕೈಯಲ್ಲಿದೆ

Human Nature Paintings – Susan Cohen Thompson

ಇಂದಿನ ದಿನಗಳಲ್ಲಿ ಮನುಷ್ಯನ ಸಂಬಂಧಗಳು ಮರೀಚಿಕೆಯತ್ತ ಸಾಗುತ್ತಿದೆ.ಈ ಪರಿಸ್ಥಿತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.ನಿಸ್ವಾರ್ಥದ ಸೇವೆ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಬಹುದೆಂಬ ಸತ್ಯಅರ್ಥ ಮಾಡಿಕೊಳ್ಳಬೇಕಿದೆ. ಹಾಗಿದ್ದರೆ ಯಾರು ಅರ್ಥೈಸಬೇಕು? ಹೇಗೆ ಅರ್ಥೈಸಬೇಕು? ಇಟ್ಟರೆ ಸಗಣಿಯಾದೆ,ತಟ್ಟಿದರೆ ಕುಳ್ಳಾದೆ,ಸುಟ್ಟರೆ ನೊಸಲಿಗೆ ವಿಭೂತಿಯಾದೆ. ನೀ ಯಾರಿಗಾದೆಯೋ ಎಲೇ ಮಾನವ? ಹರಿಹರಿ ಗೋವು ನಾನು.ಎಂಬ ಹಾಡಿನಲ್ಲಿ  ಮನುಷ್ಯನು ಪ್ರಸ್ತುವಾಗಿ ಹೇಗೆ ಸಾಗುತ್ತಿದ್ದಾನೆ.ಅವನ ನಡೆ ಸ್ವಾರ್ಥದಿಂದ ನಿಸ್ವಾರ್ಥದ ಕಡೆಗೆ ಹೋಗುವುದು ಅನಿವಾರ್ಯತೆಯ ಸತ್ಯವೆಂದು ಗೋಚರಿಸುವುದು ಯಾವಾಗ?

ಮಾನವ ಇಂದು ಜಗತ್ತಿನ ಕೇಂದ್ರ ಬಿಂದು.ತನ್ನೆಲ್ಲ ವ್ಯವಹಾರಗಳನ್ನು ಜಗತ್ತಿನಾದ್ಯಂತ ವಿಸ್ತಿರಿಸಿ ತಾನೆ ಕಟ್ಟ ಕಡೆಯ ವೀರ ಯೋಧನೆಂಬ ಹೆಗ್ಗಳಿಕೆಯ ಪಟ್ಟ ಪಡೆಯಬೇಕೆಂಬ ಕನಸು.ಹಗಲು ರಾತ್ರಿ ಅವಿರತ ಶ್ರಮ ಪಡುತ್ತಿರುವ ಉದ್ದೇಶ ಒಳ್ಳೆಯದಾದರೂ, ಇನ್ನೊಂದೆಡೆ ಮಾನವ ಸಂಬಂಧಗಳು ಅವನತಿಯತ್ತ ಸಾಗುತ್ತಿವೆ. ಕುಟುಂಬಗಳಲ್ಲಿನ ಅವಿನಾಭವ ಸಂಬಂಧಗಳು ಅರ್ಥ ಕಳೆದುಕೊಂಡು, ಎಲ್ಲವೂ ತಾಂತ್ರಿಕ ಜಗತ್ತಿನ ಓಟಕ್ಕೆ ತಕ್ಕಂತೆ ಬದಲಾಗುತ್ತಿವೆ. ಎಲ್ಲಾ ಮಾನವೀಯ ಸಂಬಂಧಗಳ ಸ್ವಾಸ್ಥವು ವ್ಯಕ್ತಿ ವ್ಯಕ್ತಿಗಳ ನಡುವಿನ ಸದ್ಭಾವನೆಗಳನ್ನು ಅವಲಂಬಿಸಿವೆ ಎಂಬುದನ್ನು ಮರೆತು ಬಾಳುತ್ತಿದ್ದೆವೆ.

ಮಾಧ್ಯಮಗಳು ಸಂಬಂಧಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುವ  ಸುತ್ತಿಗೆ ಮನಸ್ಸು ಹೈರಾಣಾಗಿ ಬಿಡುತ್ತದೆ. “ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ, ಹಣಕ್ಕಾಗಿ ದಾಯಾದಿಗಳ ಜಗಳ, ಸೊಸೆಯನ್ನೇ ಅತ್ಯಾಚಾರ ಮಾಡಿದ ಮಾವ, ಪ್ರಿಯಕರನ ನೆರವಿನಿಂದ ಗಂಡನನ್ನೇ ಹತ್ಯೆಗೈದ ಹೆಂಡತಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿತ್ತೆಂದು ಮಗುವನ್ನು ಸಾಯಿಸಿದ ಅಪ್ಪ.ಹೆಂಡತಿಯನ್ನು ನಂಬಿಸಿ ಕತ್ತುಕೊಯ್ದ ಪತಿ, ದುಡ್ಡಿನಾಸೆಗೆ ಸ್ನೇಹಿತನನ್ನೇ ಬಲಿಕೊಟ್ಟ ಮತ್ತೊಬ್ಬ ಸ್ನೇಹಿತ” ಹೀಗೆ ನಾನಾ ಥರದ ಸುದ್ದಿಗಳು ನಮ್ಮ ಕಣ್ಣ ಮುಂದೆ  ಹಾದು ಹೋಗುತ್ತವೆ. ಬದುಕಿನ ಅಮೃತ ಕ್ಷಣಗಳಿಗೆ ಸಾಕ್ಷಿಯಾಗಬೇಕಾದ ದಾಂಪತ್ಯ ಸಂಬಂಧಗಳು ಇಂದು ಅವರೇ ಬದುಕಿಗೆ ಕೊಳ್ಳಿ ಇಟ್ಟು ಅವಸಾನದತ್ತ ಸಾಗಲು ದಾರಿ ಮಾಡಿ ಕೊಡುತ್ತಿರುವುದು ದುರಂತ.ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಸರಿ ಎಂದು ಸಾಬೀತುಗೊಳಿಸಲು ವಾದಕ್ಕಿಳಿದು ಈ ವಾದಗಳ ಮೂಲಕ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮಾಡುವ ವಾದ,ಅಂತರ ಸತ್ವವನ್ನು ನಾಶಗೊಳಿಸಿ ಗೆದ್ದರೆ ಅದು  ಗೆಲುವೇ? ಬದಲಿಗೆ ವಾದಗಳು ಪರಸ್ಪರ ನಡೆಯದಂತೆ ತಡೆದರೆ ಅದೇ ನಿಜವಾದ ಗೆಲುವಲ್ಲವೇ

ಹಾಗಾದರೆ ಸಂಬಂಧಗಳೆಂದರೇನು?  ಹೇಗಿರಬೇಕು? ಆ ಸಂಬಂಧಗಳನ್ನು ಹೇಗೆ ಉಳಿಸಿ,ಬೆಳೆಸಿಕೊಂಡು ಹೋಗಬೇಕು ಎಂಬುದರ ಬಗ್ಗೆ  ಚಿಂತಿಸುವವರು ಸಾಕಷ್ಟಿದ್ದಾರೆ.ಆದರೆ ಇಲ್ಲಿಯವರೆಗೆ ಪ್ರಪಂಚದಲ್ಲಿ ರಚನೆಯಾಗಿರುವ ಹಲವಾರು ವಿಧದ ಸಾಹಿತ್ಯ ಪ್ರಕಾರದ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಮಹಾಕಾವ್ಯಗಳಲ್ಲಿ ಸಂಬಂಧಗಳ ಬಗ್ಗೆ ವಿವಿಧ ಸನ್ನಿವೇಶದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದ್ದು, ಯಾವುದೇ ಫಲಾಪೇಕ್ಷೆಯಿಲ್ಲದ ನಿಷ್ಕಲ್ಮಶ ಸಂಬಂಧ ಹೇಗಿರಬೇಕು ಎಂಬುದನ್ನು ಅರಿಯಬೇಕಾದರೆ ಶ್ರೀಕೃಷ್ಣ-ಸುಧಾಮರ ಸ್ನೇಹ,ಗೆಳೆತನ ಹಾಗೂ ಅವರೊಟ್ಟಿಗೆ ಬೆಳೆದು ಬಂದ ಅಗಾಧ ಸಂಬಂಧ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ

Human Nature Paintings – Susan Cohen Thompson

ಕರ್ಣ ದುರ್ಯೋಧನ ಪ್ರಾಣದ ಸ್ನೇಹಿತನೆಂದೇ ತಿಳಿದಿದ್ದರೂ ಕರ್ಣ ಮಾತ್ರ ದುರ್ಯೋಧನನನ್ನು ತನ್ನ ಸ್ವಾಮಿಯಂತೆಯೇ ಕಂಡವ. ಕೊನೆಗೆ ತನ್ನ ಸ್ವಾಮಿಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ಸ್ವಾಮಿನಿಷ್ಠೆ ಜಗತ್ತಿಗೇ ನಿದರ್ಶನವಾಯಿತು.ಹೀಗೆ ಹೇಳುತ್ತಾ ಹೋದರೆ ಉದಾಹರಣೆಗೆ ಮಿತಿಯಿಲ್ಲ. ಆದರೆ ವಾಸ್ತವ ಮಹಾಕಾವ್ಯ,ಉಪನಿಷತ್ತು,ದೃಷ್ಟಾಂತಗಳು,ನೈಜ ಘಟನೆಗಳ ಮೂಲಕ ಬದುಕಿನ ಔನ್ನತ್ಯವನ್ನು ತಲುಪುವಂಥ ದಾರಿಯನ್ನು ಅರ್ಥಮಾಡಿಕೊಂಡರೆ ತಾನೆ, ಉತ್ತಮ ಸತ್ವಯುತವಾಗಿ,ಬದುಕಿ ಬಾಳುವಂಥ ಆರೋಗ್ಯಪೂರ್ಣ ಬದುಕು ನಮ್ಮದಾಗಲು ಸಾಧ್ಯ. ಮಾನವ ಸಂಬಂಧಗಳು ಅಳಿಯದೇ  ಶ್ರೇಯೋಭಿವೃದ್ಧಿಗೆ ಕಾರಣವಾಗುವಂತ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನ ಪಡುವ ಮನೋಭಾವಗಳು ಹಲವಾರು ಬಾರಿ ಹತ್ತಿರ ಬಂದು ದೂರವಾಗುತ್ತಿವೆ.

ಮನುಷ್ಯನ ಸಹಜ ಗುಣಗಳಾದ ಸರಸ,ವಿರಸ,ಸ್ನೇಹ, ಪ್ರೀತಿಗಳಲ್ಲೆವೂ ಸೇರಿ ಯಾವ ಸಂಬಂಧವನ್ನೂ ನಿಷ್ಕಲ್ಮಶವಾಗಿರಲು ಬಿಡುವುದಿಲ್ಲ. ನಮ್ಮ ನಡೆ, ನುಡಿ, ಪರಿಸ್ಥಿತಿಗಳ ಮೇಲೆ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತಲೇ ಇವೆ. ಇದಕ್ಕೆ ಕಾರಣಗಳು ಸಾವಿರ.ಅದರ ನಡುವೆ ಸಂಬಂಧಗಳು ಕೆಡದಂತೆ ನೋಡಿಕೊಳ್ಳೊದು ಪ್ರತಿಯೊಬ್ಬರ ಕರ್ತವ್ಯ,ಜವಾಬ್ದಾರಿ ಕೂಡ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಸುಂದರವಾದ ಬದುಕು.ಇಲ್ಲವಾದರೆ ಯಾರು ನೆಮ್ಮದಿಯಾಗಿ ಬದುಕಲು‌ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಬಂಧಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾದರೆ ಏನು ಮಾಡಬೇಕು ಎನ್ನುವ ಈ ಅಂಶಗಳನ್ನು ಮರೆಯಬಾರದು.

 ಸಮಸ್ಯೆಯ ಮೂಲ.

ಸಂಬಂಧ ಇದ್ದಷ್ಟು ಗಳಿಗೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಬಹುತೇಕ ಕಷ್ಟ. ಮನುಷ್ಯ ಹುಟ್ಟಿನಿಂದಲೇ ಅಪೂರ್ಣ ಎಲ್ಲರೂ ಒಂದಲ್ಲ ಒಂದು ಕಾರಣಕ್ಕಾಗಿ ತಪ್ಪು ಮಾಡುತ್ತಾರೆ.ತಪ್ಪುಂಟಾಗಲು ಕಾರಣ ಹಾಗೂ ಸಮಸ್ಯೆಯ ಮೂಲವನ್ನು ಮೊದಲು ಅರಿಯಬೇಕು.ಆಗ ಸಂಬಂಧಗಳಲ್ಲಿ ದೊಡ್ಡ ಬಿರುಕು ಉಂಟಾಗುವುದಿಲ್ಲ. ತಾಳ್ಮೆಯಿಂದ ತಪ್ಪುಗಳ ಮೂಲ ಅರಿತು ಅದನು ಸರಿಪಡಿಸುವ ಗುಣ ಬೆಳೆಸಿಕೊಂಡಾಗ ಸಮಸ್ಯೆ ಜಟಿಲವಾಗದೇ ಸರಳವಾದಿತು.

ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ

ಕಟ್ಟಿ ಕೊಟ್ಟ ಬುತ್ತಿ,ಹೇಳಿಕೊಟ್ಟ ಮಾತು ಬಹಳ ದಿನ ಬಾಳಿಕೆಗೆ ಬರದು.ಸುಳ್ಳಿನ‌ ಆಯಸ್ಸು ಅಲ್ಪ.ಕ್ಷಣಿಕ ಹಾಗೂ ಮುಚ್ಚಿಟ್ಟ ಸತ್ಯ ಒಂದಲ್ಲ ಒಂದು ದಿನ ಗೋಚರವಾಗುವುದರಿಂದ ಬದುಕು ಇನ್ನೂ ನರಕವೇ

ಸತ್ಯವೇ ಕೊನೆಗೆ ಗೆಲ್ಲುವುದು.ಕೆಲವು ವೇಳೆ ಸಂಬಂಧ ಉಳಿದುಕೊಳ್ಳಲು,ಬೆಸೆಯಲು ಸುಳ್ಳನ್ನೂ ಹೇಳಬೇಕಾಗುತ್ತದೆ. ನಮ್ಮ ಹಿರಿಯರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದಿದ್ದಾರೆ. ಕೆಲವು ವೇಳೆ ಅನಿವಾರ್ಯತೆಯ ಸುಳಿಗೆ ಸಿಲುಕಿ ಸುಳ್ಳನ್ನು ಹೇಳಬೇಕಾಗುತ್ತದೆ.ಸಂಬಂಧವೇ ಬೀಳುತ್ತಿದೆ ಎನ್ನುವ ಅನಿವಾರ್ಯ ವೇಳೆಯಲ್ಲಿ ಅದನ್ನು ಉಳಿಸಿಕೊಳ್ಳಲು ಸುಳ್ಳು ಸಹಾಯ ಮಾಡುತ್ತದೆ.ಇದನ್ನು ಕೊನೆಯವರೆಗೂ ಮುಚ್ಚಿಟ್ಟುಕೊಳ್ಳಬಾರದು. ಸರಿಯಾದ ಸಮಯದಲ್ಲಿ ನಾವು ಹೇಳಿದ ಸುಳ್ಳನ್ನು ತಿಳಿಸಿಬಿಡಬೇಕು.ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ.ಇಲ್ಲವಾದರೆ ಸಂಬಂಧ ಇನ್ನಾವುದೋ ತಿರುವಿಗೆ ಕಾರಣವಾಗಿ ಮುರಿದು ಬೀಳುವ ಹಂತಕ್ಕೆ ತಲುಪಲು ಸುಳ್ಳು ಕಾರಣವಾಗುತ್ತದೆ.

ಇದ್ದಿದ್ದರಲ್ಲೆ ಸಂತೃಪ್ತಿ ಕಾಣಬೇಕು

ಹಲವಾರು ಸಂದರ್ಭದಲ್ಲಿ ನಮಗೆ ಇಷ್ಟವಿಲ್ಲದೆ ಅಥವಾ ಮತ್ತೊಬ್ಬರ ಅನಿವಾರ್ಯತೆಗಾಗಿ ತಮ್ಮ ಅಮೂಲ್ಯ ಲಕ್ಷಣಗಳನ್ನು ಕಳೆಯಬೇಕಾದ ಪರಿಸ್ಥಿತಿ ಬಂದಾಗ,ಅದು ಜೀವನ ನಿರ್ವಹಣೆಗಾಗಿ ಇರಬಹುದು, ಮತ್ಯಾವುದೋ ಕಾರಣಕ್ಕೂ ಆಗಿರಬಹುದು. ಆದರೆ ಇಲ್ಲಿ ಕೇವಲ ಒದ್ದಾಟವೇ ಇರುತ್ತದೆ ಹೊರತು ಮತ್ತೇನೂ ಇರುವುದಿಲ್ಲ ನೆಮ್ಮದಿಯಿಲ್ಲದ  ಬಾಳ ಬಾಳೆ? ಇಂತಹ ಸ್ಥಿತಿಯಲ್ಲಿ ಸಂಬಂಧಗಳು ಅರಳಲು ಸಾಧ್ಯವೇ ಇಲ್ಲ. ಹಾಗಾಗಿ ಇಂತಹ ಸಂದಿಗ್ಧ ದಿಂದ ಹೊರ ಬರಬೇಕು. ಸ್ವಾಸ್ಥ್ಯ ಸಮೃದ್ದ ಬದುಕಿಗೆ ತಮ್ಮವರನ್ನು ಬಲಿಕೊಡದೆ ಸತ್ಯದ ಆಧಾರದ ಮೇಲೆ ಬದುಕ ಕಟ್ಟಬೇಕು.

ಯಾರು ಹೆಚ್ಚಲ್ಲ/ಕಡಿಮೆಯಲ್ಲ

ಸಂಬಂಧಗಳು ಎರಡು ಚಕ್ರಗಳ ಬಂಡಿ ಇದ್ದ ಹಾಗೆ. ಇದರಲ್ಲಿ ಯಾರೊಬ್ಬರೂ ಮೇಲಲ್ಲ, ಕೀಳಲ್ಲ. ಹಾಗಾಗಿ ಎಲ್ಲಿಯೂ ಬಲವಂತವಾಗಿ ತನ್ನ ವಿಚಾರಗಳನ್ನು ಹೇರುವ ಪ್ರಯತ್ನ ಮಾಡಬಾರದು.ಹಾಗೂ ಎಲ್ಲ‌ ತನ್ನಿಂದಲೇ ಎಂಬ ಅಹಂ ಬೆಳೆಸಿಕೊಳ್ಳಬಾರದು.ಪ್ರೀತಿ ನಂಬಿಕೆ,ವಿಶ್ವಾಸಗಳಿಗೆ ದ್ರೋಹವಾಗದಂತೆ ಪರಸ್ಪರ ಮುಚ್ಚುಮರೆಯಿಲ್ಲದೆ ಒಬ್ಬರಿಗೊಬ್ಬರು ಸೂತ್ರದ ಬೊಂಬೆಯಂತೆ ಎಲ್ಲವನ್ನೂ ಕೇಳುತ್ತಾ,ಹೇಳುತ್ತಾ ಹೋದರೆ ಅದು ಸಂಬಂಧವನ್ನು ದೀರ್ಘಕಾಲದ ವರೆಗೆ ಉಳಿಸುವುದು.ಇಲ್ಲವಾದರೆ ಮಾನಸಿಕ ಖಿನ್ನತೆಗೆ ಒಳಗಾಗಿ ಸಂಬಂಧದ ರಥ ಕುಂಟುವುದು.

ಮೋಸ,ವಂಚನೆಗೆ ಅವಕಾಶವಿಲ್ಲ

ಸಂಬಂಧಗಳು ಹೆಚ್ಚಿನ ವೇಳೆಯಲ್ಲಿ ದೂರವಾಗುವುದೇ ಈ ಮೋಸದಿಂದ. ಎಲ್ಲ ಸಂಬಂಧಗಳು ಮೊದಲಿಗೆ ಹುಟ್ಟುವುದು ನಂಬಿಕೆಯ ನೆಲೆಯಲ್ಲಿ.ಕುರುಡರಂತೆ ನಂಬುವ ಸಂಬಂಧ ಕೊನೆಯಾಗುವುದು ಮೋಸದ ಬಲೆಯಲ್ಲಿ. ನಂಬಿಕೆಗೆ ಸಂಬಂಧ ಕಟ್ಟುವ ಗುಣವಿದ್ದರೆ ಮೋಸಕ್ಕೆ,ವಂಚನೆಗೆ ಅದನ್ನು ಮುರಿಯುವ ಗುಣವಿದೆ.ಹೀಗಾಗಿ ನಂಬಿದವರಿಗೆ ಮೋಸಮಾಡಿ ಬದುಕುವ ಗುಣದಿಂದ ದೂರವಾದಷ್ಟು ಬದುಕು ಹಸನಾಗುತ್ತದೆ.

ನೋವು ನಲಿವಲ್ಲಿ ಸಮಾನರು

ಪ್ರತಿಯೊಂದು ಕ್ಷಣಗಳಲ್ಲಿಯೂ ಸಹಭಾಗಿತ್ವ ಅತಿ ಮುಖ್ಯ.ನೋವು-ನಲಿವುಗಳಲ್ಲಿ ಜೊತೆಯಾದವರು ಮಾತ್ರ ಒಳ್ಳೆಯ ವ್ಯಕ್ತಿತ್ವ ಹೊಂದಲು ಸಾಧ್ಯ. ಪ್ರತಿ ಹೆಜ್ಜೆಯಲ್ಲೂ ಜೊತೆಗೆ ಸಾಗಿದಾಗ ಮಾತ್ರ ಬದುಕು ಸುಂದರ. ಸಂಬಂಧ ಕೂಡ ಸೊಗಸು.

ಅಂತರಂಗ ಅರಿತಾಗಲೇ ಸುಖ

ಪ್ರತಿ ವಿಚಾರದಲ್ಲಿ ಎಲ್ಲ ಸಮಯದಲ್ಲೂ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದಲ್ಲ. ಕೆಲಸಗಳ ನಡುವಲ್ಲಿಯೂ ನಮ್ಮವರಿಗಾಗಿ ಮೀಸಲಿಡಬೇಕಾದ ಸಮಯವನ್ನು ನೀಡಲೇಬೇಕು. ಚಿಕ್ಕ ಚಿಕ್ಕ ಸಂಗತಿಗಳಲ್ಲೂ ಜೊತೆಯಾಗಿ ಪಾಲುದಾರರಾಗಬೇಕು. ಆಗ ಮಾತ್ರ ದೀರ್ಘಕಾಲದವರೆಗೂ ಉಳಿಯ ಬಹುದಾದ ನೆನಪುಗಳು ಅರಳಲು ಸಾಧ್ಯ.ಅಂತರಂಗ ಅರಿತಾಗಲೇ ಸುಖ.

ಪ್ರೀತಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲ..

ಇಂದು ಸೋಶಿಯಲ್ ಮೀಡಿಯಾದ್ದೆ ಜಮಾನ. ಇಲ್ಲಿ ಎಲ್ಲವೂ ಫೇಸ್ ಬುಕ್, ವಾಟ್ಸಪ್, ಮೆಸೆಂಜರ್‌ಗಳಲ್ಲಿ ನಡೆದುಹೋಗುತ್ತದೆ. ಆದರೆ ಇದು ಸಂಬಂಧಗಳಿಗೂ ಅನ್ವಯವಾಗಬಾರದು. ಕೇವಲ ವಾಟ್ಸಪ್‌ನಲ್ಲಿ ಗಂಟೆಗಟ್ಟಲೆ ಮೆಸೇಜ್ ಮಾಡಿ, ಫೋನ್‌ನಲ್ಲಿ ಮಾತನಾಡಿದರೆ ಸಂಬಂಧ ಬೆಳೆಯುವುದಿಲ್ಲ.ಯಾರು ಯಾರನ್ನಾದರೂ ಯಾಮಾರಿಸಬಹುದು.ಸಂಬಂಧ ಗಳಿಗೆ ಕೊಳ್ಳಿಯಿಡುವ ನಾಯಿಕೊಡೆಗಳು ಹುಟ್ಟಿ ಕೊಂಡು ಸಂಬಂಧ ಹಳಸಲುಬಹುದು‌.ಪಾವಿತ್ರ್ಯತೆ ಕಾಯ್ದು ಕೊಳ್ಳದ ಪ್ರೀತಿ ಕೊಳೆತು ಹೋಗಬಹುದು. ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕೋ ಅಷ್ಟು ಕೊಟ್ಟರೆ ಒಳಿತು.

ಒಟ್ಟಾರೆ ಹೇಳುವುದಾದರೆ ಸಂಬಂಧ ನಿಂತಿರುವುದು ನಂಬಿಕೆಯ ಮೇಲೆ. ಅದನು ಹಾಳುಗೆಡವಿ,ಕದ್ದು ಮುಚ್ಚಿ,ಒಳ್ಳೆಯತನದ ದುರುಪಯೋಗ, ನಯವಂಚನೆಯಿಂದ,ಇನ್ನೊಬ್ಬರ ನೆಮ್ಮದಿ ಹಾಳು ಮಾಡಿ ತಮಗೇನು ಸಂಬಂಧವಿಲ್ಲವೆಂದು ಬೀಗುವ ವಿಕೃತ ಮನಸ್ಸುಳ್ಳ ಸಂಬಂಧಗಳ ಆಯಸ್ಸು ಅಲ್ಪ.ಸುಳ್ಳಿನ ಪರದೆ ಸರಿದು,ಸತ್ಯ ಪ್ರಖರವಾದಾಗ,  ಜೊಳ್ಳು ಹಾರಿ, ನಂಬಿಕೆ,ವಿಶ್ವಾಸ, ಪ್ರಾಮಾಣಿಕ, ಪರಿಶುದ್ಧ ಪ್ರೀತಿ ಮಾತ್ರ ಹಣತೆಯಲ್ಲಿ ಬೆಳಗುತ್ತಿರುತ್ತದೆ.ಅದೇ ಸಂಬಂಧದ ಭದ್ರ ಬುನಾದಿ…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

11 thoughts on “

  1. ತುಂಬಾ ಚೆನ್ನಾಗಿದೆ ಅಕ್ಕ ನೀವು ಹೇಳಿರುವ ಒಂದೊಂದು ಮಾತು ನಿಜ

  2. ಸಹೋದರಿ ಕವಯಿತ್ರಿ ಶಿವಲೀಲಾ ಅವರ ಸಾಹಿತ್ಯ ಪ್ರಜ್ಞೆಯ ಪ್ರಖರ ಬರಹವು,ಬಹು ಆಪ್ತವಾಗಿದೆ.ಮಾನವೀಯ ಸಂಬಂಧಗಳ ಬದುಕಿನ ಔನ್ಯತೆಗಳನು ನೆನಪಿಸುವ ಮಾದರಿಯಾಗಿದೆ.
    ಈಗಿನ ದಿನಮಾನಗಳಲ್ಲಿ ಕೇವಲ ವಾಟ್ಸಾಫ್ ಮತ್ತು ಫೇಸ್ ಬುಕ್ ನಲ್ಲಿ ಲೇಖನವು ಚೆಂದವಿದೆ,ಉತ್ತಮವಿದೆ.,ಎಂದರೆ ಸಾಲದು.ಮನುಕುಲದ ಅಂತರಾತ್ಮಕೆ ದಕ್ಕುವ ಪ್ರೇರಣೆ ಏನು ಎಂಬುದನು ಗಮನಿಸಿ,ನಮ್ಮತನದ ವ್ಯಕ್ತಿತ್ವವನು ಬದುಕಿನಲಿ ರೂಡಿಸಿಕೊಂಡರೆ,ಲೇಖನದ ವಿಷಯ ವಸ್ತು ಗೆಲುವಾಗುತ್ತದೆ.ಕವಯಿತ್ರಿ ಸಹೋದರಿಯವರು ಅತ್ಯಂತ ಸೊಗಸಾಗಿ ಲೇಖನ ನೀಡಿದ್ದಾರೆ

  3. ವಿವಿಧ ಆಯಾಮಗಳಲ್ಲಿ ಮಾನವ ಸಂಬಂಧಗಳ ಚಿತ್ರಣಗಳು,ಪೌರಾಣಿಕ,ಲೌಕಿಕ ಬದುಕಿನೊಂದಿಗೆ ತಳಕು ಹಾಕಿದ ಪರಿ ಸೊಗಸಾಗಿದೆ.

  4. ಅರ್ಥಪೂರ್ಣವಾದ ನೀತಿಯುತ ಉತ್ತಮವಾದ ಲೇಖನ ಡಿಯರ್ ಅಭಿನಂದನೆಗಳು

  5. ತುಂಬಾ ಚೆನ್ನಾಗಿದೆ.ಪ್ರಸ್ತುತ ವಿದ್ಯಮಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಅಂತರಂಗ ವನ್ನು ಮುಟ್ಟುತ್ತೆ,, ಉತ್ತಮ ಗುಣಮಟ್ಟದ ಬದಲಾವಣೆ ಕಾಣಲು ಸ್ಪೂರ್ತಿ ಆಗುತ್ತೆ ರೀ ಮೇಡಂ

Leave a Reply

Back To Top